ಲ್ಯಾನ್ಸ್ಡೌನ್ ಕಾಮಗಾರಿ ವಿಳಂಬ
ಮೈಸೂರು: ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಲ್ಯಾನ್ಸ್ಡೌನ್ ಕಟ್ಟಡದ ಸಂರಕ್ಷಣೆ ಕಾರ್ಯವನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ತಾನು ನೀಡಿದ ಅನುದಾನ ಹಿಂದಿರುಗಿಸುವಂತೆ ನಗರಪಾಲಿಕೆಗೆ ಪತ್ರ ಬರೆದಿದೆ.
ಲ್ಯಾನ್ಸ್ಡೌನ್ ಕಟ್ಟಡ ಸಂರಕ್ಷಣೆಗೆ ಅನುದಾನ ನೀಡಿ ಎರಡು ವರ್ಷಕಳೆದು, ನಾಲ್ಕು ಮಂದಿ ಪ್ರಾಣಬಿಟ್ಟರೂ ಕಟ್ಟಡದ ಸಂರಕ್ಷಣಾ ಕಾರ್ಯ ಮಾತ್ರ ಇದುವರೆಗೂ ಆರಂಭವಾಗಿಲ್ಲ. ಲ್ಯಾನ್ಸ್ಡೌನ್ ಕಟ್ಟಡ ಬೀಳುವ ಆರು ತಿಂಗಳ ಮುಂಚೆಯೆ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯು ನಗರ ಪಾಲಿಕೆಗೆ ರು. 75 ಲಕ್ಷ ಅನುದಾನ ನೀಡಿತ್ತು. ಸುಮಾರು ರು. 1.50 ಕೋಟಿ ವೆಚ್ಚದ ಕಾಮಗಾರಿಗೆ ಪ್ರಾಚ್ಯವಸ್ತು ಇಲಾಖೆ ಮತ್ತು ನಗರ ಪಾಲಿಕೆ ತಲಾ ರು. 75 ಲಕ್ಷ ಅನುದಾನ ನೀಡಬೇಕಿತ್ತು. ಆದರೆ ಪಾಲಿಕೆ ಕರೆದ ಟೆಂಡರ್ನಲ್ಲಿ ಒಬ್ಬರು ಮಾತ್ರ ಭಾಗವಹಿಸಿದ್ದರಿಂದ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಲಾಯಿತು.
ಅಷ್ಟರಲ್ಲಿ ಶತಮಾನಗಳಷ್ಟು ಹಳೆಯದಾದ ಲ್ಯಾನ್ಸ್ಡೌನ್ ಕಟ್ಟಡ ಕುಸಿದು ಬಿದ್ದು ನಾಲ್ಕು ಅಮೂಲ್ಯ ಜೀವಗಳನ್ನು ಬಲಿ ತೆಗೆದುಕೊಂಡಿತು. ಮಳಿಗೆಯಲ್ಲಿ ಕೆಲಸಮಾಡಿಕೊಂಡಿದ್ದವರ ತಲೆಯ ಮೇಲೆ ಕ್ಷಣಾರ್ಧದಲ್ಲಿ ಕಟ್ಟಡದ ಮೇಲ್:ಲಾವಣಿ ಕುಸಿದು ಬೀಳುವ ಮೂಲಕ ದೊಡ್ಡ ದುರಂತ 2012 ಆಗಸ್ಟ್ 26 ರಂದು ಸಂಭವಿಸಿತು. ಆ ಕ್ಷಣಕ್ಕೆ ಆರ್ಭಟಿಸಿದ ಅಂದಿನ ಸಚಿವರು, ಪ್ರತಿಪಕ್ಷ ನಾಯಕರು ಮತ್ತು ಅಧಿಕಾರಿಗಳು ಕಟ್ಟಡದ ಮುಂದಿನ ಆವರಣದಲ್ಲಿ ತಾತ್ಕಾಲಿಕ ಶೆಲ್ಟರ್ ನಿರ್ಮಿಸಿ ಬಾಡಿಗೆ ನೀಡಿ ಕೈತೊಳೆದುಕೊಂಡರು.
ಈಗ್ಗೆ ಅನುದಾನ ಬಿಡುಗಡೆಯಾಗಿ ಎರಡು ವರ್ಷ, ದುರಂತ ಸಂಭವಿಸಿ ವರ್ಷದ ಮೇಲೆ ನಾಲ್ಕೂವರೆ ತಿಂಗಳಾಗಿದೆ. ಆದರೂ ಕಟ್ಟಡ ಸಂರಕ್ಷಣೆ ಕಾರ್ಯವನ್ನು ಪಾಲಿಕೆ ಕೈಗೆತ್ತಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಬೇಸತ್ತ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯು ತಾನು ನೀಡಿದ ರು.75 ಲಕ್ಷ ಹಿಂದಿರುಗಿಸುವಂತೆ ಪತ್ರ ಬರೆದಿದೆ. ಕಳೆದ ಆರು ತಿಂಗಳ ಹಿಂದೆಯೆ ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಲ್ಯಾನ್ಸ್ಡೌನ್ ಕಟ್ಟಡ ನಿರ್ಮಾಣ ಕಾರ್ಯವನ್ನು ತಾವು ವಿಳಂಬ ಮಾಡಿರುವುದರಿಂದ ಇಲಾಖೆ ನೀಡಿದ ರು.75 ಲಕ್ಷ ಕೂಡಲೇ ಹಿಂದಿರುಗಿಸಬೇಕು ಎಂದು ಮನವಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮತ್ತೊಂದು ಪತ್ರ ಬರೆಯಲಾಗಿದೆ.
1892ರ ಸುಮಾರಿನಲ್ಲಿ ನಿರ್ಮಾಣವಾದ ಈ ಕಟ್ಟಡ ಇದುವರೆಗೂ ಪಾರಂಪರಿಕ ಇಲಾಖೆ ವ್ಯಾಪ್ತಿಗೆ ಒಳಪಟ್ಟಿಲ್ಲ. ನಗರ ಪಾಲಿಕೆ ತನ್ನ ಆಸ್ತಿಯಾಗಿ ಇಟ್ಟುಕೊಂಡಿದೆ. ಶತಮಾನದಷ್ಟು ಹಳೆಯದಾದ ಕಟ್ಟಡಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆಗೆ ಸೇರುತ್ತದೆ. ಆದರೆ ಕಟ್ಟಡದ ಹಕ್ಕನ್ನು ನೀಡಬೇಕಷ್ಟೆ.
ನಗರಾಭಿವೃದ್ಧಿ ಇಲಾಖೆಯ ನಿಯಮಕ್ಕೆ ತಿದ್ದುಪಡಿ ಆಗದ ಹೊರತು ನಗರ ಪಾಲಿಕೆ, ನಗರ ಸಭೆ, ಪುರಸಭೆ ವ್ಯಾಪ್ತಿಯಲ್ಲಿನ ಯಾವುದೆ ಪಾರಂಪರಿಕ ಕಟ್ಟಡವನ್ನು ಪ್ರಾಚ್ಯವಸ್ತು ಇಲಾಖೆ ವಹಿಸಿಕೊಳ್ಳುವಂತಿಲ್ಲ.
ಕಾಮಗಾರಿ ಆರಂಭಿಸುವ ಕುರಿತು ನಗರಾಭಿವೃದ್ಧಿ ಇಲಾಖೆ ಅನುಮೋದನೆಗೆ ಕಳುಹಿಸಲಾಗಿದೆ. ಇಲಾಖೆಯು ಕೆಲಮೊಂದು ಸ್ಪಷ್ಟನೆ ಬಯಸಿದೆ. ಇಲಾಖೆ ಅನುಮೋದನೆ ದೊರೆತರೆ ಕಾಮಗಾರಿ ಆರಂಭಿಸಲಾಗುವುದು. ಆದರೆ ಪ್ರಾಚ್ಯವಸ್ತು ಇಲಾಖೆ ತಮ್ಮ ಅನುದಾನ ಹಿಂದಿರುಗಿಸಿ ಎಂದು ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿಲ್ಲ.
ಪಿ.ಜಿ. ರಮೇಶ್, ನಗರ ಪಾಲಿಕೆ ಆಯುಕ್ತ
ಡಿ.ಎನ್. ಮಹೇಂದ್ರ