ಕೆರೆಗಳ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಲು ಸೂಚನೆ
ಮೈಸೂರು: ಕೆರೆ-ಕಟ್ಟೆಗಳ ಒತ್ತುವರಿ ತೆರವುಗೊಳಿಸಿ, ಪುನರುಜ್ಜೀವನಕ್ಕೆ ಕ್ರಮಕೈಗೊಳ್ಳುವಂತೆ ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಜಿಲ್ಲಾಧಿಕಾರಿಗೆ ಸೂಚಿಸಿದರು.
ಮೈಸೂರು ಜಿಪಂ ಸಭಾಂಗಣದಲ್ಲಿ ಶನಿವಾರ ಸಮಿತಿಯ ಸದಸ್ಯ ಎ.ಎನ್. ಯಲ್ಲಪ್ಪರೆಡ್ಡಿ ಅವರೊಂದಿಗೆ ಪ್ರಾದೇಶಿಕ ಲೋಕ ಅದಾಲತ್ ನಡೆಸಿದ ಅವರು, ಕೆರೆಗಳ ಪುನರುಜ್ಜೀವನಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಆದರೆ ಈ ಅನುದಾನ ಬಳಕೆಯ ವಿಚಾರದಲ್ಲಿ ಅಧಿಕಾರಿಗಳ ವಿಫಲತೆ ಎದ್ದು ಕಾಣುತ್ತದೆ ಎಂದರು.
ಈಗ ಕೆರೆಗಳ ಸಮೀಕ್ಷೆ ಮಾಡಿ, ಹದ್ದುಬಸ್ತು ನಿಗದಿ ಮಾಡಿ, ಒತ್ತುವರಿ ತೆರವು ಮಾಡಿ, ಪುನರುಜ್ಜೀವನಗೊಳಿಸಿ. ಇದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯ ಹಣ ಬಳಸಿಕೊಳ್ಲಬೇಕು ಎಂದು ಅವರು ಸೂಚಿಸಿದರು.
10,000 ಕೆರೆಗಳಲ್ಲಿ 6,000 ಕೆರೆಗಳು ಮಾತ್ರ ಇವೆ. ಉಳಿದವು ಮಾಯವಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ವರದಿ ಸಲ್ಲಿಸಿದ್ದಾರೆ ಎಂದು ಎ.ಎನ್. ಯಲ್ಲಪ್ಪರೆಡ್ಡಿ ಕಳವಳ ವ್ಯಕ್ತಪಡಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ವ್ಯಾಪ್ತಿಗೆ ಗಾಳಿ, ನೀರು ಮಾತ್ರವಲ್ಲದೆ ಶಬ್ದ, ಬೆಳಕು, ಪ್ಲಾಸ್ಟಿಕ್, ಇ- ತ್ಯಾಜ್ಯ ವಿಲೇವಾರಿ ಸಮಸ್ಯೆಗಳು ಬರುತ್ತವೆ. ಇಂಥ ಸಂದರ್ಭದಲ್ಲಿ ನಗರ, ಪಟ್ಟಣದಿಂದ ಹಳ್ಳಿಯವರೆಗೂ ಘನತ್ಯಾಜ್ಯ ವಿಲೇವಾರಿಯ ಬಗ್ಗೆ ಗಮಹರಿಸಬೇಕಾಗಿದೆ. ಅನುಷ್ಠಾನದ ವಿಷಯದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಕಳೆದ ಲೋಕ ಅದಾಲತ್ನಲ್ಲಿ ಕಂಡು ಬಂದಿದೆ. ಆ ರೀತಿಯ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತನ್ನಿ ಎಂದು ನಾಗಮೋಹನದಾಸ್ ಸೂಚಿಸಿದರು.
ತರಾಟೆಗೆ: ಮೈಸೂರಿನಲ್ಲಿ ಶನಿವಾರ ನಡೆದ ಪ್ರಾದೇಶಿಕ ಲೋಕ ಅದಾಲತ್ನಲ್ಲಿ ಸಮರ್ವಕವಾಗಿ ಮಾಹಿತಿ ನೀಡದ ಚಿಕ್ಕಮಗಳೂರು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಚಾಮರಾಜನಗರ ಡಿಎಚ್ಒ ಅನ್ನು ಹೈಕೋರ್ಟ್ ನ್ಯಾಯಾಧೀಶ ಎಚ್.ಎನ್. ನಾಗಮೋಹನ ದಾಸ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಸ್ವಾಗತಿಸಿದರು. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ದಕ್ಷಿಣ, ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಮ್ಮ ತಮ್ಮ ಜಿಲ್ಲೆಯ ಬಗ್ಗೆ ವಿವರಗಳನ್ನು ನೀಡಿದರು. ಈ 8 ಜಿಲ್ಲೆಗಳ ಜಿಪಂ ಸಿಇಒಗಳು, ಪೊಲೀಸ್ , ಅರಣ್ಯ, ಆರೋಗ್ಯ, ತೋಟಗಾರಿಕೆ, ಕೃಷಿ, ಪಶು ವೈದ್ಯಕೀಯ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭಾಗವಹಿಸಿದ್ದರು.