ಸುದ್ದಿ ಸಂಕ್ಷೇಪ
ನಾಳೆ ಪ್ರಗತಿ ಪರಿಶೀಲನಾ ಸಭೆ
ಮೈಸೂರು: ತಾಲೂಕು ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯು ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜ.8 ರಂದು ಬೆಳಗ್ಗೆ 11ಕ್ಕೆ ತಾಪಂ ಸಭಾಂಗಣದಲ್ಲಿ ನಡೆಯಲಿದೆ.
ಲೋಡರ್ಸ್‌ಗಳ ಪ್ರತಿಭಟನೆ
ಎಚ್.ಡಿ. ಕೋಟೆ: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಜುನಾಥೇಶ್ವರ ಲೋಡರ್ಸ್ ಅಸೋಷಿಯೇಷನ್‌ನ ಕಾರ್ಮಿಕರು ಸೋಮವಾರ ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯ ಬಳಿ ಪ್ರತಿಭಟನಾ ಧರಣಿ ನಡೆಸಿ, ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಬಡವರಿಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿರುವ ಸರ್ಕಾರವು ಕಾರ್ಮಿಕರ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ ಹಾಗೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಂಘದ ಅಧ್ಯಕ್ಷ ಚಿಕ್ಕಣ್ಣ ಒತ್ತಾಯಿಸಿದರು. ಪ್ರತಿಭಟನೆ ಹಿನ್ನೆಲೆ ಪಟ್ಟಣದ ವರ್ತಕರ ಸಂಘದವರು ತಮ್ಮ ಹಮಾಲಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಒಂದು ಗಂಟೆಗಳ ಕಾಲ ತಮ್ಮ ವಹಿವಾಟು ಬಂದ್ ಮಾಡಿದ್ದರು.
ದೇಶದ ಉನ್ನತಿಗೆ ಶಿಕ್ಷಕರೇ ಪ್ರಮುಖ
ಹುಣಸೂರು: ದೇಶದ ಉನ್ನತಿಗೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅದರ ಪ್ರತೀಕವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಜ್ಞಾನ ನೀಡಿ ಬೆಳವಣಿಗೆಗೆ ಕಾರಣರಾಗುವಂತೆ ಜಿಪಂ ಸದಸ್ಯ ಸಿ.ಟಿ. ರಾಜಣ್ಣ ಹೇಳಿದರು. ತಾಲೂಕಿನ ಹರವೆ ಗ್ರಾಮದ ಲಕ್ಷ್ಮೀ ದೇವಿ ವಿದ್ಯಾಸಂಸ್ಥೆಯ 2014ನೇ ಸಾಲಿನ ಕ್ಯಾಲೆಂಡರ್‌ನ್ನು ಬಿಡುಗಡೆ ಸಮಾರಂಭದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಮಾತನಾಡಿದರು. ಹುಣಸೂರು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸೋಮಶೇಖರ್, ಗ್ರಾಪಂ ಅಧ್ಯಕ್ಷರಾದ ಭಾಗ್ಯಮ್ಮಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಚ್.ಡಿ. ಶಿವಣ್ಣ, ಮಲ್ಲೇಶ್, ಮರಿನಾಯ್ಕ, ಪ್ರಕಾಶ್, ಹುಚ್ಚನಾಯ್ಕ, ಮಂಜುನಾಥ್, ಗ್ರಾಪಂ ಸದಸ್ಯರಾದ ಮಲ್ಲೇಶ್, ಪುಟ್ಟಸ್ವಾಮಿನಾಯ್ಕ, ನರಸಿಂಹ, ರವಿ ಇದ್ದರು.
ಅಗ್ರಹಾರದ ವಿದ್ಯಾರ್ಥಿ ನಾಪತ್ತೆ
ಹುಣಸೂರು: ತಾಲೂಕಿನ ಅಗ್ರಹಾರ ಗ್ರಾಮದ ನಿವಾಸಿ ಈ. ರಾಜೇಗೌಡರ ಪುತ್ರ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಧನಂಜಯ ಡಿ.31 ರಿಂದ ಕಾಣೆಯಾಗಿದ್ದಾರೆ. ಧರ್ಮಾಪುರದ ಮೊರಾರ್ಜಿ ವಸತಿಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಶಾಲೆಗೂ ಬಂದಿಲ್ಲ. ವಿದ್ಯಾರ್ಥಿ ಕುರಿತು ಮಾಹಿತಿ ತಿಳಿದು ಬಂದಲ್ಲಿ ಬಿಳಿಕೆರೆ ಪೊಲೀಸ್ ಠಾಣೆ ದೂ. 08222- 240002, 2521333 ತಿಳಿಸುವಂತೆ ಕೋರಲಾಗಿದೆ.
ಅಂಗನವಾಡಿಗೆ ಅರ್ಜಿ ಆಹ್ವಾನ
ಟಿ. ನರಸೀಪುರ: ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಸ್ಥಳೀಯ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಫೆ. 3ರ ಸಂಜೆ 5 ರೊಳಗೆ ಮೊಹರಾದ ಲಕೋಟೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಟಿ. ನರಸೀಪುರ. ಇಲ್ಲಿಗೆ ಸಲ್ಲಿಸುವುದು. ದೂ. 008227- 261267 ಸಂಪರ್ಕಿಸಬಹುದು.
ಸೈಕಲ್ ವಿತರಣೆ
ಬೈಲಕುಪ್ಪೆ: ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಪ್ರತಿಯೊಂದು ಮಕ್ಕಳು ಶಿಕ್ಷಣ ಪಡೆದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮುಖ್ಯ ಶಿಕ್ಷಕ ಶಿವಪ್ರಕಾಶ್ ಹೇಳಿದರು. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ 2013-14ನೇ ಸಾಲಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ 79 ಮಕ್ಕಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು. ಇದೆ ವೇಳೆ ಎಸ್‌ಡಿಎಂಸಿ ಸದಸ್ಯ ಅನಂತಾಚಾರಿ, ಮೀನಾಕ್ಷಿ, ಶಿಕ್ಷಕರಾದ ಖಾದರ್, ಮಧುರ, ಧನಲಕ್ಷ್ಮಿ, ಉಷಾ, ಪೋಷಕರಾದ ತಿಮ್ಮೆಗೌಡ, ರಾಜು, ಪುಷ್ಪ ಹಾಗೂ ವಿದ್ಯಾರ್ಥಿಗಳು ಇದ್ದರು.
ಲೋಡರ್ಸ್‌ಗಳ ಪ್ರತಿಭಟನೆ
ಪಿರಿಯಾಪಟ್ಟಣ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲೋಡರ್ಸ್ ಅಸೋಸಿಯೇಷನ್ ಸಂಘದ ಕಾರ್ಮಿಕರು ಪಟ್ಟಣದ ಟಿಎಪಿಸಿಎಂಎಸ್ ಮುಂಭಾಗ ತಮ್ಮ ಪ್ರತಿಭಟಿಸಿದರು. ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆಯನ್ನು ಜಾರಿಗೆ ತರದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ, ಪ್ರತಿಭಟನಾಕಾರರು ಅನ್ನಭಾಗ್ಯ ಯೋಜನೆಯಡಿ ಕಾರ್ಯನಿರ್ವಹಿಸುವ ಎಲ್ಲ ಹಮಾಲಿ ಕಾರ್ಮಿಕರಿಗೆ ಕೆಲಸಕ್ಕೆ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು. ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ಶಿವಾನಂದ್, ಫಯಾಜ್, ಗಂಗಾಧರ್, ಶಂಭುಲಿಂಗ ಇದ್ದರು.
ಯುವಕ ನಾಪತ್ತೆ
ಮೈಸೂರು: ಉತ್ತರಪ್ರದೇಶದ ಮಹಾರಾಜ ಗಂಜ್ ಜಿಲ್ಲೆ ಫರಂದಾ ತಾಲೂಕು ಲೆಹಡಾ ಗ್ರಾಮದ ನಿವಾಸಿ ಬದರಿಪ್ರಸಾದ್ ಎಂಬವರ ಪುತ್ರ ತುಳಸಿ (19) ಮೈಸೂರಿನಲ್ಲಿ ಜ.1 ರಿಂದ ನಾಪತ್ತೆಯಾಗಿದ್ದಾರೆ. ತುಳಸಿ ಮತ್ತು ಸಹೋದರ ಸುಮೇರ್ ಮೈಸೂರಿನ ಚಾಮರಾಜಪುರಂನಲ್ಲಿರುವ ಎಸ್.ವಿಜಯಕುಮಾರ್ ಅವರ ಮನೆಯಲ್ಲಿ ಬಣ್ಣದ ಕೆಲಸ ಮಾಡಿಕೊಂಡು, ಅಲ್ಲೆ ವಾಸವಾಗಿದ್ದರು. ಚಹರೆ- 4.10 ಅಡಿ ಎತ್ತರ, ದೃಢವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ದಪ್ಪವಾದ ಮೂಗು, ಎಡಗಡೆಯ ಮೂಗಿನ ಮೇಲೆ ಹಳೆಯ ಗಾಯದ ಗುರುತಿದೆ. ಹಿಂದಿ ಮತ್ತು ಬೋಜಪುರಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2418320 ಸಂಪರ್ಕಿಸಲು ಲಕ್ಷ್ಮಿಪುರಂ ಠಾಣೆಯ ಎಎಸ್‌ಐ ಜೆ. ಚಾಮಯ್ಯ ಕೋರಿದ್ದಾರೆ.
ಅಪ್ಪ ಹಾಕಿದ ಆಲದಮರಕ್ಕೆ ಅಂಟಿಕೊಳ್ಳಬೇಕಿಲ್ಲ: ಶ್ರೀನಿವಾಸಪ್ರಸಾದ್
ನಂಜನಗೂಡು: ಯಾವುದೇ ಸಮುದಾಯ ಕುಲಕಸುಬಿಗೆ ಅಂಟಿಕೊಳ್ಳುವ ಪ್ರಮೇಯ ಈಗ ಇಲ್ಲ ಎಂದು ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟರು. ಪಟ್ಟಣದ ಕಾಮಾಕ್ಷಿಬಾಯಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಜಿಲ್ಲಾ ಗಾಣಿಗರ ಸಮ್ಮೇಳನದಲ್ಲಿ ಪಾಲ್ಗೊಂಡು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ವರ್ಣಾಶ್ರಮ ವ್ಯವಸ್ಥೆಯ ಕಾಲದಲ್ಲಿ ಹಿಂದುಳಿದವರಿಗೆ ಕುಲಕಸುಬಿನ ಹಣೆಪಟ್ಟಿ ಕಟ್ಟಿದ ಪುರೋಹಿತಶಾಹಿ ಸಮುದಾಯದವರು ಅಂತಹ ಸಮುದಾಯಗಳಿಂದ ದುಡಿಸಿ ತಾವು ಐಷಾರಾಮಿ ಜೀವನ ನಡೆಸುತ್ತಿದ್ದರು. ಈಗ ಕಾಲ ಬದಲಾಗಿದೆ. ತುಳಿತಕ್ಕೊಳಗಾದ ಪ್ರತಿ ಸಮುದಾಯದಿಂದಲೂ ಕೂಗು ಎದ್ದಿದೆ ಇದು ಒಳ್ಳೆಯ ಬೆಳವಣಿಗೆ ಎಂದರು. ವಿದ್ಯೆ, ಬುದ್ದಿ, ಅಧಿಕಾರ ಮತ್ತು ಅಂತಸ್ತು ಕುರಿತಾದ ಚಿಂತನೆ ಕೆಳವರ್ಗದಲ್ಲಿ ಪ್ರಾರಂಭಗೊಂಡಿದೆ. ಆದರೆ ಶೋಷಿತರಾದ ನಾವೆಲ್ಲರೂ ಒಂದು ಎಂಬ ವಿಚಾರದಲ್ಲಿ ಕೆಳವರ್ಗದ ಸಮುದಾಯಗಳು ಮೈಮರೆತಿವೆ. ಬ್ರಾಹ್ಮಣರಲ್ಲೂ ಹಿಂದುಳಿದವರಿದ್ದಾರೆ ಅವರೂ ಸಹ ಮೇಲೆ ಬರಬೇಕು ಎಂದರು. ವಿಧಾನಪರಿಷತ್ ಸದಸ್ಯ ಬಿ.ಜೆ ಪುಟ್ಟಸ್ವಾಮಿ, ಮಾಜಿ ಮೇಯರ್ ಅನಂತ, ಎಂ.ಪಿ .ರಮೇಶ್ ಇದ್ದರು.