ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುದ್ದಿ ಸಂಕ್ಷೇಪ

Mainashree
Updated On : 4 Jan 2014, 10:52 am

ದಾಖಲೆ ಇಲ್ಲದ 20 ಲಕ್ಷ ವಶ: ಇಬ್ಬರ ಬಂಧನ
ಮೈಸೂರು: ದಾಖಲೆ ಇಲ್ಲದೆ ಖಾಸಗಿ ಬಸ್‌ನಲ್ಲಿ ಸಾಗಿಸಲಾಗುತ್ತಿದ್ದ ರು. 20 ಲಕ್ಷ ಇಲವಾಲ ಠಾಣೆ ಪೊಲೀಸರು ವಶಪಡಿಸಿಕೊಂಡು, ಬಸ್ ಚಾಲಕ ಮತ್ತು ಕ್ಲೀನರ್‌ನನ್ನು ಬಂಧಿಸಿದ್ದಾರೆ. ಬಸ್ ಚಾಲಕ  ಅಕ್ತರ್ ಹುಸೇನ್ ಮತ್ತು ಕ್ಲೀನರ್ ಮುನಿರ್ ಬಂಧಿತ ಆರೋಪಿಗಳು. ಬೆಂಗಳೂರಿನಿಂದ ಕ್ಯಾಲಿಕೇಟ್‌ಗೆ ಹೋಗುತ್ತಿದ್ದ ಖಾಸಗಿ ಬಸ್ ಅನ್ನು ಇಲವಾಲ ಬಸ್ ನಿಲ್ದಾಣದ ಬಳಿ ಪೊಲೀಸರು ಶುಕ್ರವಾರ ರಾತ್ರಿ ತಪಾಸಣೆ ಮಾಡಿದರು. ಈ ವೇಳೆ ಬಸ್ಸಿನ ಲಗೇಜ್ ಬಾಕ್ಸ್‌ನಲ್ಲಿ 20 ಲಕ್ಷ ರು. ಪತ್ತೆಯಾಗಿದೆ. ಈ ಹಣದ ಬಗ್ಗೆ ಪ್ರಯಾಣಿಕರನ್ನು ಪೊಲೀಸರು ವಿಚಾರಿಸಿದಾಗ ಯಾರೂ ಸಹ ತಮ್ಮದೆಂದು ಮುಂದೆ ಬರಲಿಲ್ಲ. ಬಸ್ ಚಾಲಕ ಮತ್ತು ಕ್ಲೀನರ್ ಸಹ ಹಣದ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದರು. ಹೀಗಾಗಿ ಬಸ್ ಚಾಲಕ ಮತ್ತು ಕ್ಲೀನರ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಇಲವಾಲ ಠಾಣೆ ಎಸ್‌ಐ ಟಿ.ಎಂ. ಪುನೀತ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಿರ್ವಾಹಕ ಸಾವು; ಸಿಬ್ಬಂದಿ ಪ್ರತಿಭಟನೆ
ಮೈಸೂರು: ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಕೆಎಸ್‌ಆರ್‌ಟಿಸಿ ಎಚ್.ಡಿ. ಕೋಟೆ ಡಿಪೋ ನಿರ್ವಾಹಕ ಜಿ.ಎಂ. ಮಂಜಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪಿಸಿ ಕೆಎಸ್‌ಆರ್‌ಟಿಸಿ ಬಸ್ ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿ ಶನಿವಾರ ಸಂಜೆ ಪ್ರತಿಭಟಿಸಿದರು. ಮೈಸೂರಿನ ಕೆ.ಆರ್. ಆಸ್ಪತ್ರೆ ಶವಾಗಾರದಲ್ಲಿ ಜಮಾಯಿಸಿದ್ದ ಸಿಬ್ಬಂದಿ ವರ್ಗವು, ಟಿಕೆಟ್ ಇಲ್ಲದ ಪ್ರಯಾಣಿಕರಿಗೆ ಅಧಿಕಾರಿಗಳು ಸ್ಥಳದಲ್ಲೇ ದಂಡ ವಿಧಿಸಿದ್ದಾರೆ. ಈ ಪ್ರಕರಣಕ್ಕೆಲ್ಲ ಮೆಮೋ ನೀಡುವಂತಹ ಅಗತ್ಯವಿರಲಿಲ್ಲ. ಆದರೆ, ಉದ್ದೇಶಪೂರ್ವಕವಾಗಿ ಮೆಮೋ ನೀಡಲಾಗಿದೆ. ಇದರಿಂದ ಕೆಲಸ ಕಳೆದುಕೊಳ್ಳುವ ಭೀತಿಯಿಂದ ಮಂಜಪ್ಪ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದರು. ನಿರ್ವಾಹಕ ಮಂಜಪ್ಪ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
'ಐತಿಹಾಸಿಕ ಸ್ಮಾರಕ ಸಂರಕ್ಷಿಸಿ'
ಮೈಸೂರು: ಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಅಭಿವೃದ್ಧಿಗೊಳಿಸುವಾಗ ಐತಿಹಾಸಿಕ ಸ್ಮಾರಕಗಳು ನಶಿಸದಂತೆ ನೋಡಿಕೊಳ್ಳಬೇಕು. ಅವುಗಳನ್ನು ಸಂರಕ್ಷಿಸಿ ಅಭಿವೃದ್ಧಿಗೊಳಿಸಬೇಕು ಎಂದು ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್‌ವಕ್ ನಿವೃತ್ತ ಅಧ್ಯಕ್ಷೆ ರತಿ ವಿನಯ್ ಜಾ ಕಿವಿಮಾತು ಹೇಳಿದರು. ಶನಿವಾರ ಆಡಳಿತ ತರಬೇತಿ ಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಪರಂಪರೆ ಹಾಗೂ ಪ್ರಾಚೀನ ಸ್ಮಾರಕಗಳನ್ನು ಸಂರಕ್ಷಿಸಿ ಪೋಷಿಸುವ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರವಾಸಿಗರಾಗಿ ನಾವು ಬೇರೆ ಸ್ಥಳ ಅಥವಾ ದೇಶಗಳಿಗೆ ಹೋದಾಗ ಅಲ್ಲಿನ ಸಂಸ್ಕೃತಿ, ಪ್ರಾಚ್ಯವಸ್ತು, ಸ್ಮಾರಕಗಳ ಬಗ್ಗೆ ಬಹಳ ವಿಷಯಗಳನ್ನು ತಿಳಿದುಕೊಳ್ಳುತ್ತೇವೆ. ಆದರೆ ನಾವು ವಾಸಿಸುವ ಸ್ಥಳದಲ್ಲೇ ಇರುವ ಸಂಸ್ಕೃತಿ ಹಾಗೂ ಸ್ಮಾರಕಗಳ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಈ ಮನೋಭಾವನೆ ಬದಲಾಗಬೇಕು ಮೊದಲು ನಮ್ಮ ಸಂಸ್ಕೃತಿ ಪೋಷಿಸಿ ಬೆಳಸಬೇಕು ಎಂದರು. ನಮ್ಮ ಪರಂಪರೆ ಹಾಗೂ ಐತಿಹಾಸಿಕ ಸ್ಮಾರಕಗಳ ಬಗ್ಗೆ ಮಕ್ಕಳಿಗೆ ಶಾಲಾ ಹಂತದಲ್ಲೇ ತಿಳಿಸಬೇಕು. ಅವುಗಳನ್ನು ಸಂರಕ್ಷಿಸುವಂತೆ ಪ್ರೇರೆಪಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement