ಕೃಷಿ ಇಲಾಖೆ ಸಹಾಯಧನ ಮುಂದುವರಿಯಲಿ
ಪಿರಿಯಾಪಟ್ಟಣ: ಕೃಷಿ ಇಲಾಖೆಯಿಂದ ಮೊದಲು ಇದ್ದ ಹಾಗೆಯೇ ರೈತರಿಗೆ ಸಹಾಯಧನದ ಯೋಜನೆಯನ್ನು ಮುಂದುವರಿಸುವಂತೆ ಒತ್ತಾಯಿಸಿ ತಾಪಂ ಸದಸ್ಯರು ಒಮ್ಮತದಿಂದ ಸರ್ಕಾರವನ್ನು ಮನವಿ ಮಾಡಿಕೊಂಡರು.
ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಪವಿತ್ರಾ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ರೈತರಿಗೆ ಇಲಾಖೆ ವತಿಯಿಂದ ನೀಡಲಾಗುತ್ತಿದ್ದ ಸಹಾಯಧನದ ಯೋಜನೆಯಲ್ಲಿ ಮಾರ್ಪಾಡು ಮಾಡಲಾಗಿದ್ದು, ರೈತರು ಸಹಾಯಧನದಡಿ ಖರೀದಿಸುವ ಪರಿಕರಗಳಿಗೆ ರೈತರೇ ಪೂರ್ಣ ಹಣ ಭರಿಸಬೇಕು. ನಂತರ ಸರ್ಕಾರದಿಂದ ರೈತರಿಗೆ ಸಹಾಯಧನ ನೀಡಲಾಗುತ್ತದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ರಾಜು ತಿಳಿಸಿದರು.
ಇದರ ಸಾಧಕ ಬಾಧಕಗಳ ಬಗ್ಗೆ ಕೆಲ ಹೊತ್ತು ಚರ್ಚೆ ನಡೆಸಿದ ಸದಸ್ಯರು, ರೈತರು ಮೊದಲೇ ಹಣವನ್ನು ಪೂರ್ಣವಾಗಿ ಕಟ್ಟಿ ಪರಿಕರ ಪಡೆಯುವುದು ಕಷ್ಟವಾಗುತ್ತದೆ. ಹಾಗಾಗಿ ಸರ್ಕಾರ ಸಹಾಯಧನ ನೀಡುವ ಯೋಜನೆಯನ್ನು ಮೊದಲಿನಂತೆಯೇ ಮುಂದುವರಿಸಿ ಸಹಾಯಧನ ಹೊರತುಪಡಿಸಿ ಮಿಕ್ಕ ಹಣವನ್ನು ಮಾತ್ರ ರೈತರಿಂದ ಪಡೆಯುವುದು ಸೂಕ್ತ ಎಂದು ಒತ್ತಾಯಿಸಿದರು.
ಕ್ರಮ ಕೈಗೊಳ್ಳಲು ಸೂಚನೆ: ತಾಲೂಕಿನಲ್ಲಿ ನಕಲಿ ವೈದ್ಯರ ಬಗ್ಗೆ ಸಮರ್ಪಕವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯ ರಘುನಾಥ್ ಆರೋಪಿಸಿದರು. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿ ಡಾ. ಕಿರಣ್ ಅವರಿಗೆ ಸೂಚಿಸಿದರು. ತಹಸೀಲ್ದಾರ್ ಎಂ.ಕೆ. ಸವಿತಾ ಮಾತನಾಡಿ, ತಾಲೂಕಿನಲ್ಲಿ ಪಡಿತರ ವಿತರಣೆಯಲ್ಲಿ ವಿದ್ಯುತ್ ಕೊರತೆಯಿಂದ ಅಳತೆ ಯಂತ್ರ ಕೆಲಸ ನಿರ್ವಹಿಸುತ್ತಿಲ್ಲ ಅಥವಾ ಪಡಿತರ ವಿತರಣೆಯಲ್ಲಿ ತೂಕ ಕಮ್ಮಿಬರುತ್ತಿದೆ ಎಂಬ ಆರೋಪಗಳು ಕೇಳಿ ಬಂದಲ್ಲಿ ತಕ್ಷಣ ತಮ್ಮ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ಈವರೆಗೆ ಹಣ ಬಿಡುಗಡೆ ಆಗಿಲ್ಲ ಎಂಬ ವಿಚಾರದ ಚರ್ಚೆಯ ವೇಳೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳೊಂದಿಗೆ ಜಗಳವಾಡುತ್ತಿದ್ದುದ್ದನ್ನು ಗಮನಿಸಿದ ಇಒ ಸಭಾ ನಡವಳಿಕೆಯನ್ನು ಎಲ್ಲರೂ ಪಾಲಿಸಬೇಕು. ಇದು ಯಾವುದೇ ಚರ್ಚೆ ಆಗಬೇಕಿದ್ದರೂ ಅಧ್ಯಕ್ಷರ ಅಪ್ಪಣೆ ಪಡೆದು ಚರ್ಚೆ ನಡೆಸಬೇಕು. ಇನ್ನು ಮುಂದೆ ಸಭೆಗೆ ಅಡ್ಡಿಪಡಿಸುವ ರೀತಿಯಲ್ಲಿ ಯಾರೇ ನಡೆದುಕೊಂಡರೂ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸೂಕ್ತ ಶಿಸ್ತು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಪಂ ಉಪಾಧ್ಯಕ್ಷ ಎಚ್.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅತ್ತಹರ್ ಮತಿನ್ ಇದ್ದರು.