ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಬಿಜೆಪಿಗೆ ಬಿಎಸ್‌ವೈ ವರಿಷ್ಠರ ತೀರ್ಮಾನ'

Mainashree
Updated On : 3 Jan 2014, 11:10 am

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ಸೇತರ ಮತಗಳ ಒಟ್ಟುಗೂಡಿಸುವ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ವಾಪಸ್ ಕರೆ ತಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು. ಶುಕ್ರವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ವಿರುದ್ಧ ಆರೋಪ ಕೇಳಿ ಬಂದಿವೆಯೇ ಹೊರತು ಸಾಬೀತಾಗಿಲ್ಲ. ಆದರೂ ಆರೋಪ ಇದ್ದ ಮೇಲೆ ಸ್ಥಾನದಲ್ಲಿ ಇರಬಾರದು ಎಂಬ ಉದ್ದೇಶದಿಂದ ಪಕ್ಷದ ವರಿಷ್ಠರು ಆಗ ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಂಡಿದ್ದರು. ಈಗ ಪಕ್ಷದ ನಾಯಕರೇ ತೀರ್ಮಾನ ತೆಗೆದುಕೊಂಡಿದ್ದು ನಾವೆಲ್ಲ ಅದಕ್ಕೆ ಬದ್ಧವಾಗಿದ್ದೇವೆ ಎಂದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷದಲ್ಲಿದ್ದ ಕೊಳಕುಗಳು ಹೊರಗೆ ಹೋಗಿವೆ ಎನ್ನುತ್ತಿದ್ದ ನೀವು ಹೇಗೆ ಸೇರಿಸಿಕೊಂಡಿರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜೋಶಿ, ಹೌದು ಆಗಿನ ಸಂದರ್ಭದಲ್ಲಿ ಆ ರೀತಿ ಅಂದಿದ್ದು ನಿಜ. ಆದರೆ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜಿನಾಮೆ ನೀಡಿ ಎಂದು ನಾವು ಕೇಳಿರಲಿಲ್ಲ. ಈಗ ಮೋದಿ ಅವರನ್ನು ಗೆಲ್ಲಿಸುವ ಸಲುವಾಗಿ ಯಡಿಯೂರಪ್ಪ ಅವರನ್ನು ಕರೆ ತಂದಿದ್ದೇವೆ. ಪಕ್ಷ ಬಿಟ್ಟು ಹೋಗಿರುವ ಮತ್ತೊಬ್ಬ ನಾಯಕ ಶ್ರೀರಾಮುಲು ಜತೆ ಮಾತುಕತೆ ಮುಂದುವರಿದಿದೆ ಎಂದರು.

20ಕ್ಕೆ ಬಿಜೆಪಿ ಮೊದಲ ಪಟ್ಟಿ
2014ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಅದರ ಭಾಗವಾಗಿ ಮೊದಲ ಪಟ್ಟಿಯನ್ನು ಜ.20ರಂದು ಬಿಡುಗಡೆಗೊಳಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದರು. ಈ ಸಂಬಂಧ ಜ.9 ಮತ್ತು 10ರಂದು ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ.
ಅಂದು ಪದಾಧಿಕಾರಿಗಳ ಅಭಿಪ್ರಾಯ ಪಡೆದು ಜ.20ರಂದು ಪಟ್ಟಿ ಬಿಡುಗಡೆಗೊಳಿಸಲಾಗುವುದು. ಜ.15ರಿಂದ 30ರವರೆಗೆ ಮನೆ ಮನೆಗೆ ಬಿಜೆಪಿ ಅಭಿಯಾನ ಹಮ್ಮಿಕೊಂಡು ಕೇಂದ್ರ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ವಾಜಪೇಯಿ ಸರ್ಕಾರದ ಸಾಧನೆ, ಮೋದಿ ಅವರ ಆಡಳಿತ ಬಗ್ಗೆಯೂ ತಿಳಿಸಲಾಗುವುದು ಎಂದರು.
ಇಟ್ಟಿಗೆಗಳು ಸೇಫ್ ಆಗಿವೆ: ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಮನೆಗೊಂದು ಇಟ್ಟಿಗೆ, ಮನಸ್ಸಿಗೆ ಬಂದಷ್ಟು ಹಣ ಅಭಿಯಾನ ನಡೆಸಿ ಸಂಗ್ರಹಿಸಿದ್ದ ಇಟ್ಟಿಗೆಗಳು ಸೂಕ್ತ ಸ್ಥಳದಲ್ಲಿ ಭದ್ರವಾಗಿವೆ. ಈ ಸಾರಿ ಮತದಾರರಿಂದಲೇ ನಿಧಿ ಸಂಗ್ರಹಿಸುವ ಅಭಿಯಾನವನ್ನು ಫೆ.1ರಿಂದ 28ರವರೆಗೆ ಹಮ್ಮಿಕೊಳ್ಳಲಾಗುವುದು. ಜತೆಗೆ ರಾಜ್ಯದಲ್ಲಿ ಇನ್ನೂ ಎರಡು- ಮೂರು ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement