20ನಿಮಿಷ 20ಸುದ್ದಿ
'ಛಾಯಾಚಿತ್ರಗಳ ಬೆಲೆ ಏರಿಕೆ ಅನಿವಾರ್ಯ'
ಎಚ್.ಡಿ. ಕೋಟೆ: ಇತ್ತೀಚಿನ ದಿನಗಳಲ್ಲಿ ಛಾಯಾಚಿತ್ರದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಅನಿವಾರ್ಯವಾಗಿ ಛಾಯಾಚಿತ್ರಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ ಎಂದು ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನಂದಕುಮಾರ್ ಶೈಲಿ ತಿಳಿಸಿದ್ದಾರೆ. ತಂತ್ರಜ್ಞಾನವು ಅಭಿವೃದ್ಧಿಯಾದಂತೆ ಅದನ್ನು ಬಳಸುವವರ ಸಂಖ್ಯೆ ಹೆಚ್ಚುತ್ತದೆ. ಇದರಿಂದ ಛಾಯಾಚಿತ್ರ ತೆಗೆಯಲು ಬೇಕಾದ ಸಾಮಗ್ರಿಗಳನ್ನು ಖರೀದಿಸಬೇಕಾಗುತ್ತದೆ. ಅದಕ್ಕೆ ವ್ಯಯವಾಗುವ ಹಣವನ್ನು ಛಾಯಾಗ್ರಾಹಕರು ಭರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ತಮ್ಮ ಸೇವೆಗೆ ಸಹಕರಿಸುವಂತೆ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು. ಉಪಾಧ್ಯಕ್ಷ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸ್ವಾಮಿ, ಖಜಾಂಚಿ ಸುರೇಶ್, ನಿರ್ರ್ದೇಶಕ ಕೆಂಡಗಣ್ಣ ಆರಾಧ್ಯ ಇದ್ದರು.
ಹೊಸಕೋಟೆ ಗ್ರಾಪಂನಲ್ಲಿ ನಾಗರಿಕ ಸಮಿತಿ ಸಭೆ
ಟಿ. ನರಸೀಪುರ: ತಾಲೂಕಿನ ಹೊಸಕೋಟೆಯ ಗ್ರಾಮ ಪಂಚಾಯಿತಿಯಲ್ಲಿ ನಾಗರಿಕ ಸೌಕರ್ಯ ಸಮಿತಿಯ ಶೈಕ್ಷಣಿಕ ಸಭೆ ನಡೆಸಲಾಯಿತು. ಎಸ್ವಿವೈಎಂನ ಅಂಗಸಂಸ್ಥೆಯಾದ ಗ್ರಾಸ್ರೂಟ್ಸ್ ರಿಸರ್ಚ್ ಅಂಡ್ ಅಡೋಕಸಿ ಮೂವ್ಮೆಂಟ್ ಸಂಸ್ಥೆ, ಯೂನಿಸೆಫ್, ಅಜೀಮ್ ಪ್ರೇಮ್ಜಿ ಫೌಂಡೇಷನ್ ಸಹಯೋಗದಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾ ಸಹಯೋಜಿತ ಶೈಕ್ಷಣಕ ನಾಯಕತ್ವ ಅಭಿವೃದ್ಧಿ ಯೋಜನೆ ಗ್ರಾಪಂ ವ್ಯಾಪ್ತಿಯ ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಶಾಲಾಭಿವೃದ್ಧಿಗೆ ಭಾಗಿದಾರರನ್ನಾಗಿ ಎಸ್ಡಿಎಂಸಿ ಪದಾಧಿಕಾರಿಗಳು ಪೋಷಕರು, ಗ್ರಾಮಸ್ಥರು, ಶಿಕ್ಷಣ ಇಲಾಖೆ, ಯುವಕರು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಶಾಲಾ ಸಮೀಕ್ಷೆ ನಡೆಸಲು ಚಿಂತಿಸಲಾಯಿತು. ಕೆ. ಮುದ್ದೇಗೌಡ, ಪಿಡಿಒ ವೆಂಕಟಸುಬ್ಬನ್, ರಾಮನಂಜಯ್ಯ, ಮಹೇಶ್ ಮತ್ತಿತರರು ಇದ್ದರು.
ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಕೆ.ಆರ್. ನಗರ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘ ಮತ್ತು ಎಂಐಟಿಯುಸಿ ವತಿಯಿಂದ ಪಟ್ಟಣದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷೆ ಮಂಜುಳಾ, ಪ್ರಧಾನ ಕಾರ್ಯದರ್ಶಿ ಭವಾನಿ ನೇತೃತ್ವದಲ್ಲಿ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ನೂರಾರು ಮಂದಿ ಪ್ರತಿಭಟನಾಕಾರರು ಗರುಡಗಂಭದ ವೃತ್ತ, ಪುರಸಭಾ ವೃತ್ತದ ಮೂಲಕ ಮೆರವಣಿಗೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಬಿಸಿಯೂಟ ತಯಾರಕರಿಗೆ ಮಾಸಿಕ 10 ಸಾವಿರ ಸಂಬಳ ನಿಗದಿಪಡಿಸಬೇಕು, ತಮಿಳು ನಾಡು ಮಾದರಿಯಲ್ಲಿ ಅರೆಕಾಲಿಕ ಕಾಯಂ ಎಂದು ಪರಿಗಣಿಸಿ ಸೇವಾ ಭದ್ರತೆ ನೀಡಬೇಕು, ನಿವೃತ್ತಿ ವೇತನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಜೆಪಿ ನಿಧಿಗೆ 1 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ ಗುರಿಎಚ್.ಡಿ. ಕೋಟೆ: ಪಕ್ಷದ ಸಂಘಟನೆಗಾಗಿ ತಾಲೂಕಿನಲ್ಲಿ 1 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಲಾಗುವುದು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಸಿ. ಯೋಗೀಶ್ಕುಮಾರ್ ತಿಳಿಸಿದರು. ಪಟ್ಟಣದ ಆರನೇ ವಾರ್ಡ್ನ ಪಟ್ಟಣ ಪಂಚಾಯಿತಿ ಸದಸ್ಯ ವಿವೇಕಾನಂದ ಅವರಿಂದ ಹಣವನ್ನು ಪಡೆಯುವುದರೊಂದಿಗೆ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಮೂಲೆ ಮೂಲೆಗಳಿಗೆ ಪಕ್ಷದ ಕಾರ್ಯಕರ್ತರೊಡನೆ ಸಂಚರಿಸಿ ಭೂತ್ ಮಟ್ಟದಿಂದ ಹಣವನ್ನು ಪಕ್ಷಕ್ಕಾಗಿ ದುಡಿಯುತ್ತಿರುವವರಿಂದ ಸಂಗ್ರಹಿಸುತ್ತಿದ್ದು ಇಂದು 6ನೇ ವಾರ್ಡ್ನಿಂದ ಆರಂಭಿಸಲಾಗುತ್ತಿದೆ ಎಂದರು. ಮುಖಂಡರಾದ ಶಂಕರಲೀಂಗೇಗೌಡ, ಮಹದೇವ, ವಿವೇಕಾನಂದ, ಸೋಮಾಚಾರ್, ಚಂದ್ರಶೇಖರ್, ನಾಗೇಂದ್ರ, ಸುರೇಶ್, ನಾಗೇಶ್, ಚಂದ್ರು, ವಸಂತ್, ರವಿಕುಮಾರ್ ಇದ್ದರು.
ಭೂಸೇನಾ ನಿಗಮ ಅಧಿಕಾರಿ ವಿರುದ್ಧ ಶಾಸಕರ ಆಕ್ರೋಶ
ಭೇರ್ಯ: ಗುಳುವಿನ ಅತ್ತಿಗುಪ್ಪೆ ಗ್ರಾಮದ ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಯ ಗುದ್ದಲಿ ಪೂಜೆ ಮಾಡಿ ವರ್ಷ ಕಳೆದರೂ ಕಾಮಗಾರಿ ಪ್ರಾರಂಭ ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ ಹಿನ್ನಲೆಯಲ್ಲಿ ಶಾಸಕ ಸಾ.ರಾ. ಮಹೇಶ್ ಸಂಬಂಧಪಟ್ಟ ಭೂಸೇನಾ ನಿಗಮ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರು ಶನಿವಾರ ಹೊಸ ಅಗ್ರಹಾರ ಹೋಬಳಿಯ ಮುಂಜನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಗುಳುವಿನ ಅತ್ತಿಗುಪ್ಪೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಕುಂದು ಕೊರತೆ ವಿಚಾರಿಸಿದರು. ಗ್ರಾಪಂ ಅಧ್ಯಕ್ಷೆ ಅನಿತಾಅಮರ್, ತಹಸೀಲ್ದಾರ್ ವೀಣಾಕುಮಾರ್, ಉಪ ತಹಸೀಲ್ದಾರ್ ಯಧುಗಿರೀಶ್, ಇಓ ಸಿದ್ದಲಿಂಗಮೂರ್ತಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್ಖಾನ್, ಗ್ರಾಪಂ ಮಾಜಿ ಅಧ್ಯಕ್ಷ ಹನೀಫ್ ಮತ್ತಿತರರು ಇದ್ದರು.
ಸ್ವಜನ ಗುತ್ತಿಗೆ ರದ್ದು ಪಡಿಸಲು ಒತ್ತಾಯ
ಹುಣಸೂರು: ಹುಣಸೂರು ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದು, ಕೂಡಲೇ ಗುತ್ತಿಗೆ ರದ್ದುಪಡಿಸುವಂತೆ ಪುರಸಭೆ ಸದಸ್ಯ ಎಚ್.ಪಿ. ಸತೀಶ್ಕುಮಾರ್ ಒತ್ತಾಯಿಸಿದ್ದಾರೆ. ಹುಣಸೂರು ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ವಾಣಿಜ್ಯ ಕಟ್ಟಡಗಳ ನಿರ್ಮಾಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿ ಅರ್ಹ ಗುತ್ತಿಗೆದಾರ ಬಸವರಾಜು ಮತ್ತು ನಾಗರಾಜು ಅವರ ಕಣ್ತಪ್ಪಿಸಿ ಸರ್ಕಾರದ ನಿಯಾಮ ಮತ್ತು ಸಹಕಾರ ಸಂಘದ ನಿಯಮಾವಳಿ ಉಲ್ಲಂಘಿಸಿ ಟಿಎಪಿಸಿಎಂಎಸ್ ನಿರ್ದೇಶಕ ಗೋವಿಂದೇಗೌಡ ತಮ್ಮ ಸಹೋದರ ಮಹದೇವ್ ಅವರಿಗೆ ಆಕ್ರಮವಾಗಿ ಗುತ್ತಿಗೆ ನೀಡಿದ್ದಾರೆ. ಅಧ್ಯಕ್ಷ ಸತ್ಯನಾರಾಯಣ್ ಅವರಿಗೆ ಆಸೆ ಅಮಿಷ ಒಡ್ಡಿ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಕಾರಣ ತೋರದೆ ಉಪ ಸಮಿತಿಯಲ್ಲಿ ಕಾಮಗಾರಿ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕೂಡಲೇ ಸಂಬಂಧಿಸಿದವರು ಪರಿಶೀಲನೆ ನಡೆಸಿ ಗುತ್ತಿಗೆಯನ್ನು ರದ್ದುಪಡಿಸಿ ಹೊಸದಾಗಿ ಟೆಂಡರ್ ನೀಡಬೇಕು. ಇಲ್ಲ ಅರ್ಹ ಗುತ್ತಿಗೆದಾರನಿಗೆ ಕಾಮಗಾರಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬೈಲಕುಪ್ಪೆ ಗ್ರಾಮದಲ್ಲಿಬಿಜೆಪಿ ಕಾರ್ಯಕರ್ತರ ಸಭೆ
ಬೈಲಕುಪ್ಪೆ: ಉತ್ತಮ ಅಡಳಿತಕ್ಕಾಗಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವಂತೆ ವಿಧಾನಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಮನವಿ ಮಾಡಿದರು. ಶನಿವಾರ ಮಂಚದೇವನಹಳ್ಳಿ ಗ್ರಾಮದ ಶನಿದೇವರ ದೇವಾಸ್ಥಾನದ ಆವರಣದಲ್ಲಿ ಕೊಪ್ಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರ ಹೊಗೆ ಸೊಪ್ಪಿಗೆ ಉತ್ತಮ ಬೆಲೆ ಕೊಡಿಸಲು, ಕಾರ್ಡುದಾರರಿಗೆ ಲೈಸನ್ಸ್ ಕೊಡಿಸಲು ಬಿಜೆಪಿ ಬೆಂಬಲಿಸಬೇಕು ಎಂದರು. ನಂತರ ಕೊಪ್ಪ, ಆವರ್ತಿ, ಸೂಳೆಕೋಟೆ, ಕಣಗಾಲು, ಗ್ರಾಮಕ್ಕೆ ಭೇಟಿ ನೀಡಿದರು. ಬಿಜೆಪಿ ಮುಖಂಡ ಬಿ.ಎಲ್. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ಆರ್.ಟಿ.ಸತೀಶ, ಬೆಟ್ಟದಪುರ ಶಕ್ತಿ ಕೇಂದ್ರದ ಉಸ್ತುವಾರಿ ರಾಜೆಗೌಡ, ಮುಖಂಡರಾದ ಚಂದ್ರಶೇಖರ್, ಮೈ.ವಿ. ರವಿ. ಲೋಕಪಾಲಯ್ಯ, ಗ್ರಾಮಸ್ಥರರಾದ ಹನುಮಂತೇಗೌಡ, ಶಿವಣ್ಣ, ಭರತ್ ರಾಜ ಅರಸ್, ರಾಮಣ್ಣ, ಸುರೇಶ, ರಾಚಪ್ಪ ಇದ್ದರು.
'ವಿದ್ಯಾರ್ಥಿಗಳು ಪಠ್ಯದ ಕಡೆ ಗಮನ ನೀಡಲಿ'
ಪಿರಿಯಾಪಟ್ಟಣ: ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆದುಕೊಂಡರೆ ಸಾಲದು. ಪಠ್ಯದ ಕಡೆ ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಬೇಕು ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಮೋಹನ್ರಾಜ್ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಿಸಿ ಮಾತನಾಡಿದ ಅವರು, ಸರ್ಕಾರ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಈ ರೀತಿಯ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಸವಲತ್ತುಗಳನ್ನು ಉಪಯೋಗಿಸಿಕೊಳ್ಳುವುದು ಒಂದೇ ಗುರಿಯಾಗಿರಬಾರದು. ಅಭ್ಯಾಸದ ಕಡೆ ಗಮನ ಹರಿಸಿ ಉತ್ತಮ ಅಂಕ ಪಡೆದು ಶಾಲೆಗೆ ಕೀರ್ತಿ ತರುವಂತೆ ತಿಳಿಸಿದರು. ಉಪಪ್ರಾಂಶುಪಾಲ ನಾಗಶೆಟ್ಟಿ, ಶಿಕ್ಷಕರಾದ ಆರ್.ಟಿ. ಚಂದ್ರು, ನಟರಾಜ್, ಪುಷ್ಪಲತಾ, ಮಾಲಿನಿ, ಕಿರಣ್, ಸ್ರುಜನ್, ಪ್ರಸನ್ನ, ಕಮಲ, ಪರಮಶಿವಯ್ಯ ಇದ್ದರು.
ಅಧಿಕಾರಿಗಳ ಗೈರು: ಗ್ರಾಮಸಭೆ ಬಹಿಷ್ಕಾರ
ಮೈಸೂರು: ದೂರ ಗ್ರಾಪಂನಲ್ಲಿ ಏರ್ಪಡಿಸಿದ್ದ ಗ್ರಾಮಸಭೆಗೆ ಸಂಬಂಧಪಟ್ಟ ಅಧಿಕಾರಿಗಳು ಬಾರದ್ದನ್ನು ಖಂಡಿಸಿ ಗ್ರಾಪಂ ಸದಸ್ಯರು ಸಭೆಯನ್ನು ಬಹಿಷ್ಕರಿಸಿದ ಘಟನೆ ಶನಿವಾರ ನಡೆಯಿತು. ಬೆಳಗ್ಗೆ 11.30ಕ್ಕೆ ಆರಂಭವಾಗಬೇಕಿದ್ದ ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ವಿಜಯಾ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆ ಅಧಿಕಾರಿ ಡಾ. ಸುಧಾ, ಕೃಷಿ ಇಲಾಖೆಯ ನಾಗೇಂದ್ರಪ್ರಸಾದ್, ಅರಣ್ಯ ಇಲಾಖೆಯ ಶಿವಣ್ಣ ಮಾತ್ರ ಭಾಗವಹಿಸಿದ್ದರು. ಉಳಿದಂತೆ ಪ್ರಮುಖ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದು ಎದ್ದು ಕಾಣುತ್ತಿತ್ತು. ಶಾಲೆಯ ಮಕ್ಕಳು ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು. ತಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಪಂ ಮಾಜಿ ಅಧ್ಯಕ್ಷ ಆರ್. ವೆಂಕಟಸ್ವಾಮಿ ಗ್ರಾಮಸಭೆ ಎಂದರೆ ಅಧಿಕಾರಿಗಳಿಗೆ ತಾತ್ಸಾರವಾಗಿಬಿಟ್ಟಿದೆ ಎಂದು ಕಿಡಿಕಾರಿದರು. ಇದೇ ವೇಳೆ ಗ್ರಾಪಂ ಸದಸ್ಯರಾದ ದಾಕ್ಷಾಯಿಣಿ, ಶಿವಲಿಂಗಾಚಾರಿ, ಎಂ. ಕುಮಾರ್, ಮಲಿಯಯ್ಯ, ಜಯಮ್ಮ ಇದ್ದರು.
ಮಾರ್ಬಳ್ಳಿ ಗ್ರಾಪಂ ಬಹಿಷ್ಕಾರ:ಅಧಿಕಾರಿಗಳ ವಿರುದ್ಧ ಆಕ್ರೋಶ
ಮೈಸೂರು: ತಾಲೂಕಿನ ಮಾರ್ಬಳ್ಳಿ ಗ್ರಾಪಂನಿಂದ ಏರ್ಪಡಿಸಿದ್ದ ಗ್ರಾಮಸಭೆಗೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಶುಕ್ರವಾರ ಮಾರ್ಬಳ್ಳಿ ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಹಲವಾರು ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದರು. ಪಿಡಿಒ ನಡೆಸಲು ಮುಂದಾದಾಗ ಸದಸ್ಯ ದೇವರಾಜ್ ಟಿ. ಕಾಟೂರ್ ಆಕ್ಷೇಪ ವ್ಯಕ್ತಪಡಿಸಿ ಡಾ. ಸುಧಾ ಮಾರ್ಗದರ್ಶನದಲ್ಲಿ ನಡೆಯಬೇಕಿದ್ದ ಸಭೆಗೆ ಅವರೇ ಬಂದಿಲ್ಲ. ಇನ್ನು ಸಭೆ ಹೇಗೆ ನಡೆಸುವುದು ಎಂದ ಅವರು, ಟಿ. ಕಾಟೂರು, ಮಾರ್ಬಳ್ಳಿ, ಮಾರ್ಬಳ್ಳಿಹುಂಡಿ, ಅರಸಿನಕೆರೆ ಗ್ರಾಮಗಳಲ್ಲಿ ಹಲವು ಸಮಸ್ಯೆಗಳಿದ್ದು ಅವುಗಳನ್ನು ಆಲಿಸಿ ಬಗೆಹರಿಸಬೇಕಾದದ್ದು ಅಧಿಕಾರಿಗಳ ಕರ್ತವ್ಯ. ಹಾಗಾಗಿ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಹರದನಹಳ್ಳಿ ಗ್ರಾಪಂ ವ್ಯಾಪ್ತಿ: ಕರೆಂಟ್ ಕಣ್ಣಾಮುಚ್ಚಾಲೆ...
ಸಾಲಿಗ್ರಾಮ: ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ ಹಳ್ಳಿಗಳಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ನಿಂದಾಗಿ ಜನರು ಪರಿತಪಿಸುವಂತಾಗಿದೆ. ಆಶ್ಚರ್ಯವೆಂದರೆ ಈ ಗ್ರಾಮಗಳಲ್ಲಿ ನಿರಂತರ ಜ್ಯೋತಿ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ. ಹರದನಹಳ್ಳಿ, ಶೀಗವಾಳು, ಮಲುಗನಹಳ್ಳಿ, ಬೆಟ್ಟಹಳ್ಳಿ, ಸುಬ್ಬೇಗೌಡನಕೊಪ್ಪಲು ಹಾಗೂ ಕಾಳಮ್ಮನಕೊಪ್ಪಲು ಗ್ರಾಮಗಳಿಗೆ ಪಟ್ಟಣ ಪ್ರದೇಶಗಳಲ್ಲಿ ವಿದ್ಯುತ್ ಎಷ್ಟು ಸಮಯ ಇರುತ್ತದೊ ಅಷ್ಟೇ ಪ್ರಮಾಣದ ವಿದ್ಯುತ್ ಈ ಗ್ರಾಮಗಳಿಗೂ ನೀಡುವ ಉದ್ದೇಶದಿಂದ ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ಕೋಟ್ಯಾಂತರ ರುಪಾಯಿ ವ್ಯಯಮಾಡಿ ಕಾಮಗಾರಿಯನ್ನು ಬೆಂಗಳೂರಿನ ಕ್ರಿಯೇಟಿವ್ ಎಂಜಿನಿಯರ್ ಪ್ರೈ.ಲಿ. ಕಂಪನಿ ಕೈಗೊಂಡಿತ್ತು. ಆದರೆ ವಿದ್ಯುತ್ ಸರಬರಾಜು ಮಾತ್ರ ನಿರಂತರವಾಗಿರದೆ ಹಿಂದಿಗಿಂತಲೂ ಹೆಚ್ಚಿನ ಸಮಯ ಕೈಕೊಡುವ ಮೂಲಕ ಜನತೆಗೆ ತೊಂದರೆ ತಂದೊಡ್ಡಿದೆ. ಯೋಜನೆಯ ಉಪಯೋಗವು ಜನತೆಗೆ ತಲುಪದೆ ಹೆಸರಿಗೆ ಮಾತ್ರ ಯೋಜನೆ ಎಂಬಾಂತಾಗಿದೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆ
ಮೈಸೂರು: ನವದೆಹಲಿಯ ಕೇಂದ್ರ ಲೋಕ ಸೇವಾ ಆಯೋಗ ರಕ್ಷಣಾ ಪಡೆಗಳಾದ ಆರ್ಮಿ, ನೇವಿ ಮತ್ತು ಏರ್ ಫೋರ್ಸ್ಗಳಲ್ಲಿ ಸುಮಾರು 375 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ. ಅರ್ಜಿ ಸಲ್ಲಿಸಲು ಜ.20 ಕೊನೆ ದಿನ. ಅರ್ಜಿ ಸಲ್ಲಿಸುವ ವಿಧಾನ ಢಿಢಿಢಿ.್ಡಠಡ್ಛ್ಟಟಿಟ್ಝಟಿಜ.ಟ್ಝ್ಛಿ.್ಝಟಿ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಜ.20ರ ರಾತ್ರಿ 1159ರವರೆಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಲೋಕ ಸೇವಾ ಆಯೋಗದ ವೆಬ್ಸೈಟ್ ಢಿಢಿಢಿ.್ಡಠಡ್ಛ.್ಜ್ಟಢ.್ಝಟಿ ನೋಡಿ ಅಥವಾ ಉಪಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು ಇವರನ್ನು ಸಂಪರ್ಕಿಸುವುದು. ದೂ.2516844, ಮೊ. 9449686641 (ಬೆಳಿಗ್ಗೆ 10 ರಿಂದ ಸಂಜೆ 5.30ರೊಳಗೆ).
ಗಾಣಿಗರ ಸಂಘದಕ್ಯಾಲೆಂಡರ್ ಬಿಡುಗಡೆ
ಮೈಸೂರು: ಮಾಜಿ ಮೇಯರ್ ಅನಂತು ಪತ್ರಕರ್ತರ ಭವನದಲ್ಲಿ ಶನಿವಾರ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಗಾಣಿಗರ ಸಂಘದ 2014ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎನ್.ಸಿ. ಉಮೇಶ್, ಮುಖಂಡರಾದ ದೇವಶೆಟ್ಟಿ, ಚನ್ನಕೇಶವಶೆಟ್ಟಿ ಇದ್ದರು.ಮಡಿವಾಳ ಸಂಘದ ದಿನಚರಿ: ಮೈಸೂರು ಜಿಲ್ಲಾ ವೀರ ಮಡಿವಾಳರ ಸಂಘವು ಹೊರ ತಂದಿರುವ 2014ನೇ ಕ್ಯಾಲೆಂಡರ್ ಅನ್ನು ನಗರಪಾಲಿಕೆ ಮಾಜಿ ಸದಸ್ಯೆ ಹಾಗೂ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕೆ.ಎಂ. ವಸಂತಕುಮಾರಿ ಅವರು ಶನಿವಾರ ಪತ್ರಕರ್ತರ ಭವನದಲ್ಲಿ ಬಿಡುಗಡೆಗೊಳಿಸಿದರು. ಸಂಘದ ಕಾರ್ಯಾಧ್ಯಕ್ಷ ಸಾಲಿಗ್ರಾಮ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಖಜಾಂಚಿ ಸಿದ್ದಾಪ್ಪಾಜಿ, ಮುಖಂಡರಾದ ಶಿವಣ್ಣ, ಧರ್ಮರಾಜ್, ಮರಿಸ್ವಾಮಿ, ಸೋಮಣ್ಣ ಇದ್ದರು.
ಬಿಎಂ ಶ್ರೀಕಂಠಯ್ಯ ಪೀಠ ಸ್ಥಾಪನೆಗೆ ಒತ್ತಾಯ
ಮೈಸೂರು: ಕನ್ನಡದ ಕಣ್ವ ಎಂದೇ ಖ್ಯಾತರಾಗಿರುವ ಆಚಾರ್ಯ ಬಿ.ಎಂ. ಶ್ರೀಕಂಠಯ್ಯ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸುವಂತೆ ಕುವೆಂಪು ವಿಚಾರ ವೇದಿಕೆಯ ಅಧ್ಯಕ್ಷ ಎಸ್. ಚನ್ನಪ್ಪ ಒತ್ತಾಯಿಸಿದ್ದಾರೆ. ಬಿಎಂಶ್ರೀ ಮಹಾರಾಜ ಕಾಲೇಜಿನಲ್ಲಿ ಮೊದಲ ದರ್ಜೆ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕನ್ನಡದ ಗೌರವಕ್ಕೆ ಪಾತ್ರರಾಗಿದ್ದರು. ಕನ್ನಡ ಭಾಷೆ, ಸಾಹಿತ್ಯ ಸಂವರ್ಧನೆಗಾಗಿ ಶ್ರಮಿಸಿದರು. ಅವರು ಮೈಸೂರು ವಿವಿ ಕುಲಸಚಿವರಾಗಿದ್ದಾಗ ಕನ್ನಡದ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಿ ಇಂದಿಗೂ ಪ್ರಾತ: ಸ್ಮರಣೀಯರಾಗಿದ್ದಾರೆ. ಇಂಥ ಮಹನೀಯರನ್ನು ಕುರಿತು ಯಾವ ಕಾರ್ಯಕ್ರಮಗಳೂ ವಿವಿಯಲ್ಲಿ ನಡೆಯದಿರುವುದು ವಿಷಾದನೀಯ. ಜನವರಿ ತಿಂಗಳು ಶ್ರೀ ಅವರ ಜೀವನದಲ್ಲಿ ಮಹತ್ವದ ಮಾಸ. ಅವರು ಹುಟ್ಟಿದ್ದು ಜ. 3, ಹಾಗೆ ತೀರಿಕೊಂಡಿದ್ದೂ ಜ. 5. ಆದ್ದರಿಂದ ಮೈಸೂರು ವಿವಿ ಜ. 3 ರಂದು ಶ್ರೀಯವರ ಜನ್ಮೋತ್ಸವ ಆಚರಿಸಬೇಕು ಎಂದು ಆಗ್ರಹಿಸಿದ್ದಾರೆ.