9ರಿಂದ 66ನೇ ರಾಷ್ಟ್ರೀಯ ಸಮ್ಮೇಳನ
ಕ.ಪ್ರ.ವಾರ್ತೆ ಮೈಸೂರು ಜ. 6
ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಕಿವಿ, ಮೂಗು ಮತ್ತು ಗಂಟಲು ವಿಭಾಗ, ಒಟೊಲ್ಯಾರಿಂಗಾಲಿಜಿಸ್ಟ್ ಆಫ್ ಇಂಡಿಯಾ ಮೈಸೂರು ಮತ್ತು ಕರ್ನಾಟಕ ವಿಭಾಗವು ನಗರದ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ಜ.9 ರಿಂದ 12 ರವರೆಗೆ 66ನೇ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ.
ಜ.9ರ ಸಂಜೆ 4ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ್ ಮುಖ್ಯ ಅತಿಥಿಯಾಗಿ ಆಗಮಿಸುವರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಎನ್. ಬೆಟಕೆರೂರ್, ಜೆಎಸ್‌ಎಸ್ ವಿವಿ ಕುಲಪತಿ ಡಾ.ಬಿ. ಸುರೇಶ್, ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ ಅತಿಥಿಯಾಗಿ ಭಾಗವಹಿಸಲಿದ್ದು, ಎಒಐನ ಅಧ್ಯಕ್ಷ ಡಾ.ಎಂ.ಕೆ. ತನೇಜ ಅಧ್ಯಕ್ಷತೆ ವಹಿಸುವರು ಎಂದು ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಡಾ.ಎಂ.ಬಿ. ಭಾರತಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನ ಅಂಗವಾಗಿ ಅಂದು ಬೆಳಗ್ಗೆ 10ಕ್ಕೆ ನಡೆಯುವ ಸಿಎಂಇ ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಉಪ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜೆಎಸ್‌ಎಸ್ ವಿವಿ ಕುಲಸಚಿವ ಡಾ.ಬಿ. ಮಂಜುನಾಥ, ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಆರ್.ಕೆ. ಚತುರ್ವೇದಿ, ವೈದ್ಯಕೀಯ ಅಧೀಕ್ಷಕ ಡಾ.ಎಂ. ಗುರುಸ್ವಾಮಿ ಭಾಗವಹಿಸುವರು ಎಂದು ಅವರು ಹೇಳಿದರು. 24 ವರ್ಷಗಳ ನಂತರ ಮೈಸೂರಿನಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ದೇಶದಾದ್ಯಂತ ಸುಮಾರು 1440 ಮಂದಿ ಪ್ರತಿನಿಧಿಗಳು ಭಾಗವಹಿಸುವರು. 98 ಮಂದಿ ತಜ್ಞ ವೈದ್ಯರು ವೈಜ್ಞಾನಿಕ ಪ್ರಬಂಧ ಮಂಡಿಸುವರು. 280 ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು 125 ಎಲೆಕ್ಟ್ರಾನಿಕ್ ಪೋಸ್ಟರ್ ಮಂಡಿಸುವರು ಎಂದು ಅವರು ವಿವರಿಸಿದರು.
ಗೋಯಲ್ಲಿ ಡಾ.ಟಿ. ಶಿವರಾಮ್ ಶೆಟ್ಟಿ, ಡಾ.ಬಿ.ಜಿ. ಪ್ರಕಾಶ್, ಡಾ.ಎ.ಆರ್. ಬಾಬು ಇದ್ದರು.