ಸವಲತ್ತು ಪಡೆದು ಸಬಲರಾಗಿ
ಕ.ಪ್ರ.ವಾರ್ತೆ ಮೈಸೂರು ಜ. 6
ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸಬಲರಾಗಬೇಕು ಎಂದು ಸಂಸದ ಎಚ್. ವಿಶ್ವನಾಥ್ ಹೇಳಿದರು.
ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಅಸಂಘಟಿತ ಮಹಿಳೆಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜೀವ್ ಆವಾಸ್ ಯೋಜನೆ, ನರ್ಮ್ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ ಮಹಿಳೆಯರಿಗೆ ವಿಶೇಷ ಅವಕಾಶ ಕಲ್ಪಿಸಿದೆ. ಆದರೆ ಅದನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು. ಈ ಹಿಂದಿನ ಸರ್ಕಾರಗಳು ಈ ಕಾರ್ಯದಲ್ಲಿ ವಿಫಲವಾಗಿವೆ ಎಂದು ದೂರಿದರು.
ಜೀವನ ಸುಧಾರಿಸಿಕೊಳ್ಳಿ: ನಿವೇಶನ ಮತ್ತು ಮನೆ ನೀಡುವುದು, ಕಿರುಸಾಲ, ಕಡ್ಡಾಯ ಶಿಕ್ಷಣ ಯೋಜನೆಯಡಿ ಬಡಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶ, ಬಿಪಿಎಲ್ ಕುಟುಂಬದವರಿಗೆ ಆರೋಗ್ಯ ವಿಮೆ, ಶೌಚಾಲಯ ನಿರ್ಮಾಣಕ್ಕೆ ಧನ ಸಹಾಯ ಮುಂತಾದ ನೆರವು ದೊರಕಲಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನ ಸುಧಾರಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮಹಿಳೆಯರು ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಸಮಾಜ ಮತ್ತು ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಯಾರನ್ನು ಅವಲಂಬಿಸದೆ ಸ್ವಾವಲಂಬಿಯಾಗಿ ಬದುಕುವ ಛಲ ತೊಡಬೇಕು ಆಗ ಮಹಿಳಾ ಸಬಲೀಕರಣ ಸಾಧ್ಯ ಎಂದರು.
ಎಂಡಿಎ ಆಯುಕ್ತ ಎಸ್. ಪಾಲಯ್ಯ ಮಾತನಾಡಿ, ಮಹಿಳೆಯರ ಸ್ವಉದ್ಯೋಗ ತರಬೇತಿಗೆ ಅಗತ್ಯವಾದ ಕೇಂದ್ರ ಸ್ಥಾಪನೆಗೆ ಸಿಎ ನಿವೇಶನಕ್ಕೆ ಒಕ್ಕೂಟ ಅರ್ಜಿ ಸಲ್ಲಿಸಿದರೆ, ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದ ಅವರು, ಮನೆ ವಿತರಣೆಗೆ ಅರ್ಜಿ ಕರೆದಾಗ ಸಲ್ಲಿಸುವಂತೆ ತಿಳಿಸಿದರು.
ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಮಾತನಾಡಿ, ನಗರ ಪಾಲಿಕೆ ಮನೆ ನಿರ್ಮಿಸುವ ಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ಕಲ್ಪಿಸುವುದಾಗಿ ಹೇಳಿ, ಸೋಲಾರ್ ದೀಪ ಹಾಗೂ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಮಹಿಳೆಯರ ಅಭಿವೃದ್ಧಿಗೆ ಪೂರಕ ಬೇಡಿಕೆಗಳನ್ನು ಸಭೆಗೆ ಮಂಡಿಸಿದರು. ಮಾಜಿ ಮೇಯರ್ ಸಂದೇಶ್‌ಸ್ವಾಮಿ, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಡಾ.ಕೆ.ರಾಮೇಶ್ವರಪ್ಪ, ಮೈಸೂರು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ರಮೇಶ್, ಕರ್ನಾಟಕ ಕೊಳಚೆ ನಿರ್ಮಾಲನ ಮಂಡಳಿ ಇಇ ಕಪಿನಿಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ಆರ್. ವಿಜಯ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮುಖ್ಯಸ್ಥ ಶ್ರೀಹರಿ ಇದ್ದರು.