ಕೆರೆ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಿ
ಕ.ಪ್ರ.ವಾರ್ತ ಮೈಸೂರು ಜ.4
ಕೆರೆ-ಕಟ್ಟೆಗಳ ಒತ್ತುವರಿ ತೆರವುಗೊಳಿಸಿ, ಪುನರುಜ್ಜೀವನಕ್ಕೆ ಕ್ರಮಕೈಗೊಳ್ಳುವಂತೆ ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಜಿಲ್ಲಾಧಿಕಾರಿಗೆ ಸೂಚಿಸಿದರು.
ಮೈಸೂರು ಜಿಪಂ ಸಭಾಂಗಣದಲ್ಲಿ ಶನಿವಾರ ಸಮಿತಿಯ ಸದಸ್ಯ ಎ.ಎನ್. ಯಲ್ಲಪ್ಪರೆಡ್ಡಿ ಅವರೊಂದಿಗೆ ಪ್ರಾದೇಶಿಕ ಲೋಕ ಅದಾಲತ್ ನಡೆಸಿದ ಅವರು, ಕೆರೆಗಳ ಪುನರುಜ್ಜೀವನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಆದರೆ ಈ ಅನುದಾನ ಬಳಕೆಯ ವಿಚಾರದಲ್ಲಿ ಅಧಿಕಾರಿಗಳ ವಿಫಲತೆ ಎದ್ದು ಕಾಣುತ್ತದೆ ಎಂದರು.
ಈಗ ಕೆರೆಗಳ ಸಮೀಕ್ಷೆ ಮಾಡಿ, ಹದ್ದುಬಸ್ತು ನಿಗದಿ ಮಾಡಿ, ಒತ್ತುವರಿ ತೆರವು ಮಾಡಿ, ಪುನರುಜ್ಜೀವನಗೊಳಿಸಿ. ಇದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯ ಹಣ ಬಳಸಿಕೊಳ್ಲಬೇಕು ಎಂದು ಅವರು ಸೂಚಿಸಿದರು.
10,000 ಕೆರೆಗಳಲ್ಲಿ 6,000 ಕೆರೆಗಳು ಮಾತ್ರ ಇವೆ. ಉಳಿದವು ಮಾಯವಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ವರದಿ ಸಲ್ಲಿಸಿದ್ದಾರೆ ಎಂದು ಎ.ಎನ್. ಯಲ್ಲಪ್ಪರೆಡ್ಡಿ ಕಳವಳ ವ್ಯಕ್ತಪಡಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ವ್ಯಾಪ್ತಿಗೆ ಗಾಳಿ, ನೀರು ಮಾತ್ರವಲ್ಲದೆ ಶಬ್ದ, ಬೆಳಕು, ಪ್ಲಾಸ್ಟಿಕ್, ಇ- ತ್ಯಾಜ್ಯ ವಿಲೇವಾರಿ ಸಮಸ್ಯೆಗಳು ಬರುತ್ತವೆ. ಇಂಥ ಸಂದರ್ಭದಲ್ಲಿ ನಗರ, ಪಟ್ಟಣದಿಂದ ಹಳ್ಳಿಯವರೆಗೂ ಘನತ್ಯಾಜ್ಯ ವಿಲೇವಾರಿಯ ಬಗ್ಗೆ ಗಮಹರಿಸಬೇಕಾಗಿದೆ. ಅನುಷ್ಠಾನದ ವಿಷಯದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಕಳೆದ ಲೋಕ ಅದಾಲತ್ನಲ್ಲಿ ಕಂಡು ಬಂದಿದೆ. ಆ ರೀತಿಯ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತನ್ನಿ ಎಂದು ನಾಗಮೋಹನದಾಸ್ ಸೂಚಿಸಿದರು.
ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಸ್ವಾಗತಿಸಿದರು. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ, ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ತಮ್ಮ ಜಿಲ್ಲೆಯ ಬಗ್ಗೆ ವಿವರಗಳನ್ನು ನೀಡಿದರು. ಈ 8 ಜಿಲ್ಲೆಗಳ ಜಿಪಂ ಸಿಇಒಗಳು, ಪೊಲೀಸ್ , ಅರಣ್ಯ, ಆರೋಗ್ಯ, ತೋಟಗಾರಿಕೆ, ಕೃಷಿ, ಪಶು ವೈದ್ಯಕೀಯ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕಿತ್ತಳೆ ತಳಿ ಸಂರಕ್ಷಣೆ ಯಾಕಿಲ್ಲ
ಮೈಸೂರಿನಲ್ಲಿ ಶನಿವಾರ ನಡೆದ ಪ್ರಾದೇಶಿಕ ಲೋಕ ಅದಾಲತ್ನಲ್ಲಿ ಸಮರ್ವಕವಾಗಿ ಮಾಹಿತಿ ನೀಡದ ಚಿಕ್ಕಮಗಳೂರು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಚಾಮರಾಜನಗರ ಡಿಎಚ್ಒ ಅನ್ನು ಹೈಕೋರ್ಟ್ ನ್ಯಾಯಾಧೀಶ ಎಚ್.ಎನ್. ನಾಗಮೋಹನ ದಾಸ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಚಿಕ್ಕಮಗಳೂರು ಕಿತ್ತಳೆ ಬೆಳೆಯುವುದುಕ್ಕೆ ಪ್ರಸಿದ್ಧಿ ಪಡೆದಿತ್ತು. ಈಗ ಆ ತಳಿಯ ಸಂರಕ್ಷಣಾ ಕಾರ್ಯ ನಡೆದಿಲ್ಲ. ಬೇರೆಡೆಯಿಂದ ಬೇರೆ ತಳಿ ತಂದು ಹಾಕಿದ್ದೀರಿ. ಸದ್ಯ ಜನ ನಿಮಗೆ (ಅಧಿಕಾರಿಗಳಿಗೆ) ಹೊಡೆದಿಲ್ಲ ಎಂದ ಅವರು, ನಿಮ್ಮ ಉತ್ತರ ಸಮರ್ಪಕವಾಗಿಲ್ಲ. ನಿಮ್ಮ ವಿರುದ್ದ ಯಾಕೆ ಶಿಸ್ತು ಕ್ರಮಕ್ಕೆ ಶಿಫಾರಸ್ ಮಾಡಬಾರದು ಎಂದು ಗರಂ ಆದರು.
ನೀವಿನ್ನೂ ಪ್ರಾಥಮಿಕ ಹಂತದಲ್ಲಿಯೇ ಇದ್ದೀರಿ ಎಂದು ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಶೇಖರಪ್ಪ ಅವರಿಗೆ ಬಿಸಿ ಮುಟ್ಟಿಸಿದರು. ಅರಣ್ಯ ಒತ್ತುವರಿ ತೆರವಿನ ವಿಚಾರದಲ್ಲಿಯೂ ವಿಳಂಬ ಧೋರಣೆ ಬಗ್ಗೆ ಅವರು ಕಿಡಿಕಾರಿದರು.
ಹಳೆ ಕಥೆ ಬೇಡ...
ಲೋಕ ಅದಾಲತ್ ಸಮಿತಿಯ ಸದಸ್ಯರಾದ ಎ.ಎನ್. ಯಲ್ಲಪ್ಪರೆಡ್ಡಿ ಅವರು ನಿವೃತ್ತ ಐಎಫ್ಎಸ್ ಅಧಿಕಾರಿ. ಹೀಗಾಗಿ ಅವರಿಗೆ ಪರಿಸರ ಅಂದರೆ ಪ್ರಾಣಿ- ಪಕ್ಷಿ, ನೀರು, ಗಾಳಿ- ಹೀಗೆ ಪ್ರತಿಯೊಂದರ ಬಗ್ಗೆಯೂ ಕಳಕಳಿ. ಅರಣ್ಯ ಇಲಾಖೆಯ ಒಳಹೊರಗನ್ನು ಚೆನ್ನಾಗಿ ಬಲ್ಲವರು. ಹೀಗಾಗಿ ಯಾರಾದರೂ ಅಧಿಕಾರಿ ತಪ್ಪು ಮಾಹಿತಿ ನೀಡುತ್ತಿದ್ದರೆ, ನಿಮ್ಮ ಹಳೆಯ ಕಥೆ ಬೇಡ. ಈಗ ಏನಾಗಿದೆ ಹೇಳಿ ಎನ್ನುತ್ತಿದ್ದರು.
ಒಮ್ಮೆ ನಾನು ಬಿಳಿಗಿರಿರಂಗನಬೆಟ್ಟ ದೇವಸ್ಥಾನಕ್ಕೆ ಹೋಗಿದ್ದೆ. ದೇವಸ್ಥಾನದ ಪಕ್ಕವೇ ಪ್ಸಾಸ್ಟಿಕ್ ಎಸೆಯುತ್ತಿದ್ದರು. ಇದನ್ನು ತಡೆಯಿರಿ ಎಂದು ಅಲ್ಲಿನ ಮುಜರಾಯಿ ಇಲಾಖೆಯ ಅಧಿಕಾರಿಗಳಿಗೆ ಹೇಳಿದರೆ ನನಗೆ ಸಂಬಂಧ ಇಲ್ಲ ಎಂದು ಹೇಳಿದರು. ಅವರಿಗೆ ನಾನು ಯಾರೆಂದು ಹೇಳಲಿಲ್ಲ ಎಂದಾಗ ಸಭೆಯಲ್ಲಿ ನಗುವಿನ ಅಲೆ. ಅಧಿಕಾರಿಗಳು ಈ ರೀತಿಯಾದರೆ ಹೇಗೆ ಎಂದು ಯಲ್ಲಪ್ಪರೆಡ್ಡಿ ಅವರು ಮರು ಪ್ರಶ್ನೆ ಹಾಕಿದಾಗ ಸಭೆಯಲ್ಲಿ ಗಪ್ಚುಪ್.
ಲೋಕ ಅದಾಲತ್ ಆದೇಶಗಳು
- ಕೊಳ್ಳೇಗಾಲ ತಾಲೂಕು ಸತ್ತೇಗಾಲ ಬಳಿಯ ವೆಸ್ಲಿ ಸೇತುವೆಯನ್ನು ಪಾರಂಪರಿಕ ಸೇತುವೆ ಎಂದು ಘೋಷಿಸಲು ಪಾರಂಪರಿಕ ಇಲಾಖೆ ಕ್ರಮಕೈಗೊಳ್ಳಬೇಕು
- ಗ್ರಾನೈಟ್ ಕ್ವಾರಿಗಳನ್ನು ಬಂದ್ ಮಾಡಿಸುವ ಸಂಬಂಧ ಇಲಾಖೆ ಹಾಗೂ ಸರ್ಕಾರದೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳ ವಿವರಗಳನ್ನು ಬಿಳಿಗಿರಿರಂಗನಬೆಟ್ಟ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಒಂದು ವಾರದೊಳಗೆ ಲೋಕ ಅದಾಲತ್ಗೆ ಸಲ್ಲಿಸಬೇಕು
- ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳು ಕಾವೇರಿ ನದಿಗೆ ಬರುತ್ತಿರುವ ಪ್ಲಾಸ್ಟಿಕ್ ತಡೆಗೆ ಗಮನಹರಿಸಬೇಕು. ಈ ಸಂಬಂಧ ಸ್ಥಳೀಯ ಸಂಸ್ಥೆಗಳು, ಮುಜರಾಯಿ ಇಲಾಖೆ ಮತ್ತಿತರ ಅಧಿಕಾರಿಗಳಿಗೆ ಸೂಚನೆ ನೀಡಬೇಕು
- ಎಲ್ಲಾ ಜಿಲ್ಲಾಧಿಕಾರಿಗಳು ಕಸಾಯಿಖಾನೆಗಳಿಗೆ ಜಾಗ ಗುರುತಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಟ್ಟಡ ನಿರ್ಮಿಸಿ, ಅಗತ್ಯ ಉಪಕರಣ ಖರೀದಿಸಬೇಕು
- ವಾರ್ಡ್ ಸಮಿತಿಗಳನ್ನು ರಚಿಸಿ, ಅವರ ಸೇವೆಯನ್ನು ಬಳಸಿಕೊಳ್ಳಬೇಕು
- ಕಾಫಿ ಪಲ್ಪಿಂಗ್ ಮತ್ತು ನೀರಿನ ತ್ಯಾಜ್ಯ ಸಮಸ್ತೆ ನಿವಾರಣೆ ಸಂಬಂಧ ಚಿಕ್ಕಮಗಳೂರು ಜಿಲ್ಲಾಧಿಕಾರಿ ಅವರು ಪ್ರೊ. ಶ್ರೀನಿವಾಸಮೂರ್ತಿ, ಡಾ. ಭಾಸ್ಕರ್ ಅವರ ಸಲಹೆ ಪಡೆಯಬೇಕು