'ಪ್ರಸಾರಾಂಗ ಮುದ್ರಣದ ಗುಣಮಟ್ಟ ಹೆಚ್ಚಲಿ'
ಮೈಸೂರು: ವಿದೇಶಿ ಮುದ್ರಣದಷ್ಟೆ ಗುಣಮಟ್ಟವನ್ನು ಮೈಸೂರು ವಿವಿ ಪ್ರಸಾರಾಂಗವು ಕಾಯ್ದುಕೊಳ್ಳಬೇಕು ಎಂದು ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಮಾನಸ ಗಂಗೋತ್ರಿಯ ಇಎಂಎಂಆರ್ಸಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸುಮಂಗಲಾ ಚಿಕ್ಕಸ್ವಾಮಿ ಮತ್ತು ನಾಗೇಂದ್ರಬಾಬು ಕೃಷ್ಣಪ್ಪ ಅವರ ಒತ್ತಡ ನಿರ್ವಹಣೆ- ಮಾಹಿತಿ ತಂತ್ರಜ್ಞಾನ ನೌಕರರ ಬಗ್ಗೆ ಅಧ್ಯಯನ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಒತ್ತಡ ನಿರ್ವಹಣೆ ಕುರಿತ ಕೃತಿಯನ್ನು ಜರ್ಮನ್ ಮುದ್ರಣಾಲಯದಲ್ಲಿ ಮುದ್ರಿಸಲಾಗಿದೆ. ಮೈಸೂರು ವಿವಿ ಪ್ರಸಾರಾಂಗವು ಇಷ್ಟೆ ಗುಣಮಟ್ಟದಲ್ಲಿ ಪುಸ್ತಕಗಳನ್ನು ಮುದ್ರಿಸಬೇಕು. ಇಂದಿನ ಈ ಸ್ಪರ್ಧಾತ್ಮಕ ಸಂದರ್ಭದಲ್ಲಿ ನಮ್ಮ ಮುದ್ರಣ ವ್ಯವಸ್ಥೆಯೂ ಆ ಮಟ್ಟಕ್ಕೆ ಬೆಳೆಯಬೇಕಾದ ಅಗತ್ಯವಿದೆ. ಮೈಸೂರು ವಿವಿಯ ಎಲ್ಲಾ ಪಿಎಚ್.ಡಿ ಪ್ರಬಂಧಗಳನ್ನು ಮುದ್ರಿಸಬೇಕು. ಇದರಿಂದ ಪ್ರಬಂಧಗಳನ್ನು ನಕಲು ಮಾಡುವುದು ತಪ್ಪಿದಂತೆ ಆಗುತ್ತದೆ ಎಂದರು.
ಒತ್ತಡ ನಿರ್ವಹಣೆ ಕುರಿತ ಈ ಕೃತಿಯ ಬೆಲೆ ಆರು ಸಾವಿರ ರು. ಇರುವುದರಿಂದ ನಾವು ಈ ಕೃತಿಯನ್ನು ಬೇರೆ ವಿವಿಗಳಿಗೆ ಮತ್ತು ಗ್ರಂಥಾಲಯಗಳಿಗೆ ಕಳುಹಿಸಲು ಆಗದು. ಆದ್ದರಿಂದ ಸ್ಥಳೀಯ ಮುದ್ರಣಾಲಯದಲ್ಲಿ ಮುದ್ರಿಸಿದರೆ ರಾಜ್ಯದ ಎಲ್ಲಾ ವಿವಿಗಳ ಗ್ರಂಥಾಲಯಕ್ಕೆ ಕಳುಹಿಸಿಕೊಡಬಹುದು ಎಂದು ಅವರು ಹೇಳಿದರು.
ಮಾರ್ಲ್ಯಾಬ್ ಸಾಫ್ಟ್ವೇರ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಕೆ.ಸಿ. ಚನ್ನಕೇಶವ ಮಾತನಾಡಿ, ಒತ್ತಡ ಎಂಬುದು ಕೇವಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರ ಇಲ್ಲ. ಎಲ್ಲಾ ಕ್ಷೇತ್ರದಲ್ಲಿಯೂ ಇದ್ದೆ ಇದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 20 ರಿಂದ 25 ವರ್ಷದವರು ಮತ್ತು ವಿವಾಹಿತರು ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ದೈಹಿಕ ಮತ್ತು ಮಾನಸಿಕ ಒತ್ತಡಗಳು ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಸಂಶೋಧಿಸಿರುವ ಈ ಕೃತಿ ಬಹಳ ಮೌಲ್ಯಯುತವಾಗಿದೆ ಎಂದು ಹೇಳಿದರು.
ಬಿ.ಎನ್. ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ನ ಮುಖ್ಯಸ್ಥೆ ಪ್ರೊ.ಆಯಿಷ ಎಂ. ಷರೀಫ್ ಮಾತನಾಡಿದರು. ಲೇಖಕರಾದ ಸುಮಂಗಲಾ ಚಿಕ್ಕಸ್ವಾಮಿ, ನಾಗೇಂದ್ರಬಾಬು ಕೃಷ್ಣಪ್ಪ ಇದ್ದರು.