ಮಾರಕ ರೋಗಕ್ಕೆ ಪರಿಣಾಮಕಾರಿ ಔಷಧ ಪತ್ತೆ ಹಚ್ಚಿ
ಕ.ಪ್ರ.ವಾರ್ತೆ ಮೈಸೂರು ಜ. 3
ಕ್ಯಾನ್ಸರ್ ಮುಂತಾದ ಮಾರಕ ರೋಗಗಳಿಗೆ ಪರಿಣಾಮಕಾರಿ ಔಷಧ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಸಾಯನಶಾಸ್ತ್ರಜ್ಞರು ಕಾರ್ಯಪ್ರವೃತ್ತರಾಗಬೇಕು ಎಂದು ಅಮೆರಿಕದ ಮೆಸ್ಸಿಸ್ಸಿಪ್ಪಿ ವಿವಿಯ ಪ್ರೊ.ಕೆ.ಎನ್. ತಿಮ್ಮಯ್ಯ ಹೇಳಿದರು.
ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿರುವ ರಾಸಾಯನ ಸಂಶೋಧನೆಯಲ್ಲಿ ಇತ್ತೀಚಿನ ಶೈಲಿಗಳು ಕುರಿತ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಕ್ಯಾನ್ಸರ್ನಂಥ ಮಾರಕ ರೋಗಕ್ಕೆ ಈಗ ಬಳಕೆಯಲ್ಲಿರುವ ಔಷಧ ಹೆಚ್ಚು ಪರಿಣಾಮ ಬೀರುವುದಿಲ್ಲ. ಬದಲಿಗೆ ನಿಯಂತ್ರಣದ ಕೆಲಸವನ್ನಷ್ಟೆ ಮಾಡುತ್ತದೆ. ಮತ್ತೆ ಕೆಲವು ಔಷಧಗಳು ಸಾಮಾನ್ಯ ಜನರ ಕೈಗೆಟುಕದಷ್ಟು ದುಬಾರಿಯಾಗಿದೆ. ಆದ್ದರಿಂದ ಹೊಸ ಹೊಸ ಸಂಶೋಧನೆಯೊಂದಿಗೆ ಪರಿಹಾರ ಕಂಡುಕೊಳ್ಳಬೇಕು. ಹಿಂದೆ ಸಂಶೋಧನೆಗೆ ಸರ್ಕಾರ ಹೆಚ್ಚು ಧನಸಹಾಯ ನೀಡುತ್ತಿರಲಿಲ್ಲ. ಆದರೆ ಈಗ ಅಗತ್ಯವಿರುವ ಅನುದಾನವನ್ನು ಸರ್ಕಾರಗಳು ನೀಡುತ್ತಿವೆ. ಇದನ್ನು ಸಂಶೋಧಕರು ಸದುಪಯೋಗಪಡಿಸಿಕೊಳ್ಳಬೇಕು. ತಮ್ಮ ಸಂಶೋಧನೆಯಲ್ಲಿ ಪದವಿ ವಿದ್ಯಾರ್ಥಿಗಳನ್ನೂ ಒಳಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಜ್ಞಾನದ ಬಗ್ಗೆ ಆಸಕ್ತಿ: ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಹೆಚ್ಚು ಭಾಗವಹಿಸುವುದರಿಂದ ಮಕ್ಕಳಲ್ಲಿ ವಿಜ್ಞಾನದ ಬಗೆಗೆ ಆಸಕ್ತಿ ಹೆಚ್ಚುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ದ್ವಿತೀಯ ಮಹಾಯುದ್ಧದ ಬಳಿಕ ಮನುಷ್ಯನ ಜೀವನ ಶೈಲಿ ಮತ್ತು ಪರಿಸರದಲ್ಲಿ ಬಹುದೊಡ್ಡ ಬದಲಾವಣೆ ಆಗಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.
ಪ್ರೊ.ಬಿ.ಜಿ. ಸಂಗಮೇಶ್ವರ, ಡಾ. ಸೈಯದ್ ಶಕೀಬ್ ಉರ್ ರೆಹಮಾನ್, ಡಾ.ಬಿ. ಶಿವಮೂರ್ತಿ, ಡಾ.ಜಿ.ಎಂ. ಶಶಿಧರ, ಪ್ರೊ.ಪಿ.ಮಲ್ಲು ಇದ್ದರು.