ಬೀಜೋತ್ಪಾದಕ ರೈತರ ಕೊರತೆ c
ಸುತ್ತೂರು: ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ಹೆಬ್ಬಾಳ್ ಅವರೆ ಎಚ್ಎ 4 ತಳಿಯ ಬೀಜೋತ್ಪಾದನಾ ಕ್ಷೇತ್ರೋತ್ಸವವನ್ನು ಹೊಸಕೋಟೆ ನಾಗೇಂದ್ರ ಅವರ ಜಮೀನಿನಲ್ಲಿ ಏರ್ಪಡಿಸಿತ್ತು.
ಕೇಂದ್ರದ ವಿಷಯ ತಜ್ಞೆ ದಿವ್ಯಾ ಅವರು ನಾಟಿ ತಳಿಗೂ, ಹೆಬ್ಬಾಳ ಅವರೆ- ಎಚ್ಎ 3 ಹಾಗೂ ಎಚ್ಎ 4 ತಳಿಗೂ ಇರುವ ವ್ಯತ್ಯಾಸ ತಿಳಿಸಿಕೊಟ್ಟರು. ಉತ್ತಮ ಬೀಜೋತ್ಪಾದಕ ರೈತರ ಕೊರತೆಯಿಂದ ಬಿತ್ತನೆಗೆ ಅಗತ್ಯವಾದ ಬೀಜ ಒದಗಿಸಲು ಸಾಧ್ಯವಾಗುತ್ತಿಲ್ಲ. ರೈತರಿಗೆ ಉತ್ತಮವಾದ ಬೀಜ ದೊರಕಲು ಆಸಕ್ತ ಯುವ ರೈತರು ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಲ್ಲಿ ರೈತರಿಗೆ ಹೆಚ್ಚು ಲಾಭ ಬರುವುದಲ್ಲದೇ, ಉತ್ತಮ ಬೀಜದ ಅಭಾವವು ಕಡಿಮೆ ಆಗುತ್ತದೆ. ಬೀಜೋತ್ಪಾದನೆಯಲ್ಲಿ ಆಸಕ್ತಿಯಿರುವ ರೈತರಿಗೆ ಬೀಜ ತರುವುದರಿಂದ ಹಿಡಿದು ಬೀಜ ಮಾರುವವರೆಗೂ ಕೃಷಿ ವಿಜ್ಞಾನ ಕೇಂದ್ರ ಮಾರ್ಗದರ್ಶನ ನೀಡುತ್ತಿದೆ ಎಂದರು.
ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಅವರೆ ಬೀಜಕ್ಕೆ 7 ರಿಂದ 9 ಸಾವಿರ ಸಿಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಪ್ರತಿ ಕ್ವಿಂಟಾಲ್ಗೆ 8500 ರಿಂದ 9,500 ನಿಗದಿ ಪಡಿಸಲಾಗಿದೆ. ಕಡಿಮೆ ಅವಧಿಯ ತಳಿಯಾದ ಹೆಬ್ಬಾಳ್ ಅವರೆಯಲ್ಲಿ ಒಂದು ಎಕರೆಗೆ 2 ರಿಂದ 3 ಕ್ವಿಂಟಾಲ್ನಷ್ಟು ಒಣ ಬೀಜದ ಇಳುವರಿಯನ್ನು 90 ರಿಂದ 95 ದಿನಗಳೊಳಗೆ ಪಡೆಯಬಹುದು ಹಾಗೂ ಎಕರೆಗೆ ಬೀಜೋತ್ಪಾದನೆಯಿಂದ 25 ಸಾವಿರದಿಂದ 30 ಸಾವಿರ ಲಾಭ ದೊರಕುತ್ತದೆ ಎಂದು ಅವರು ವಿವರಿಸಿದರು.
ವರ್ಷದ ಜೂನ್- ಜುಲೈ, ಸೆಪ್ಟೆಂಬರ್- ಅಕ್ಟೋಬರ್ ಹಾಗೂ ಜನವರಿ ತಿಂಗಳು ಬೀಜೋತ್ಪಾದನೆಗೆ ಸೂಕ್ತ ಕಾಲ. ಅಲ್ಲದೆ ತರಕಾರಿಯಾಗಿ ವರ್ಷದ ಎಲ್ಲಾ ಕಾಲದಲ್ಲೂ ಎಚ್ಎ 4 ತಳಿಯನ್ನು ಬೆಳೆಯಬಹುದು. ಆದ್ದರಿಂದ ಬೀಜಕ್ಕೆ ಬೇಡಿಕೆ ಇರುತ್ತದೆ. ಅವರೆ ಬೇಸಾಯ ಕ್ರಮಗಳಾದ ಬಿತ್ತನೆ, ಗೊಬ್ಬರ, ರೋಗ ಹಾಗೂ ಕೀಟ ನಿಯಂತ್ರಣ, ಬೆರಕೆ ತೆಗೆಯುವುದು, ಬೀಜ ಸಂಸ್ಕರಣೆ ಹಾಗೂ ಶೇಖರಣೆ ಬಗ್ಗೆ ಮಾಹಿತಿ ನೀಡಲಾಯಿತು.
ಕೆವಿಕೆಯ ತೋಟಗಾರಿಕೆ ವಿಷಯ ತಜ್ಞ ಶ್ರೀನಿವಾಸ್ ಮಂಕಣಿ ಅವರು ರೈತರೊಂದಿಗೆ ಚರ್ಚಿಸಿದರು. ಕಾರ್ಯಕ್ರಮ ಸಹಾಯಕ ಜೆ.ಜಿ. ರಾಜಣ್ಣ ಮಾತನಾಡಿದರು. ಅವರೆ ಬೀಜೋತ್ಪಾದನೆಯಲ್ಲಿ ಮೊದಲ ಹೆಜ್ಜೆ ಇಟ್ಟು ಸುತ್ತಲಿನ ರೈತರಿಗೆ ಮಾರ್ಗದರ್ಶಕರಾದ ನಾಗೇಂದ್ರ ಅವರನ್ನು ಅಭಿನಂದಿಸಲಾಯಿತು.