ಸುದ್ದಿ ಸಂಕ್ಷೇಪ
6 ರಂದು ಕಬ್ಬು ಬೆಳೆಗಾರರ ಸಭೆ
ಮೈಸೂರು: ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಚಳವಳಿ ರೂಪಿಸಲು ಜ.6ರ ಬೆಳಗ್ಗೆ 11ಕ್ಕೆ ಗನ್‌ಹೌಸ್ ಬಳಿಯ ಸಂಘದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ರೈತರ ಸಭೆ ಕರೆಯಲಾಗಿದೆ. ದಕ್ಷಿಣ ಭಾಗದ 12 ಕಾರ್ಖಾನೆಗಳಿಗೆ ಕಬ್ಬು ಕಟಾವು, ಸಾಗಣೆ ವೆಚ್ಚವನ್ನು ರೈತರೆ ಭರಿಸಬೇಕೆಂದು ತೀರ್ಮಾನ ಕೈಗೊಂಡಿರುವುದು ರೈತರಿಗ ದ್ರೋಹ ಬಗೆದಂತಾಗಿದೆ. ಈ ತೀರ್ಮಾನದಿಂದ ಬಣ್ಣಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರಿಗೆ ಅನ್ಯಾಯವಾಗಿದೆ. ಈ ಕಾರ್ಖಾನೆಯಲ್ಲಿ ಉಪಉತ್ಪನ್ನಗಳ ಎಲ್ಲಾ ಲಾಭವು ಬರುತ್ತಿದ್ದರೂ ಅದನ್ನು ಪರಿಗಣಿಸದೆ ಕಾಣದ ಕೈಗಳ ಒತ್ತಡಕ್ಕೆ ಮಣಿದು ಸರ್ಕಾರ ಅವೈಜ್ಞಾನಿಕ ತೀರ್ಮಾನ ಕೈಗೊಂಡಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಆರೋಪಿಸಿದ್ದಾರೆ.
ಮುಖ್ಯಶಿಕ್ಷಕರ ಸಭೆ
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳನ್ನು ಅಭಿನಂದಿಸುವ ಹಾಗೂ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಉತ್ತಮಪಡಿಸುವ ಸಂಬಂಧ ಜ.4ರ ಬೆಳಗ್ಗೆ 10ಕ್ಕೆ ಅವಿಲಾ ಕಾನ್ವೆಂಟ್‌ನಲ್ಲಿ ಮುಖ್ಯಶಿಕ್ಷಕರ ಸಭೆ ಕರೆಯಲಾಗಿದ್ದು, ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರು ಭಾಗವಹಿಸುವಂತೆ ಡಿಡಿಪಿಐ ಎಚ್.ಆರ್. ಬಸಪ್ಪ ಕೋರಿದ್ದಾರೆ.
ವಾರ್ಷಿಕ ಕ್ರೀಡಾಕೂಟ
ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟವು ಜ.4 ರಿಂದ 6 ರವರೆಗೆ ಜ್ಯೋತಿನಗರದಲ್ಲಿರುವ ಡಿಎಆರ್ ಕವಾಯಿತು ಮೈದಾನದಲ್ಲಿ ನಡೆಯಲಿದ್ದು, ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಅಮಿತಾ ಪ್ರಸಾದ್ ಉದ್ಘಾಟಿಸವರು. ಜ.6ರ ಸಂಜೆ 4ಕ್ಕೆ ನಡೆಯುವ ಸಮಾರೋಪದಲ್ಲಿ ಐಜಿಪಿ ಡಾ.ಕೆ. ರಾಮಚಂದ್ರರಾವ್ ಬಹುಮಾನ ವಿತರಿಸುವರು.
ಒಕ್ಕೂಟದ ಸಭೆ
ಮೈಸೂರು ವಿಭಾಗೀಯ ಪ.ಜಾತಿ, ವರ್ಗಗಳ ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸಭೆಯು ಜ.5 ರಂದು ಮಧ್ಯಾಹ್ನ 3ಕ್ಕೆ ಚಾಮರಾಜ ಜೋಡಿ ರಸ್ತೆಯ ನಿಜದನಿ ಕಚೇರಿಯಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಸಿ.ಜಿ. ಶಿವಕುಮಾರ್ ತಿಳಿಸಿದ್ದಾರೆ.
ನಾಟಕ ಪ್ರದರ್ಶನ
ರಂಗಾಯಣದ ಮಾಜಿ ನಿರ್ದೇಶಕ ಪ್ರಸನ್ನ ಅವರ ಪುರುಷಾರ್ಥ ನಾಟಕ ಜ.5ರ ಸಂಜೆ 6.30ಕ್ಕೆ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ. ಕದಂಬ ರಂಗ ವೇದಿಕೆ ಕಲಾವಿದರು ಅಭಿನಯಿಸುವ ಈ ನಾಟಕವನ್ನು ಪ್ರೊ.ಎಚ್.ಎಸ್. ಉಮೇಶ್ ನಿರ್ದೇಶಿಸಿದ್ದಾರೆ.
ಪತ್ನಿ ಸಾವಿಗೆ ಕಾರಣನಾದ ಪತಿಗೆ 1 ವರ್ಷ ಜೈಲು
ಮೈಸೂರು: ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಪತ್ನಿಯ ಸಾವಿಗೆ ಕಾರಣನಾದ ಪತಿಗೆ ನಗರದ 2ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು 3 ಸಾವಿರ ದಂಡ ವಿಧಿಸಿದೆ. ಎಚ್.ಡಿ. ಕೋಟೆ ತಾಲೂಕು ಸಿದ್ದಾಪುರ ಗ್ರಾಮದ ಲೇ. ಮೋಟನಾಯಕ ಎಂಬವರ ಪುತ್ರ ಸಿದ್ದನಾಯಕ ಶಿಕ್ಷೆಗೆ ಗುರಿಯಾದವನು. 10 ವರ್ಷಗಳ ಹಿಂದೆ ಸರೋಜಾಬಾಯಿ ಎಂಬವರನ್ನು ವಿವಾಹವಾಗಿದ್ದ ಆರೋಪಿಯು ಆಕೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಪತಿಯ ಹಿಂಸೆ ತಾಳಲಾರದೆ ಆಕೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಎಚ್.ಡಿ. ಕೋಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಜೂಜುಕೋರರ ಬಂಧನ
ಮೈಸೂರು: ಜೂಜಾಟದಲ್ಲಿ ತೊಡಗಿದ್ದ 11 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 24,500 ವಶಪಡಿಸಿಕೊಂಡಿದ್ದಾರೆ. ನಗರದ ಟಿ.ಕೆ. ಬಡಾವಣೆ ನಿವಾಸಿ ಗಜೇಂದ್ರ, ಶಿವಾನಂದ ಕುಮಾರ್, ಕೆ.ಆರ್. ಪುರಂನ ಅಭಿಲಾಷ್, ಪಡುವಾರಹಳ್ಳಿಯ ಕೃಷ್ಣೇಗೌಡ, ನಂಜನಗೂಡು ತಾಲೂಕು ಕೌಲಂದೆ ನಿವಾಸಿ ಮಂಜು, ವಿದ್ಯಾರಣ್ಯಪುರಂನ ಕಾಂತರಾಜು, ಜಯಲಕ್ಷ್ಮೀಪುರಂನ ಸಂತೋಷ್ ಪಾಸ್ವಾನ್, ವಿಜಯನಗರದ ಮಹೇಶ, ನವೀನ್, ಮಹದೇಶ್ವರ ಬಡಾವಣೆಯ ಶಿವಕುಮಾರ್ ಹಾಗೂ ಪಾಂಡವಪುರ ತಾಲೂಕು ಚಿಕ್ಕಆಯರಹಳ್ಳಿ ನಿವಾಸಿ ಕುಮಾರಸ್ವಾಮಿ ಬಂಧಿತರು.
ಗಂಧದ ಮರ ಕಳವು
ಮೈಸೂರು: ಕುಕ್ಕರಹಳ್ಳಿ ಕೆರೆ ಏರಿಯ ಬದಿಯಲ್ಲಿದ್ದ ಗಂಧದ ಮರವನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಕೆರೆಯ ಉತ್ತರ ಭಾಗದಲ್ಲಿದ್ದ ಮರವನ್ನು ಕತ್ತರಿಸಿ ಬುಡದ ಭಾಗದ ತುಂಡುಗಳನ್ನು ಹೊತ್ತೊಯ್ದಿದ್ದಾರೆ. ಶುಕ್ರವಾರ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಸಾರ್ವಜನಿಕರು ಗಂಧದ ಮರ ಕಳವಾಗಿರುವುದನ್ನು ಗಮನಿಸಿ ಕಾವಲುಗಾರನಿಗೆ ತಿಳಿಸಿದ್ದಾರೆ. ಜಯಲಕ್ಷ್ಮೀಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.