ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಧೂಮಕೇತು ಅಪಶಕುನ ಎಂಬುದು ಮೌಢ್ಯ'

Mainashree
Updated On : 5 Jan 2014, 11:41 am

ಮೈಸೂರು: ಧೂಮಕೇತು ಕೇವಲ ಒಂದು ಆಕಾಶಕಾಯ ಹೊರತು ಇದು ಅಪಶಕುನವಲ್ಲ ಎಂದು ಮಂಡ್ಯದ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಟಿ. ಶಿವಲಿಂಗಸ್ವಾಮಿ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕ ಹಾಗೂ ಮೈಸೂರು ಸೈನ್ಸ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ತಾಲೂಕಿನ ದೇವಲಾಪುರ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಧೂಮಕೇತು ಐಸಾನ್ ಮತ್ತು ದಿನನಿತ್ಯದಲ್ಲಿ ಸೂರ್ಯನೊಂದಿಗೆ ಮಾಡುವ ಪ್ರಯೋಗಗಳ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆಕಾಶಕಾಯವಾದ ಧೂಮಕೇತುವನ್ನು ಅಪಶಕುನ ಎಂದು ಭಾವಿಸಲಾಗುತ್ತಿದೆ. ಧೂಮಕೇತು ಕಾಣಿಸಿಕೊಂಡರೆ ಅಪಾಯ ಆಗುತ್ತದೆ ಎನ್ನುತ್ತಾರೆ. ಕಾಕತಾಳೀಯವೆಂಬಂತೆ ಯಾರಾದರೂ ಗಣ್ಯವ್ಯಕ್ತಿಗಳು ಸತ್ತರೆ ಅದಕ್ಕೆ ಧೂಮಕೇತುವೇ ಕಾರಣ ಎನ್ನುವುದು ಇನ್ನೂ ರೂಢಿಯಲ್ಲಿದೆ. ಇವೆಲ್ಲವೂ ಶುದ್ಧ ಸುಳ್ಳು. ಧೂಮಕೇತುಗಳು ನಮ್ಮ ಸೌರಮಂಡಲದ ಹೊರಗಿನ ಊರ್ತ್ ಮೋಡಗಳಲ್ಲಿವೆ. ಇವು ಅಡ್ಡಾದಿಡ್ಡಿಯಾಗಿ ಚಲಿಸುವಾಗ ಒಂದಕ್ಕೊಂದು ಘರ್ಷಣೆಗೊಂಡು ಕೆಲವು ಧೂಮಕೇತುಗಳು ಸೌರಮಂಡಲದೊಳಕ್ಕೆ ಬರುತ್ತವೆ ಎಂದು ಅವರು ಹೇಳಿದರು.
ಇವು ಸೂರ್ಯನ ಗುರುತ್ವಾಕರ್ಷಣ ಬಲಕ್ಕೊಳಪಟ್ಟು ಒಂದು ಕಕ್ಷೆಯನ್ನು ಪಡೆದು ಸೂರ್ಯನೆಡೆಗೆ ಸಾಗುತ್ತವೆ. ಹಾಗೆ ಸಾಗುವಾಗ ಗ್ರಹಗಳಿಗೆ ಅಪ್ಪಳಿಸುವ ಸಾಧ್ಯತೆ ಇರುತ್ತೆ. ಇನ್ನು ಕೆಲವು ಸೂರ್ಯನನ್ನು ಬಳಸಿಕೊಂಡು ಹೋಗುತ್ತವೆ. ಹಾಗೆ ಸೂರ್ಯನ ಹತ್ತಿರ ಬಂದ ಧೂಮಕೇತುಗಳು ಸೂರ್ಯನ ತಾಪಕ್ಕೆ ಕರಗಿ ಸುಂದರವಾದ ಬಾಲವನ್ನು ಉಂಟು ಮಾಡುತ್ತವೆ. ಧೂಮಕೇತುಗಳು ಅಪರೂಪದ ಆಕಾಶಕಾಯಗಳು ಎಂದು ವಿವರಿಸಿದರು.
ಬಿಇಒ ರಾಮಾರಾಧ್ಯ ಕಾರ್ಯಾಗಾರ ಉದ್ಘಾಟಸಿದರು. ಮುಖ್ಯೋಪಾಧ್ಯಾಯ ಬಿ. ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ  ಸಂತೋಷ್‌ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement