ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ: ನವೀನ ರೈ

Mainashree
Updated On : 6 Jan 2014, 10:45 am

ಹುಣಸೂರು: ಇಂಗ್ಲಿಷ್ ಭಾಷೆ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಲ್ಲ, ಅನೇಕ ಕಾರಣಗಳಿಂದ ಕಷ್ಟವೆನಿಸಬಹುದಾದರೂ ಇಷ್ಟಪಟ್ಟು ಕೇಳುವ, ಕಷ್ಟಪಟ್ಟು ಓದುವ ಮನಸ್ಸಿದ್ದರೆ ಯಾವುದೂ ಕಷ್ಟ ಎನಿಸುವುದಿಲ್ಲ ಎಂದು ಟ್ಯಾಲೆಂಟ್ ವಿದ್ಯಾಸಂಸ್ಥೆ ಮುಖ್ಯಸ್ಥ, ಇಂಗ್ಲಿಷ್ ಅಧ್ಯಾಪಕ ನವೀನ ರೈ ಅಭಿಪ್ರಾಯಪಟ್ಟರು.
ಪಟ್ಟಣದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಪದವಿ ಪರೀಕ್ಷೆ ಪಡೆದಿರುವವರಿಗಾಗಿ ಆಯೋಜಿಸಿದ್ದ ಪರಿಚಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಯಾವುದೇ ಸಾಧನೆಗೆ ಗುರಿ ಇರಬೇಕು. ಇಲ್ಲಿ ಉದ್ಯೋಗಿಗಳು, ಕಾಲೇಜು ಬಿಟ್ಟವರು, ಗೃಹಿಣಿಯರು, ಪರೀಕ್ಷೆ ತೆಗೆದುಕೊಂಡಿದ್ದು, ಈ ಪೈಕಿ ಉದ್ಯೋಗದ ಬಡ್ತಿಗಾಗಿ, ಕೆಲವರು ಪದವಿ ಶೋಕಿಗಾಗಿ ಎಂಬಂತಾಗಿದೆ. ಇವೆಲ್ಲದರ ಜೊತೆಗೆ ಹೆಚ್ಚು ಜ್ಞಾನ ಗಳಿಸಲು, ಪ್ರಪಂಚ ಅರಿಯಲು ಉನ್ನತ ವಿದ್ಯಾಭ್ಯಾಸ ಅವಶ್ಯಕವಾಗಿದೆ. ಇದಕ್ಕಾಗಿ ನಿರಂತರ ಚಟುವಟಿಕೆ, ನಿತ್ಯ ಕನಿಷ್ಠ 2-3 ಗಂಟೆ ಓದಬೇಕು. ಸಾಮಾಜಿಕ ಜ್ಞಾನ ಅರಿಯಲು ಪತ್ರಿಕೆ, ನಿಯತ ಕಾಲಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಸೂಚಿಸಿ ಅಬ್ದುಲ್ ಕಲಾಂ ಅವರನ್ನು ಉದಾಹರಿಸಿದರು. ಪ್ರಾಂಶುಪಾಲ ಪ್ರೊ.ಲೋಹಿತಾಶ್ವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎ. ಆನಂದ್ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ಹುಣಸೂರು, ಪಿರಿಯಾಪಟ್ಟಣ, ಕೆ.ಆರ್. ನಗರ, ಎಚ್.ಡಿ. ಕೋಟೆ ತಾಲೂಕು ಹಾಗೂ ಕೊಡಗಿನ ಅಭ್ಯರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement