ಕೆರೆಗೆ ನೀರು ತುಂಬಿಸಲು ಶ್ರಮ: ಮಂಜುನಾಥ್
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನ ದೊಡ್ಡ ಹೆಜ್ಜೂರು ಮತ್ತು ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪ್ರಯತ್ನಿಸುವುದಾಗಿ ಶಾಸಕ ಎಚ್.ಪಿ. ಮಂಜುನಾಥ್ ಭರವಸೆ ನೀಡಿದರು.
ತಾಲೂಕಿನ ಹನಗೋಡು ಹೋಬಳಿ ದೊಡ್ಡ ಹೆಜ್ಜೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಮಾತನಾಡಿದ ಅವರು, ದೊಡ್ಡ ಹೆಜ್ಜೂರು, ಮುದಗನೂರು, ಚಿಕ್ಕೆಜ್ಜೂರು ಕೆರೆಗಳಿಗೆ ಹಾಗೂ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಬಿಲ್ಲೆನ ಹೊಸಳ್ಳಿಯ ಹೊಸಕೆರೆ, ಕಾಳಬೋಚನಹಳ್ಳಿಯ ತಾವರೆಕೆರೆ, ಕಚುವಿನಹಳ್ಳಿಯ ಹೊಸಕೆರೆ, ಅರಣ್ಯದೊಳಗಿನ ಭೀಮನಕಟ್ಟೆಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಹಾಗೂ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಯೋಜನೆಯ ರೂಪು ರೇಷೆ ತಯಾರಿಸಿ ಈ ಭಾಗದ ರೈತರ ನಿಯೋಗದೊಂದಿಗೆ ಮನವರಿಕೆ ಮಾಡುವುದಾಗಿ ಭರವಸೆ ನೀಡಿದರು.
ಗ್ರಾಪಂ ಅಧ್ಯಕ್ಷ ಶಿವಕುಮಾರ್ ಸದಸ್ಯರಾದ ಶಾವರ್, ಶಾತಾಜ್, ದೇವರಾಜ್, ಮುಖಂಡರಾದ ವೆಂಕಟೇಶ್, ಶಿವಕುಮಾರ್, ಪಟೇಲ್ ರವಿಗೌಡ, ಲೋಕೇಶ್, ರಮೇಶ್, ಲೋಕೇಶ್, ಗಣೇಶ್, ಮಾದೇವ ಮತ್ತಿತರರು ಇದ್ದರು.