ಸುದ್ದಿ ಸಂಕ್ಷೇಪ
ಕನ್ನಡಕ್ಕೆ ಎಲ್ಲೆಡೆ ಆದ್ಯತೆ ಇರಲಿ: ಮಹೇಶ್
ಎಚ್.ಡಿ. ಕೋಟೆ: ಕನ್ನಡ ಭಾಷೆಯನ್ನು ಉತ್ತಮವಾಗಿ ಕಲಿಯುವ ಜತೆಗೆ ಇತರೆ ಭಾಷೆಗಳನ್ನು ಕಲಿಯಬೇಕು. ಆದರೆ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಡಿ.ಆರ್. ಮಹೇಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತಾಲೂಕಿನ ಚಿಕ್ಕೆರೆಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದ ಅವರು, ಸರ್ಕಾರದಿಂದ ಉಚಿವಾಗಿ ನೀಡುವ ಸೈಕಲ್ ಬಳಸಿಕೊಂಡು ಶಾಲೆಗೆ ತಪ್ಪದೆ ಹಾಜರಾಗಬೇಕು. ಎಂತಹ ಪ್ರತಿಭಾವಂತನಾದರು ಸಹ ತನ್ನ ಮಾತೃಭಾಷೆಯಲ್ಲಿ ಉತ್ತಮ ಪರಿಣಿತಿಯನ್ನು ಹೊಂದಿದ ನಂತರ ಇತರೆ ಭಾಷೆಗಳನ್ನು ಕಲಿಯಬೇಕು ಎಂದರು. ಕಸ್ತೂರಿ ಸಂಸ್ಥೆಯ ಸತೀಶ್, ಬಿಆರ್ಪಿ ಗಿರೀಶ್ಮೂರ್ತಿ, ಸಿಆರ್ಪಿ ಸೋಮಯ್ಯ, ಎಸ್ಡಿಎಂಸಿ ಅಧ್ಯಕ್ಷ ಮಂಜೇಗೌಡ, ಜಗದೀಶ್, ಶಾಲಾ ಮುಖ್ಯೋಪಾಧ್ಯಾಯ ಸಿ.ಎಸ್. ಕುಮಾರಸ್ವಾಮಿ ಇದ್ದರು.
ಮುಳ್ಳೂರು ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ
ಎಚ್.ಡಿ. ಕೋಟೆ: ಎಚ್.ಡಿ. ಕೋಟೆ ತಾಲೂಕಿನ ಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್ ಸೈಕಲ್ ವಿತರಿಸಿದರು. ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಉಚಿತ ಪುಸ್ತಕ, ಬಿಸಿಯೂಟ ಯೋಜನೆ, ಕ್ಷೀರಭಾಗ್ಯ, ಬೈಸಿಕಲ್ ನೀಡುವಂತಹ ಮಹತ್ತರವಾದ ಯೋಜನೆಗಳನ್ನು ರೂಪಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಮುಳ್ಳೂರು ಗ್ರಾಪಂ ಅಧ್ಯಕ್ಷೆ ಶಿವಮ್ಮ, ಸೋಮಣ್ಣ, ಎಸ್ಡಿಎಂಸಿ ಅಧ್ಯಕ್ಷೆ ಸುಮತಿ ಸರಗೂರಯ್ಯ, ಪುಟ್ಟಸ್ವಾಮಿ, ಮಹದೇವಮೂರ್ತಿ, ರಾಜೇಂದ್ರನ್, ದೊಡ್ಡನಾಯಕ, ಶಿವರಾಜಾಚಾರ್, ಚಿಕ್ಕನಾಯಕ, ಗ್ರಾಪಂ ಸದಸ್ಯರಾದ ಗೌರಮ್ಮ, ಪುಟ್ಟಮ್ಮ, ಪಿಡಿಒ ಮಹೇಶ್, ಸಿಆರ್ಪಿ ಸುರೇಶ್, ಮುಖ್ಯ ಶಿಕ್ಷಕರು ಇದ್ದರು.
'ಶಿಕ್ಷಕರ ಸಂಘ ಸಮಾಜಮುಖಿಯಾಗಲಿ'
ಟಿ. ನರಸೀಪುರ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ಉಪ ಖಜಾನಾಧಿಕಾರಿ ಎನ್.ಬಿ. ರಾಜಶೇಖರ್ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶನಿವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಕ್ರೀಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಘ ಉಚಿತ ಆರೋಗ್ಯ ತಪಾಸಣೆ ಶಿಬಿರ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ತಾಕೀತು ಮಾಡಿದರು. ಬಿಇಒ ಮರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಿಡಿಪಿಒ ಬಸವರಾಜು, ಸಮಾಜ ಕಲ್ಯಾಣಾಧಿಕಾರಿ ಸಿದ್ದರಾಜು, ದೈಹಿಕ ಪರಿವೀಕ್ಷಣಾಧಿಕಾರಿ ಸಂಪತ್ ದೊರೈರಾಜ್, ಬಿಸಿಯೂಟ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಕ್ಷೇತ್ರ ಸಂಪನ್ಮೂಲ ಸಮನ್ವಧಿಕಾರಿ ಕೃಷ್ಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಗಂಗಾಧರಯ್ಯ, ಕುಪ್ಯ ಪುಟ್ಟಸ್ವಾಮಿ, ಟಿ.ಎನ್. ನಾಗೇಂದ್ರ, ಎಚ್.ಡಿ. ಮಾದಪ್ಪ, ಶಂಕರ್, ಪ್ರಕಾಶ್, ಸಿಆರ್ಪಿ ಸೋಸಲೆ ನಾಗೇಶ್, ಶಿವಸ್ವಾಮಿ, ಬಿಆರ್ಪಿ ಬಸವರಾಜು ಇದ್ದರು.
'ಶಿಕ್ಷಣದಿಂದ ಸಮಗ್ರ ಪ್ರಗತಿ'
ಪಿರಿಯಾಪಟ್ಟಣ: ಶಿಕ್ಷಣ ಪ್ರತಿಯೊಬ್ಬರ ಜೀವನ ಹಾಗೂ ಬದುಕಿನ ನೆಮ್ಮದಿ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಉಪನ್ಯಾಸಕ ಎಚ್.ಕೆ. ಮಹೇಶ್ ಹೇಳಿದರು. ಪಟ್ಟಣದ ವಿಶ್ವಮಾನವ ವಿದ್ಯಾಸಂಸ್ಥೆಯ ಶಾರದಾ ಕಾನ್ವೆಂಟ್ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಉತ್ತಮ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಅದರೊಂದಿಗೆ ಜೀವನದಲ್ಲಿ ಉತ್ತಮ ಮೌಲ್ಯ ಅಳವಡಿಸಿಕೊಂಡು ಬದುಕಬೇಕು ಆಗಮಾತ್ರ ಸಾರ್ಥಕತೆ ಕಾಣಲು ಸಾಧ್ಯ ಎಂದರು. ಸಂಸ್ಥೆಯ ಕಾರ್ಯದರ್ಶಿ ವಿಠಲಮೂರ್ತಿ, ಕರವೇ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್ ಫಯಾಜ್, ಸಂಸ್ಥೆ ಅಧ್ಯಕ್ಷ ಗೋಪಾಲಗೌಡ, ಮುಖಂಡರಾದ ಕರಿಯಪ್ಪ, ಮಂಜುಳಾ, ಶಿಕ್ಷಕರಾದ ಗೀತಾ, ರಕ್ಷಿತಾ, ಅಲಿಯಾಫಿರ್ದೋಸ್ ಇದ್ದರು.
ತಮಿಳು ಸಂಘದ ದಿನಚರಿ ಬಿಡುಗಡೆ
ಎಚ್.ಡಿ. ಕೋಟೆ: ತಮಿಳು ಸಂಘದ 2014ರ ಕ್ಯಾಲೆಂಡರ್ ಅನ್ನು ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಪಾಶ್ಚಿಮಾತ್ಯರ ಆಚರಣೆಯು ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಆವರಿಸಿಕೊಂಡಿದೆ. ಇದರಿಂದ ನಮ್ಮ ಸಂಸ್ಕೃತಿಯನ್ನು ಕಡೆಗಣಿಸಲಾಗಿದೆ ಎಂದು ವಿಷಾದಿಸಿದರು. ಒಕ್ಕೂಟದ ಉಪಾಧ್ಯಕ್ಷ ಜಗದೀಶ್ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಪುಗಳೆಂದಿ, ಮುಖಂಡರಾದ ಫ್ರಾನ್ಸಿಸ್, ವಿಜಯ್ಕುಮಾರ್, ನಾಗರಾಜು, ತಮ್ಮಣ್ಣೇಗೌಡ, ಎಪಿಎಂಸಿ ಮಹದೇವು ಇದ್ದರು.