ಸಾಲಗಾರನ ನಿಂದನೆ ಸಹಿಸಲಾಗದೇ ಆತ್ಮಹತ್ಯೆ
ಟಿ. ನರಸೀಪುರ: ಸಾಲ ನೀಡಿದಾತ ಬಹಿರಂಗವಾಗಿಯೇ ಜರಿದನೆಂದು ಸಾಲ ಪಡೆದ ವ್ಯಕ್ತಿ ಮನನೊಂದು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಜರುಗಿದೆ.
ಚಿಕ್ಕಮಲ್ಲಯ್ಯ ಎಂಬವರ ಪುತ್ರ ಶಿವಕುಮಾರ್ ಅ. ಕಲ್ಲಪ್ಪ (41) ಆತ್ಮಹತ್ಯೆಗೆ ಮಾಡಿಕೊಂಡವರು. ಅದೇ ಗ್ರಾಮದ ಸುಬ್ಬಣ್ಣ ಎಂಬವರು ನೀಡಿದ್ದ ಸಾಲವನ್ನು ವಾಪಸ್ ಕೊಡಬೇಕೆಂದು ಪೀಡಿಸಿದ್ದಕ್ಕೆ ಶಿವಕುಮಾರ್ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ.
ಸುಬ್ಬಣ್ಣನ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಶಿವಕುಮಾರ್ ವರ್ಷಗಳ ಹಿಂದೆಯಷ್ಟೇ 10 ಸಾವಿರ ಸಾಲ ಪಡೆದುಕೊಂಡಿದ್ದ. ಸಾಲ ಪಡೆಯುವಾಗಲೇ ಖಾಲಿ ಪತ್ರವೊಂದಕ್ಕೆ ಸಹಿ ಮಾಡಿ ನೀಡಿದ್ದರಿಂದ ಸಾಲ ಮರು ಪಾವತಿಯಾಗದಿದ್ದಾಗ ಸುಬ್ಬಣ್ಣ ವಸೂಲಿಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಎನ್ನಲಾಗಿದೆ.
ದಾವೆ ಹಿಂಪಡೆಯುವಂತೆ ಶಿವಕುಮಾರ್ ಮಾಡಿದ ಮನವಿಯನ್ನು ತಿರಸ್ಕರಿಸಿದ ಸುಬ್ಬಣ್ಣ ಸಾರ್ವಜನಿಕವಾಗಿ ತನ್ನ ಮನೆಯಲ್ಲಿಯೇ ಕೂಲಿ ಕೆಲಸ ಮಾಡಿಕೊಂಡಿರುವಂತೆ ಅವಮಾನಿಸಿದ್ದಕ್ಕೆ ಮನನೊಂದ ಶಿವಕುಮಾರ ಕಳೆದ ಭಾನುವಾರ ರಾತ್ರಿ ಜಮೀನಿಗೆ ತೆರಳಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಅರೆಬರೆ ಬೆಂದಿದ್ದ ಆತನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತರೂ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತನ ಪತ್ನಿ ರೇಖಾ ಪೊಲೀಸರಿಗೆ ದೂರು ನೀಡಿದ್ದಾರೆ. ನಂಜನಗೂಡು ಉಪವಿಭಾಗದ ಎಎಸ್ಪಿ ಡಾ. ರಾಜಾ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು. ಸರ್ಕಲ್ ಇನ್‌ಸ್ಪೆಕ್ಟರ್ ಮಹೇಶ್‌ಕುಮಾರ್, ಎಸ್‌ಐ ಕೆ.ಆರ್. ಗೋಪಿಕೃಷ್ಣ, ಮುಖ್ಯ ಪೇದೆ ತಿರುಮಲ್ಲೇಶ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.