ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸುದ್ದಿ ಸಂಕ್ಷೇಪ

Mainashree
Updated On : 5 Jan 2014, 11:39 am

ಸತೀಶ್ ರಾಜ್ಯ ಮಟ್ಟಕ್ಕೆ ಆಯ್ಕೆ
ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಿಗಾಗಿ ನಡೆದ ತಾಲೂಕು ಮತ್ತು ಜಿಲ್ಲಾ ಮಟ್ಟದ ಸಹಪಠ್ಯ ಚಟುವಟಿಕಾ ಸ್ಪರ್ಧೆಯ ಆಶುಭಾಷಣ ವಿಭಾಗದಲ್ಲಿ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ. ಸತೀಶ್ ಜವರೇಗೌಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಣಿಗಳ ದತ್ತು ಸ್ವೀಕಾರ
ಮೈಸೂರು: ಚಾಮರಾಜೇಂದ್ರ ಮೃಗಾಲಯದಿಂದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಹಲವು ಮಂದಿ ಪ್ರಾಣಿಗಳನ್ನು ದತ್ತು ಸ್ವೀಕರಿಸಿದ್ದಾರೆ. ಬೆಂಗಳೂರಿನ ಸೃಜನಾ, ಪ್ರದ್ಯುಮ್ನ ಅವರು ನೀಳಕಾಯ ಬಾಲದ ಮೀರ್ಕಟ್,  ದ್ರುಪದ್ ಉಪಾಧ್ಯಾ, ಮಿಕಿತ ಉಪಾಧ್ಯ, ಮಚಿಕೇತ್ ಅವರು ಕಾಳಿಂಗ ಸರ್ಪ, ಬ್ರೌನ್ ಲೆಮೂರ್, ನಕ್ಷತ್ರ ಆಮೆ, ದೆಹಲಿಯ ಮಿಯಾನ್, ಅನನ್ಯ, ಅರ್ವ್, ಶಾಲಿಮಾರ್  ಬಾಗ್ ಅವರು ಜಂಡಾಯ ಕೊನ್ಯುರ್, ಪುಣೆಯ ಸೊಹಾ, ಷಾನ್ ಅವರು ಲಯನ್ ಟೇಲ್‌ಡ್ ಮೆಕಾ, ಏಷಿಯನ್ ಗ್ರೇ ಹಾರ್ನ್‌ಬಿಲ್, ಬೆಂಗಳೂರಿನ ತೇಜಸ್ ಎಸ್. ದೇಶ್‌ಮುಖ್, ಸಾರಂಗ್ ಜಿ. ದೇಶ್‌ಮುಖ್ ಅವರು ವೆಸ್ಟರ್ನ್ ಗ್ರೇ ಪ್ಯಾರೇಟ್, ಮೈಸೂರಿನ ಶ್ರೀಕಾಂತ ಬಾಲಿಕಾ ಪ್ರೌಢಶಾಲೆಯು ರೇನ್‌ಬೋ ಲೋರಿಕೀಟ್,  ಶಾನೌ ಜೊಅನಾ ಅವರು ಲವ್ ಬರ್ಡ್ ಅನ್ನು ದತ್ತು ಪಡೆದಿದ್ದಾರೆ.
ನಾಳೆ ಕೃತಕ ಕಾಲುಗಳ ವಿತರಣೆ
ಮೈಸೂರು: ರೋಟರಿ ಮೈಸೂರು ಮಹಾವೀರ್ ಕೃತಕಾಂಗ ಕೇಂದ್ರವು ರೋಟರಿ ಮೈಸು ಮತ್ತು ಜೈನ್ ಮೆಡಿಕಲ್ ರಿಲೀಫ್ ಸೊಸೈಟಿ ಸಹಯೋಗದೊಂದಿಗೆ ಜ. 7ರ ಬೆಳಗ್ಗೆ 11ಕ್ಕೆ ಕೆ.ಆರ್.ಎಸ್. ರಸ್ತೆಯ ರೋಟರಿ ಪ್ರೌಢಶಾಲೆಯಲ್ಲಿ ಕೃತಕ ಕಾಲುಗಳ ವಿತರಣೆ ಸಮಾರಂಭ ಏರ್ಪಡಿಸಿದ್ದು, ಡಾ.ಎಂ.ಎ. ಸಲೀಂ, ಸುಬ್ರಹ್ಮಣ್ಯಂ, ಮನೋಹರ್ ಭಾಗವಹಿಸುವರು.
ರಂಗಕಲಾವಿದ ಚನ್ನಬಸಪ್ಪಗೆ ಸನ್ಮಾನ
ಮೈಸೂರು: ಹಿರಿಯ ರಂಗಭೂಮಿ ಕಲಾವಿದ ಡಿ.ವಿ. ಚನ್ನಬಸಪ್ಪ ಅವರನ್ನು ಮೈಸೂರು ನಗರ ಕಲಾವಿದರ ಬಳಗದ ಪದಾಧಿಕಾರಿಗಳು ಸನ್ಮಾನಿಸಿದರು.
82ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಚನ್ನಬಸಪ್ಪ ಅವರ ಸ್ವಗೃಹದಲ್ಲಿ 'ಗೆಜ್ಜೆ-ಹೆಜ್ಜೆ' ರಂಗತಂಡದ ಅಧ್ಯಕ್ಷ ಡಾ.ಎನ್.ಎನ್. ಪ್ರಹ್ಲಾದ್, ಜನತಾ ಬಜಾರ್ ರಾಮಯ್ಯ, ರಂಗವಾಣಿ ಮಹದೇವಪ್ಪ, ರಂಗಪ್ರಗತಿ ಮಹದೇವು ಮತ್ತಿತರರು ಸನ್ಮಾನಿಸಿ, ರಂಗ ಸೇವೆ ಶ್ಲಾಘಿಸಿದರು.
ಚನ್ನಬಸಪ್ಪ ರಂಗಭೂಮಿಯಲ್ಲಿ 55ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದಾರೆ. ನಟನಾ ಚಾತುರ್ಯ ಉಳ್ಳ ಇವರು ಭಕ್ತ ಕನಕದಾಸ, ಅಯ್ಯಪ್ಪಸ್ವಾಮಿ ಅವತಾರಗಳು, ಸಾಹುಕಾರ, ದಾನಶೂರಕರ್ಣ,ಮಕ್ಮಲ್ ಟೋಪಿ, ದೇವದಾಸಿ, ಎಚ್ಚಮನಾಯಕ, ಗೌಡರ ಗಮ್ಮತ್ತು, ಬೇಡರಕಣ್ಣಪ್ಪ ನಾಟಕ ನಿರ್ದೇಶಿಸಿದ್ದಾರೆ. ಬಿ.ಜಿ. ರಾವ್ ರಂಗತಂಡದವರು ಇವರ ಸೇವೆ ಗುರುತಿಸಿ ರಂಗಸಿಂಹ ಬಿರುದು ನೀಡಿದ್ದಾರೆ.  
ಬಿಎಐ ಪದಾಧಿಕಾರಿಗಳ ಆಯ್ಕೆ
ಮೈಸೂರು: ಬಿಲ್ಡರ್ಸ್ ಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕಕ್ಕೆ ನೂತನ ಪದಾಧಿಕಾರಿಗಳು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಎಂ.ಸಿ. ಮಲ್ಲಿಕಾರ್ಜುನ್, ಚುನಾಯಿತ ಅಧ್ಯಕ್ಷರಾಗಿ ಎಂ.ಎಸ್. ರಾಮ್‌ಪ್ರಸಾದ್, ಉಪಾಧ್ಯಕ್ಷರಾಗಿ ಎನ್. ಸುಬ್ರಹ್ಮಣ್ಯ, ನಿಕಟಪೂರ್ವ ಅಧ್ಯಕ್ಷರಾಗಿ ಎನ್.ಪಿ. ವಿಶ್ವನಾಥ್, ಗೌರವ ಕಾರ್ಯದರ್ಶಿಯಾಗಿ ಕೆ. ಸುಬ್ರಹ್ಮಣ್ಯರಾವ್, ಸಹ ಕಾರ್ಯದರ್ಶಿಯಾಗಿ ಜೆ.ವಿ.ಆರ್. ನೈಧ್ರುವ, ಖಜಾಂಚಿಯಾಗಿ ಆರ್. ರಘುನಾಥ್. ರಾಷ್ಟ್ರ ಮಟ್ಟದ ಜಿಸಿಎಂಸಿ ಸದಸ್ಯರಾಗಿ ಬಿ.ಆರ್. ಬದರೀನಾಥ್, ಎನ್.ಎಸ್. ಮುರಳೀಧರ್, ಎಂ.ಎಸ್. ನಂದಕುಮಾರ್, ಎಸ್. ಪ್ರಕಾಶ್, ಕೆ. ಶ್ರೀರಾಮ್, ಸಹ ಸದಸ್ಯರಾಗಿ ಎ.ವಿ.  ಶ್ರೀಧರ್, ಎಸ್.ಆರ್. ಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ. ಅಜಿತ್ ನಾರಾಯಣ್, ಎನ್.ಎಸ್. ಆನಂದ್, ಜಿ. ಅಶೋಕ್, ಕೆ.ಎಸ್. ಬಾಲಾಜಿ, ಬಿ.ಎಸ್. ದಿನೇಶ್, ಎಸ್.ಎಲ್. ದಿನೇಶ್, ಎಸ್. ಮಹದೇವಸ್ವಾಮಿ, ಕೆ.ಆರ್. ಪ್ರಭಾಕರರಾವ್, ಎಂ.ಡಿ. ಪ್ರವೀಣ್ ಪಾಲ್, ಕೆ.ಎಂ. ರಘುನಾಥ್, ಎಂ. ರತ್ನರಾಜ್, ಕೆ. ಸತೀಶ್ ಮೋಹನ್, ವಿ. ಶ್ರೀನಾಥ್, ಎಸ್. ವಾಸುದೇವನ್, ವೆಂಕಟೇಶ್‌ಪ್ರಸಾದ್. ಸಹ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಚ್.ಆರ್. ಆಚಾರ್, ಕೆ.ಯು. ಗಣಪತಿ, ಸಿ. ಗೋಪಾಲ್, ಕೆ.ಟಿ. ಗೋವಿಂದರಾಜು, ಪಿ.ಎಂ. ಪರಮೇಶ್ವರಮೂರ್ತಿ, ಟಿ.ಎನ್. ಪಾರ್ಥಸಾರಥಿ, ಪಿ. ಪುಟ್ಟಸ್ವಾಮಿ, ಎಸ್.ಎಚ್. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
ವಿವೇಕಾನಂದ ಲೇಸರ್ ಪ್ರದರ್ಶನ
ಮೈಸೂರು: ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನದ ಅಂಗವಾಗಿ ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಲೇಸರ್ ಪ್ರದರ್ಶನ ನಡೆಯಿತು.
ವಿಶ್ವ ವಿಖ್ಯಾತ ಜಾದೂಗಾರ್ ಪಿ.ಸಿ. ಸರ್ಕಾರ್ ಪುತ್ರ ಮಣಿಕ್ ಸರ್ಕಾರ್ ನೇತೃತ್ವದಲ್ಲಿ ನಡೆದ ಈ ಲೇಸರ್ ಪ್ರದರ್ಶನವು 1893 ರ ವಿಶ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಅಮೆರಿಕದ ಸಹೋದರಿ ಸಹೋದರರೇ ಎಂದು ಸಂಬೋಧಿಸಿ ಎಲ್ಲರನ್ನೂ ವಿಶ್ವಭ್ರಾತೃತ್ವದ ದಿವ್ಯ ಭಾವದಲ್ಲಿ ಪುನೀತಗೊಳಿಸಿದ ಆ ಘಟನೆಯೊಂದಿಗೆ ಆರಂಭವಾಯಿತು.
ವಿವೇಕಾನಂದರ ಬಾಲ್ಯದಿಂದ ಮೊದಲುಗೊಂಡು ಅವರ ಬದುಕಿನ ವಿವಿಧ ಆಯಾಮಗಳನ್ನು ವರ್ಣರಂಜಿತವಾಗಿ ಅನಾವರಣಗೊಳಿಸಿದರು. ಇದಕ್ಕೂ ಮುನ್ನ ರಾಮಕೃಷ್ಣ ಪರಮಹಂಸ, ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದ ದಿವ್ಯತ್ರಯರಿಗೆ ವಂದನೆ ಎಂಬ ಪ್ರಾರ್ಥನಾ ನೃತ್ಯ ಗಮನ ಸೆಳೆಯಿತು.   
ಕಿಡ್ನಿ ಚಿಕಿತ್ಸೆಗೆ ನೆರವಾಗುವಿರಾ?
ಮೈಸೂರು: ರಾಜೇಂದ್ರನಗರ ವಾಸಿ 81 ವರ್ಷದ ವಯೋವೃದ್ಧರೊಬ್ಬರು ಕಳೆದ 7 ತಿಂಗಳಿಂದ ಕಿಡ್ನಿ ಸಮಸ್ಯೆಯಿಂದ ಳುಗಳಿಂದ ಬಳಲುತ್ತಿದ್ದು, ಡಯಾಲಿಸಿಸ್ ಮಾಡಿಸಲು ಹಣಕಾಸು ಇಲ್ಲದೆ ದಾನಿಗಳಿಂದ ನೆರವು ಕೋರಿದ್ದಾರೆ.
ನಗರದ ವಿಕ್ರಂ ಆಸ್ಪತ್ರೆಯಲ್ಲಿ ವಿಪಿ ಪಿಸ್ತೂಲ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಡಯಾಲಿಸಿಸ್ ಜತೆಗೆ ರಕ್ತವಾಂತಿಯಾಗುವುದು, ಉಸಿರಾಟದ ಗತಿ ಕಡಿಮೆಯಾಗುತ್ತಿದ್ದು, ಸಿಸಿಎಗೆ ವರ್ಗಾಯಿಸಿದಾಗ ಒಂದೇ ಬಾರಿಗೆ ರು. 30 ಸಾವಿರ  ರ್ಚಾಗುತ್ತಿದೆ. ಇವರ ಮಗ ಜಿ. ಪ್ರವೀಣ್‌ಕುಮಾರ್ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ಮಾಸಿಕ ರು. 5 ಸಾವಿರ ಸಂಬಳ ಬರುತ್ತಿದೆ. ಇದೇ ಮನೆಗೆ ಆಧಾರವಾಗಿದೆ. ದಾನಿಗಳು ಹಣಕಾಸಿನ ನೆರವು ನೀಡಲು ಬಯಸಿದ್ದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಖಾತೆ ನಂ. 64042695394ಗೆ ಜಮಾ ಮಾಡಬಹುದಾಗಿದೆ. ಮೊ. 99002-10829 ಸಂಪರ್ಕಿಸಿ.
 ಕೃಷ್ಣಮೂರ್ತಿಗೆ ಶ್ರದ್ಧಾಂಜಲಿ
ಮೈಸೂರು: ಇತ್ತೀಚೆಗೆ ನಡೆದ ರೈಲು ದುರಂತದಲ್ಲಿ ಸಾವಿಗೀಡಾದ ಸಂಗೀತ ವಿಮರ್ಶಕ ಎಸ್.ಆರ್. ಕೃಷ್ಣಮೂರ್ತಿ ಅವರಿಗೆ ಜೆಎಸ್‌ಎಸ್ ಸಂಗೀತ ಸಭಾ ಸಂತಾಪ ಸೂಚಿಸಿದೆ. ಸಭಾದ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಎಸ್‌ಆರ್‌ಕೆ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಲಾಯಿತು. ಈ ವೇಳೆ ಮಾತನಾಡಿ ಗಣ್ಯರು, ಇವರ ಬರಹಗಳು ಕಾರ್ಯಕ್ರಮಕ್ಕೆ ಹೋಗಲಾಗದವರಿಗೆ ಸ್ವಅನುಭವ ನೀಡುತ್ತಿದ್ದವು ಎಂದು ಬಣ್ಣಿಸಿದರು.
ಶ್ರೀಕೃಷ್ಣ-ಬಲರಾಮ ರಥಯಾತ್ರೆ
ಮೈಸೂರು: ಇಸ್ಕಾನ್ ವತಿಯಿಂದ ಶ್ರೀಕೃಷ್ಣ-ಬಲರಾಮ ರಥಯಾತ್ರೆಯು ಶನಿವಾರ ನಡೆಯಿತು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ಕೃಷ್ಣ ಹಾಗೂ ಬಲರಾಮ ವಿಗ್ರಹ ಹೊತ್ತ ರಥಯಾತ್ರೆ ತೆರಳಿತು. ಭಕ್ತರು ಮಾರ್ಗದುದ್ದಕ್ಕೂ ಭಜನೆ ನಡೆಸಿಕೊಟ್ಟರು. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಂತರ ಜಯನಗರದ ದೇವಸ್ಥಾನದಲ್ಲಿ ಅಂತ್ಯಗೊಂಡಿತು.       

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement