ಪೊಲೀಸ್ ಕ್ರೀಡಾಕೂಟ: ಡಿಎಆರ್‌ಗೆ ಸಮಗ್ರ ಪ್ರಶಸ್ತಿ
ಮೈಸೂರು: ಮೈಸೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯು (ಡಿಎಆರ್) ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.
ನಂಜನಗೂಡು ಉಪ ವಿಭಾಗದ ಕವಲಂದೆ ಠಾಣೆಯ ಪೇದೆ ಚಿರಂಜೀವಿ ಉತ್ತಮ ಪುರುಷ ಕ್ರೀಡಾಪಟು ಹಾಗೂ ಮೈಸೂರು ದಕ್ಷಿಣ ಠಾಣೆಯ ವಸಂತ ಅವರು ಉತ್ತಮ ಮಹಿಳಾ ಕ್ರೀಡಾಪಟು ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಚಿರಂಜೀವಿ ಅವರು 200 ಮೀಟರ್ ಓಟ, 400 ಮೀ. ಓಟ, ಜಾವಲಿನ್ ಥ್ರೋನಲ್ಲಿ ಪ್ರಥಮ, 100 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದು ಉತ್ತಮ ಪುರುಷ ಕ್ರೀಡಾಪಟು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅದೇ ರೀತಿ ವಸಂತ ಅವರು 100 ಮೀ., 200 ಮೀ. ಓಟ, ಬ್ರಾಡ್ ಜಂಪ್‌ನಲ್ಲಿ ಪ್ರಥಮ, ಶಾಟ್‌ಪುಟ್‌ನಲ್ಲಿ ದ್ವಿತೀಯ, ಡಿಸ್ಕಸ್ ಥ್ರೋ ಮತ್ತು ಜಾವಲಿನ್ ಥ್ರೋನಲ್ಲಿ ತೃತೀಯ ಬಹುಮಾನ ಪಡೆದು ಉತ್ತಮ ಮಹಿಳಾ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.
ಜ್ಯೋತಿನಗರದಲ್ಲಿರುವ ಡಿಎಆರ್ ಕವಾಯತು ಮೈದಾನದಲ್ಲಿ ಮೂರು ದಿನಗಳಿಂದ ನಡೆದ ಈ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವು ಸೋಮವಾರ ಸಂಜೆ ನಡೆಯಿತು. ದಕ್ಷಿಣ ವಲಯದ ಐಜಿಪಿ ಡಾ.ಕೆ.ರಾಮಚಂದ್ರರಾವ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಎಸ್ಪಿ ಅಭಿನವ್ ಅಶೋಕ್ ಖರೆ, ಹೆಚ್ಚುವರಿ ಎಸ್ಪಿ ಆರ್.ಬಿ. ಮೋಹನ್ ರೆಡ್ಡಿ ಇದ್ದರು.