ಕಾವೇರಿಪುರದಲ್ಲಿ ಸೇತುವೆ ನಿರ್ಮಾಣ: ಸಂಸದ
ಟಿ. ನರಸೀಪುರ: ತಲಕಾಡಿನಲ್ಲಿ ಬತ್ತ ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಂಡು, ಕಾವೇರಿಪುರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನೂತನ ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ತಾಲೂಕಿನ ಮೇದನಿ ಗ್ರಾಮದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಅಭಿಯಾನ ಯೋಜನೆಯಡಿ 76.38 ಲಕ್ಷ ರು. ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆಯ 10 ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ತಲಕಾಡಿನಲ್ಲಿ ಬತ್ತ ಖರೀದಿ ಕೇಂದ್ರ ಆರಂಭಿಸಲು ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಲಾಗುವುದು. ಕಾವೇರಿಪುರ ಗ್ರಾಮದಲ್ಲಿ ಕಾವೇರಿ ನದಿಗೆ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲು ಸಿಎಂ ಮತ್ತು ಲೋಕೋಪಯೋಗಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳ ಜನರು ಹಾಗೂ ಮುಖಂಡರಲ್ಲಿ ಅಭಿವೃದ್ಧಿ ಪರವಾದ ಕಾಳಜಿ ಇರಬೇಕು. ಶಾಲೆ ಮತ್ತು ಅಂಗನವಾಡಿ ಕಟ್ಟಡಗಳಿಗೆ ಮತ್ತು ಶಾಶ್ವತ ಅಭಿವೃದ್ಧಿ ಕಾಮಗಾರಿಗಳಿಗೆ ಚುನಾಯಿತ ಪ್ರತಿನಿಧಿಗಳಿಂದ ಅನುದಾನವನ್ನು ಕೇಳಿ ಪಡೆಯಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಪರವಾದ ಯೋಜನೆಗಳು ಜಾರಿಗೆ ಬಂದಿವೆ. ಕ್ಷೇತ್ರದ ಶಾಸಕರು ಸಚಿವರಾಗಿರುವುದರಿಂದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಮಂಜೂರಾಗಲಿದೆ ಎಂದರು.
ಶಾಸಕ ಆರ್. ಧರ್ಮಸೇನಾ, ಮಾಜಿ ಶಾಸಕ ಎಸ್. ಕೃಷ್ಣಪ್ಪ, ತಾಪಂ ಮಾಜಿ ಉಪಾಧ್ಯಕ್ಷ ಕುಕ್ಕೂರು ಪ್ರಸನ್ನ, ಜಿಪಂ ಉಪಾಧ್ಯಕ್ಷೆ ಎಸ್. ಭ್ರಮರಾಂಭ, ಸದಸ್ಯೆ ಗೌರಮ್ಮ ಚಿಕ್ಕಮಾದನಾಯ್ಕ, ಮುಖಂಡರಾದ ಕೆ.ಸಿ. ಲೋಕೇಶ್, ಹೊನ್ನನಾಯ್ಕ, ತಾಪಂ ಅಧ್ಯಕ್ಷ ಚಿದರವಳ್ಳಿ ನಟರಾಜು, ಸದಸ್ಯೆ ಸುವರ್ಣ ಪ್ರಸನ್ನ, ಕೆ.ಎಸ್. ಮಹೇಶ, ರತ್ನಮ್ಮ, ಕಾಳದುಂಡನಾಯ್ಕ, ಡಿ. ಪದ್ಮನಾಭ, ಬಿಇಒ ಮರಿಸ್ವಾಮಿ, ಶಂಕರ್, ಎನ್.ಎಸ್. ಶಿವಸ್ವಾಮಿ, ಸಿಆರ್ಪಿ ಚಂದ್ರಶೇಖರ್, ಮುಖ್ಯ ಶಿಕ್ಷಕ ಪ್ರಸನ್ನ ಇದ್ದರು.