ಒಳಚರಂಡಿ, ನೀರಿನ ಸಮಸ್ಯೆಗೆ ಪರಿಹಾರ
ಕ.ಪ್ರ.ವಾರ್ತೆ ಮೈಸೂರು ಜ. 6
ಶೀಘ್ರದಲ್ಲಿಯೇ ಗಂಗೋತ್ರಿ ಮತ್ತು ಕುದುರೆ ಮಾಳದ ಒಳಚರಂಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಚಾಮರಾಜ ಕ್ಷೇತ್ರದ ಶಾಸಕ ವಾಸು ಭರವಸೆ ನೀಡಿದರು.
ಕ್ಷೇತ್ರದ 23ನೇ ವಾರ್ಡ್ನಲ್ಲಿ ಸೋಮವಾರ ಬೆಳಗ್ಗೆ ಪಾದಯಾತ್ರೆ ಏರ್ಪಡಿಸಿದ್ದ ಸಂದರ್ಭದಲ್ಲಿ ಅವರು ನಾಗರಿಕರ ಸಮಸ್ಯೆಗಳನ್ನು ಆಲಿಸಿ, ಈ ಭರವಸೆ ನೀಡಿದರು.
ಅನೇಕ ವರ್ಷಗಳಿಂದ ಈ ಬಡಾವಣೆಯಲ್ಲಿ ಒಳಚರಂಡಿ ಸಮಸ್ಯೆ ಎದುರಾಗಿದ್ದು, ಪ್ರತಿದಿನ ಒಂದಲ್ಲಾ ಒಂದು ಕಡೆ ಚರಂಡಿ ಕಟ್ಟಿಕೊಂಡು ಅನಾನುಕೂಲ ಉಂಟಾಗಿದೆ. ಅದರಲ್ಲೂ ಮಳೆ ಬಂದ ಸಂದರ್ಭದಲ್ಲಿ ಅದರ ಕೊಳಚೆ ನೀರು ಮನೆಯೊಳಗೆ ನುಗ್ಗುವ ಹಿನ್ನೆಲೆಯಲ್ಲಿ ನಿವಾಸಿಗಳು ಬವಣೆ ಪಡುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಅದೇ ರೀತಿ ಕುಡಿಯುವ ನೀರಿಗೂ ಸಮಸ್ಯೆಯಿದ್ದು, ಸಮರ್ಪಕವಾಗಿ ನೀರು ಸರಬರಾಜಾಗದೆ ಪರಿತಪಿಸುವಂತಾಗಿದೆ. ಟ್ಯಾಂಕ್ ಮೂಲಕ ನೀರು ತರಿಸುವಂತಾಗಿದೆ. ಅಲ್ಲದೆ ಇಲ್ಲಿನ ತೆರೆದ ಮೋರಿಗಳು ಸ್ವಚ್ಛತೆ ಇಲ್ಲದೆ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.
ಒಳಚರಂಡಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಪರ್ಯಾಯ ಮಾರ್ಗ ಹಾಗೂ ಅಗತ್ಯ ಪೈಪು ಅಳವಡಿಸುವ ಬಗ್ಗೆ ಹಾಗೂ ತೆರೆದ ಮೋರಿಯನ್ನು ನಿಗದಿತವಾಗಿ ಸ್ವಚ್ಛಗೊಳಿಸಬೇಕು. ನೀರಿನ ಸರಬರಾಜಿಗೆ ಕೂಡಲೇ ಅಗತ್ಯ ಕ್ರಮ ವಹಿಸಬೇಕು. ಇದರ ಜೊತೆಗೆ ಬಿಪಿಎಲ್ ಕಾರ್ಡ್ ವಿತರಣೆಗೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ವಾಸು ಸೂಚಿಸಿದರು.
ಈ ಸಂದರ್ಭದಲ್ಲಿ ಕುದುರೆಮಾಳದ ನಿವಾಸಿಗಳು, ಕಳೆದ ಹತ್ತಾರು ವರ್ಷಗಳಿಂದ ಮನೆ ಇಲ್ಲದೆ ವಾಸಿಸಲು ತುಂಬ ತೊಂದರೆ ಅನುಭವಿಸುತ್ತಿದ್ದೇವೆ. ಕೂಡಲೇ ಆಶ್ರಯ ಮನೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮೇಯರ್ ಎನ್.ಎಂ. ರಾಜೇಶ್ವರಿ, ಮಾಜಿ ಮೇಯರ್ಗಳಾದ ಪುಷ್ಪಲತಾ ಚಿಕ್ಕಣ್ಣ, ರಾಜೇಶ್ವರಿ ಪುಟ್ಟಸ್ವಾಮಿ, ಟಿ.ಬಿ. ಚಿಕ್ಕಣ್ಣ, ಪಾಲಿಕೆ ಸದಸ್ಯೆ ಭಾಗ್ಯವತಿ ಸುಬ್ರಹ್ಮಣ್ಯ, ಆಯುಕ್ತ ಪಿ.ಜಿ. ರಮೇಶ್, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ಜಸ್ಕೊ ಇಇ ಜಯರಾಂ ಇದ್ದರು.