ಎತ್ತಿನಗಾಡಿ ಸ್ಪರ್ಧೆ; ಕೃಷಿಕರಿಗೆ ಸ್ಫೂರ್ತಿ
ಟಿ. ನರಸೀಪುರ: ಜೋಡಿ ಎತ್ತಿನಗಾಡಿ ಓಟದಂತಹ ಹಳ್ಳಿಗಾಡಿನ ಸ್ಪರ್ಧೆಗಳು ರೈತರು ಕ್ರೀಡೆಗಳಲ್ಲಿ ಭಾಗವಹಿಸಲು ಸ್ಫೂರ್ತಿಯನ್ನು ನೀಡುತ್ತವೆ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ಹಳೇ ತಿರುಮಕೂಡಲಿನಲ್ಲಿ ಭಾನುವಾರ ಚೌಡೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಎರಡನೇ ವರ್ಷದ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ವರ್ಷವೀಡಿ ದುಡಿಮೆಯಲ್ಲಿ ತೊಡಗಿಸಿಕೊಳ್ಳುವ ರೈತರಿಗೆ ಗ್ರಾಮೀಣ ಸೊಗಡಿನ ಕ್ರೀಡೆ ಮತ್ತು ಪಂದ್ಯಗಳು ರೈತರಿಗೆ ಉತ್ತೇಜನ ನೀಡುತ್ತವೆ ಎಂದು ತಿಳಿಸಿದರು.
ಸುಗ್ಗಿ ಮುಗಿದ ಸಂಭ್ರಮದಲ್ಲಿರುವ ರೈತರು ಜಾತ್ರೆ ಹಾಗೂ ಎತ್ತಿನಗಾಡಿ ಓಟದ ಸ್ಪರ್ಧೆಗಳಲ್ಲಿ ಹುಮ್ಮಸ್ಸಿನಿಂದಲೇ ಭಾಗವಹಿಸುವುದು ವಾಡಿಕೆಯಾಗಿದೆ. ಚೌಡೇಶ್ವರಿ ಯುವಕರ ಸೇವಾ ಸಮಿತಿ ತಂಡ ಕಳೆದ ವರ್ಷ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿ, ಎರಡನೇ ಭಾರಿಗೆ ರೈತ ಕ್ರೀಡೆಯನ್ನು ಆಯೋಜಿಸಿ ಗ್ರಾಮೀಣ ಸೊಗಡನ್ನು ಜೀವಂತವಾಗಿಡುವ ಕಾರ್ಯ ಶ್ಲಾಘನೀಯ ಎಂದರು.
ಶಾಸಕ ಆರ್. ಧರ್ಮಸೇನ ಮಾತನಾಡಿ, ಆಧುನಿಕತೆ ಎಂಬುದು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿದ್ದರೆ, ಜನರಿಂದ ಕಳೆಗಟ್ಟುತ್ತಿದ್ದ ಜಾತ್ರೆಗಳು ಕಳೆಗುಂದುತ್ತಿವೆ. ತಾವೇ ಚಿಕ್ಕವರಿಂದಾಗ ಮುಡುಕುತೊರೆ ಜಾತ್ರೆ ನೋಡಿ, ಜಾತ್ರೆಯ ಸೊಗಸನ್ನು ಕಣ್ತುಂಬಿಕೊಳ್ಳುತ್ತಿದ್ದೆವು. ಈಗ ಅಲ್ಲಿಯೂ ಜಾತ್ರೆಯ ವೈಭವ ಕಡಮೆಯಾಗಿದೆ ಎಂದು ಸ್ಮರಿಸಿದರು.
ಗೆಲುವಿಗಾಗಿ ಎತ್ತುಗಳ ಓಟ: ಉರಿಯುವ ಬಿಸಿಲಿನ ಜಳಕವನ್ನೂ ಲೆಕ್ಕಿಸದೇ ಸುತ್ತಲೂ ಕಿಕ್ಕೀರಿದು ತುಂಬಿದ್ದ ಜನಸಾಗರದ ನಡುವೆ ಗೆಲುವಿಗಾಗಿ ಜೋಡಿ ಎತ್ತುಗಳು ನಾಗಲೋಟದಲ್ಲಿ ಓಡುವ ನೋಟ ರೋಮಾಂಚನಕಾರಿಯಾಗಿತ್ತು. ಪಟ್ಟಣದ ಹಳೇ ತಿರುಮಕೂಡಲಿನ ರಾಷ್ಟ್ರೀಯ ಹೆದ್ಧಾರಿ 212ರ ಪಕ್ಕದ ಜಮೀನಿನಲ್ಲಿ ರಾಜ್ಯ ಮಟ್ಟದ ಎರಡನೇ ವರ್ಷದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಗೆ ಸುಸಜ್ಜಿತ ವಿಶಾಲವಾದ ಅಂಕಣವನ್ನು ಸಿದ್ಧಪಡಿಸಲಾಗಿತ್ತು. ಧಾವಂತದಲ್ಲಿ ಗೆಲ್ಲಲು ವೇಗವಾಗಿ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ನೋಡಲು ಸಹಸ್ರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಚಿಕ್ಕಮಗಳೂರು, ಹಾವೇರಿ, ಹಾಸನ, ಕಡೂರು, ಮಂಡ್ಯ, ಸಾಲಿಗ್ರಾಮ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಲು ಎತ್ತುಗಳೊಂದಿಗೆ ರೈತರು ಆಗಮಿಸಿದ್ದರು.
ನಿವೃತ್ತ ದೈಹಿಕ ಶಿಕ್ಷಕ ಆರ್.ಎಸ್. ಬಸವರಾಜು, ಶಿವಮೂರ್ತಿ, ರಾಧಾಕೃಷ್ಣ, ಗಂಜಾಂ ಅಕ್ರಪಾಷ, ಕೃಷ್ಣಪ್ಪ ಹಾಗೂ ಅತ್ತಹಳ್ಳಿ ಮಹದೇವ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಬನ್ನೂರು ಪುರಸಭೆ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಜಿಪಂ ಸದಸ್ಯರಾದ ಕೆ. ಮಹದೇವ, ರೇಣುಕಾ ನಾಗರಾಜು, ಚಾ.ನಗರ ಎಪಿಎಂಸಿ ಅಧ್ಯಕ್ಷ ಆಲ್ದೂರ್ ಸಿ. ರಾಜಶೇಖರ, ಚೌಡೇಶ್ವರಿ ಯುವಕರ ಸೇವಾ ಸಮಿತಿ ಗೌರವಾಧ್ಯಕ್ಷ ಪಿ. ಸ್ವಾಮಿನಾಥ್‌ಗೌಡ, ಅಧ್ಯಕ್ಷ ಪಿ. ಪುಟ್ಟರಾಜು, ಮುಖಂಡ ಆರ್. ಚೇತನ್, ತಾಪಂ ಸದಸ್ಯರಾದ ಸಿ. ವೆಂಕಟೇಶ್, ಪಿ. ಗಿರೀಶ್, ಭೈರಾಪುರ ಗ್ರಾಪಂ ಅಧ್ಯಕ್ಷೆ ಪದ್ಮವೆಂಕಟೇಶ್, ಉಪಾಧ್ಯಕ್ಷ ಪುಟ್ಟು ಇದ್ದರು.
ಮುಖಂಡರಾದ ಯಡದೊರೆ ಸುಬ್ಬನಾಯ್ಕ, ಕೈಯಂಬಳ್ಳಿ ಜಿ. ನಟರಾಜು, ಪಟೇಲ್ ಎನ್.ವಿ. ಫಣೀಶ್, ಅಮ್ಜದ್‌ಖಾನ್, ಪಶುಪಾಲನೆ ಸಹಾಯಕ ನಿರ್ದೇಶಕ ಡಾ. ಚಿನ್ನಸ್ವಾಮಿ, ಡಾ. ಕರುಣಾಕರ್, ಮಹದೇವಣ್ಣ, ಎ.ಜೆ. ವೆಂಕಟೇಶ್, ಸುಬ್ಬಣ್ಣ, ಚೌಡೇಶ್ವರಿ ಯುವಕರ ಸೇವಾ ಸಮಿತಿಯ ಟಿ.ಎಸ್. ಚೇತನ್, ಮುಕುಂದ, ಸಿ. ನಂದೀಶ್, ಹರೀಶ್, ಶಂಕರ, ರವಿ ಇದ್ದರು.