ಆರಕ್ಷಕರಿಗೆ ಆರೋಗ್ಯ ಜಾಗೃತಿ ಅಗತ್ಯ
ಮೈಸೂರು: ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಪೊಲೀಸರು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಆಡಳಿತ ತರಬೇತಿ ಸಂಸ್ಥೆ ಮಹಾ ನಿರ್ದೇಶಕಿ ಡಾ. ಅಮಿತಾ ಪ್ರಸಾದ್ ಹೇಳಿದರು.
ನಗರದ ಜ್ಯೋತಿನಗರದ ಡಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿರುವ ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಅವರು ಶನಿವಾರ ಬೆಳಗ್ಗೆ ಚಾಲನೆ ನೀಡಿ ಮಾತನಾಡಿದರು. ಶಿಸ್ತು ಮತ್ತು ಕರ್ತವ್ಯ ಪಾಲನೆಯಲ್ಲಿ ಪೊಲೀಸರ ಪಾತ್ರ ಅಪಾರವಾದದ್ದು. 15 ವರ್ಷಗಳ ನಂತರ ಪೊಲೀಸ್ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಸಂತೋಷವಾಗಿದೆ. ಕಳೆದ ತಿಂಗಳು ಕಾಡಾನೆ, ಹುಲಿ ದಾಳಿಯಿಂದ ಉಂಟಾದ ಸಮಸ್ಯೆಯನ್ನು ನಂಜನಗೂಡು ಮತ್ತು ಎಚ್.ಡಿ. ಕೋಟೆ ಪೊಲೀಸರು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಅವರು ಅಭಿನಂದಿಸಿದರು. ಪಥ ಸಂಚಲನ: ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಮೈಸೂರು ಗ್ರಾಮಾಂತರ ಉಪ ವಿಭಾಗ, ನಂಜನಗೂಡು ಉಪ ವಿಭಾಗ, ಹುಣಸೂರು ಉಪ ವಿಭಾಗ, ವಿಶೇಷ ಘಟಕ, ಮಹಿಳಾ ಪೊಲೀಸ್ ತಂಡದವರು ಆಕರ್ಷಕ ಪಥ ಸಂಚಲನದೊಂದಿಗೆ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು. ನಂತರ ಪಾರಿವಾಳ, ಬಲೂನು ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಎಸ್ಪಿ ಅಭಿನವ್ ಖರೆ, ಗುಪ್ತದಳ ಎಸ್ಪಿ ಮುದ್ದುಮಹದೇವಯ್ಯ, ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎ.ಎನ್. ರಾಜಣ್ಣ, ನಂಜನಗೂಡು ಉಪ ವಿಭಾಗ ಹೆಚ್ಚುವರಿ ಎಸ್ಪಿ ಡಾ.ಎ. ರಾಜ ಇದ್ದರು.