ವಾನಳ್ಳಿ ಲೇಖನ ಜೀವಂತ ಚಿತ್ರಣ: ಪ್ರೊ.ತಾರಾನಾಥ್
ಮೈಸೂರು: ನಿರಂಜನ ವಾನಳ್ಳಿ ಅವರ ಲೇಖನಗಳು ಜೀವಂತ ಚಿತ್ರಣಗಳಾಗಿದ್ದು, ನಾವು ಕೇಳದ, ಕಾಣದ ಘಟನೆಗಳನ್ನು ಕಣ್ಣೆದುರೆ ನಡೆದಂತೆ ಹೇಳುವ ಗುಣ ಉಳ್ಳವಾಗಿವೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಎನ್.ಎಸ್. ತಾರಾನಾಥ್ ಹೇಳಿದರು. ಮೈಸೂರು ವಿವಿ ಸಿಪಿಡಿಪಿಎಸ್ ಸಭಾಂಗಣದಲ್ಲಿ ಅಂಕಣಕಾರ ಪ್ರೊ. ನಿರಂಜನ ವಾನಳ್ಳಿ ಅವರ ದಾರಿ ತಪ್ಪಿರುವಾಗ ಗುರಿ ಮುಟ್ಟಬಹುದೆ ಲೇಖನಗಳ ಸಂಗ್ರಹ ಕೃತಿಯನ್ನು ಶನಿವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಒಬ್ಬ ಲೇಖಕ ತನ್ನ ಸುತ್ತ-ಮುತ್ತಲ ಪರಿಸರವನ್ನು ಹೇಗೆ ಸೂಕ್ಷ್ಮವಾಗಿ ಗ್ರಹಿಸುತ್ತಾನೆ ಎಂಬುದು ಲೇಖನಗಳಲ್ಲಿ ವೇದ್ಯವಾಗಿದೆ ಎಂದರು.
ಆಯಸ್ಕಾಂತ ಗುಣ: ವಾನಳ್ಳಿ ಯಾವುದೇ ಆಡಂಬರವಿಲ್ಲದೆ ಓದುಗರನ್ನು ತನ್ನತ್ತ ಸೆಳೆಯುವ ಆಯಸ್ಕಾಂತ ಗುಣ ಹೊಂದಿದ್ದಾರೆ. ಅವರಿಂದ ಮೂಡಿ ಬಂದಿರುವ ಲೇಖನಗಳು ಚಿಂತನೆಗೆ ಓರೆ ಹಚ್ಚಿವೆ. ಯಾವುದೇ ಅಂಕಣಕಾರ ತನ್ನನ್ನು ತಾನು ಬಿಂಬಿಸಿಕೊಳ್ಳದೆ ಕಾಲ- ದೇಶವನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ಪ್ರಾಮಾಣಿಕತೆಯಿಂದ ಹೇಗೆ ಬಿಂಬಿಸಬಹುದು ಎಂಬುದುಕ್ಕೆ ಇವರ ಲೇಖನಗಳು ನಿದರ್ಶನವಾಗಿವೆ. ಈ ಕೃತಿಯಲ್ಲಿನ ಲೇಖನಗಳು ನಿರ್ದಿಷ್ಟ ವಿಷಯಕ್ಕೆ ಅಂಟಿಕೊಳ್ಳದೆ ಎಲ್ಲಾ ವಿದ್ಯಮಾನಗಳನ್ನು ತಲಾಸ್ಪರ್ಶಿಯಾಗಿ ಅವಲೋಕಿಸಿದೆ ಎಂದರು. ಕಥೆಗಾರ್ತಿ ನಾಗಲಕ್ಷ್ಮೀ ಹರಿಹರೇಶ್ವರ, ಲೇಖಕ ಪ್ರೊ. ನಿರಂಜನ ವಾನಳ್ಳಿ, ಉಪನ್ಯಾಸಕ ಜೆ. ಲೋಹಿತ್, ಪ್ರಕಾಶಕ ಮಂಜು ಇದ್ದರು.