ಬಿಜೆಪಿ ಯುವ ಮೋರ್ಚಾ ದಿಂದಲೂ ಪ್ರತಿಭಟನೆ
ಮೈಸೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಡಿ.ಕೆ. ಶಿವಕುಮಾರ್ ಮತ್ತು ರೋಷನ್‌ಬೇಗ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಹ ಸೋಮವಾರ ಪ್ರತಿಭಟಿಸಿದರು.
ಅಕ್ರಮ ಎಸಗಿ, ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಡಿ.ಕೆ. ಶಿವಕುಮಾರ್ ಮತ್ತು ರೋಷನ್ ಬೇಗ್ ಅವರನ್ನು ಕೂಡಲೇ ರಾಜ್ಯಪಾಲರು ಸಂಪುಟದಿಂದ ವಜಾಗೊಳಿಸಬೇಕು. ಕಳಂಕಿತರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ದೇಶನ ತಿರಸ್ಕರಿಸುವ ಎದೆಗಾರಿಕೆ ತೋರಿಸಿಲ್ಲ. ಜೊತೆಗೆ ನೈತಿಕ ರಾಜಕಾರಣದ ಬದಲಿಗೆ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮೈಸೂರು ಮಿನರಲ್ಸ್ ಕಂಪನಿಯಿಂದ 10.80 ಲಕ್ಷ ಟನ್ ಅದಿರನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ ಖಾಸಗಿಯವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಸರ್ಕಾರಿ ಕಂಪನಿಗೆ ಅಪಾರ ನಷ್ಟ ಉಂಟುಮಾಡಿದ್ದಾರೆ. ಅಂತೆಯೇ ರೋಷನ್‌ಬೇಗ್ ಅವರು ಬೇಗೂರು ಸಮೀಪದ ಕೈಗಾರಿಕೆ ಸ್ಥಾಪನೆಗೆ ಭೂಮಿ ಮಂಜೂರು ಮಾಡಿಸಿಕೊಂಡು ಅದನ್ನು ರಿಯಲ್ ಎಸ್ಟೇಟ್ ದಂಧೆಗೆ ಬಳಸಿದ ಆರೋಪ ಎದುರಿಸುತ್ತಿದ್ದಾರೆ. ಆದ್ದರಿಂದ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ನಗರ ಯುವ ಮೋರ್ಚಾ ಅಧ್ಯಕ್ಷ ಕೆ.ದೇವರಾಜ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಎಲ್. ಜಗದೀಶ್, ಶಿವರಾಜ್, ರಾಜೇಂದ್ರ, ಸತೀಶ್, ಗಣೇಶ್, ಸಂಪತ್ ಇದ್ದರು.