ಸುದ್ದಿ ಸಂಕ್ಷೇಪ
ನಾಳೆ ಪ್ರಗತಿ ಪರಿಶೀಲನಾ ಸಭೆ
ಮೈಸೂರು: ತಾಲೂಕು ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯು ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜ.8 ರಂದು ಬೆಳಗ್ಗೆ 11ಕ್ಕೆ ತಾಪಂ ಸಭಾಂಗಣದಲ್ಲಿ ನಡೆಯಲಿದೆ.
ರೋಗ ತಿಳಿವಳಿಕೆ ಶಿಬಿರ
ವಿಕ್ರಮ್ ಜ್ಯೋತ್ ಆಸ್ಪತ್ರೆಯಲ್ಲಿ ಜ.8ರ ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಜೀರ್ಣಾಂಗ ಮತ್ತು ಪಿತ್ತಜನಕಾಂಗ ರೋಗದ ಬಗ್ಗೆ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ದೂ.0821-4242461 ಸಂಪರ್ಕಿಸಬಹುದು.
ಕೆ.ವಿ. ಭವನ ಉದ್ಘಾಟನೆ
ಹಿರಿಯ ಕಾರ್ಮಿಕ ನಾಯಕ ಕಾಂ. ಕೆ. ವೆಂಕಟರಾಮಯ್ಯ ಅವರ ಸ್ಮರಣಾರ್ಥ ನಿರ್ಮಿಸಿರುವ ಕೆ.ವಿ. ಭವನವನ್ನು ಜ.8ರ ಸಂಜೆ 4ಕ್ಕೆ ಕಾಂ. ಎಂ.ಸಿ.ನರಸಿಂಹನ್ ಉದ್ಘಾಟಿಸುವರು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ಶೇಷಾದ್ರಿ ಹಾಗೂ ಎಐಟಿಯುಸಿ ಜಿಲ್ಲಾಧ್ಯಕ್ಷ ರಾಜು ತಿಳಿಸಿದ್ದಾರೆ.
ಸಂಸ್ಕೃತಿ ಸೌರಭ
ಅನುಭವ ಟುಟೋರಿಯಲ್ಸ್ ವತಿಯಿಂದ ಜ.8ರ ಮಧ್ಯಾಹ್ನ 3ಕ್ಕೆ ಶಾರದಾದೇವಿನಗರದ ಶಾರದಾ ಪ್ರೌಢಶಾಲೆಯಲ್ಲಿ ಸಂಸ್ಕೃತಿ ಸೌರಭ ಕಾರ್ಯಕ್ರಮ ನಡೆಯಲಿದೆ.
ಸಾಧಕರಿಗೆ ಸ್ತ್ರೀಶಕ್ತಿ ಪ್ರತಿಷ್ಠಾನ ಪ್ರಶಸ್ತಿ
ಸಮಾಜದ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಸಾಧಕಿಯರಿಗೆ ಸ್ತ್ರೀಶಕ್ತಿ ಪ್ರತಿಷ್ಠಾನ ಪ್ರಶಸ್ತಿ ನೀಡಿ ಭಾನುವಾರ ಗೌರವಿಸಿತು. ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಸ್ತ್ರೀ ಶಕ್ತಿ ಮಹಿಳಾ ಪ್ರತಿಷ್ಠಾನ ಟ್ರಸ್ಟ್ನ 24 ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕಿ ಜಿ. ರಾಜಲಕ್ಷ್ಮೀ ಶ್ರೀಧರ್ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನೇತ್ರತಜ್ಞೆ ಡಾ.ಅನುಸೂಯ ಗೋಪಾಲ್ಗೆ ಸ್ತ್ರೀಶಕ್ತಿ ನಯನ ತಾರೆ, ನಾಟ್ಯ ಗಾಯನ ಜೋಡಿಗಳಾದ ವಿದ್ವಾನ್ ರಾ.ಸ. ನಂದಕುಮಾರ್ ಮತ್ತು ರಾಧಿಕಾ ನಂದಕುಮಾರ್ಗೆ ಗಾನರಸ ಋಷಿ-ನಾಟ್ಯ ಮಯೂರಿ, ನೆನಪಿನ ಕಾಣಿಕೆ ತಯಾರಕ ಜಿನೇಶ್ ಅವರಿಗೆ ಮೆಮೆಂಟೋ ಬ್ರಹ್ಮ, ಬಹುಮುಖ ಕಲಾವಿದೆ ಕುಸುಮಾ ರಾಮರಾವ್ಗೆ ಹಿರಿಯ ತಾರುಣ್ಯ ಶಕ್ತಿ ಹಾಗೂ ಚಿಣ್ಣರ ಪದಗಳು ಕರ್ತೃ ಶಾಮಲಾ ಮೂರ್ತಿ ಅವರಿಗೆ ಶಿಶುಗೀತೆ ಪರಿಣತೆ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಶಾಮಲಾ ಮೂರ್ತಿ ರಚಿಸಿರುವ ಚಿಣ್ಣರ ಪದಗಳು ಕೃತಿಯನ್ನು ಸಂಸ್ಕೃತಿ ಪೋಷಕ ಕೆ. ರಘುರಾಂ ಲೋಕಾರ್ಪಣೆಗೊಳಿಸಿದರು. ಕಳೆದ ಬಾರಿಯ ದಸರಾ ಬೊಂಬೆ ಪ್ರದರ್ಷನದಲ್ಲಿ ಉತ್ತಮ ಸಾಧನೆ ತೋರಿರುವ ರತ್ನ ಹಾಗೂ ಯದುಗಿರಿ ಗೋಪಾಲನ್ ಅವರನ್ನು ಅಭಿನಂದಿಸಲಾಯಿತು. ಅಲ್ಲದೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂಸ್ಥೆ ಅಧ್ಯಕ್ಷೆ ಕಾದಂಬರಿಗಾರ್ತಿ ಎಸ್. ಮಂಗಳಾ ಸತ್ಯನ್ ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣ ಗೋಪಾಲಕೃಷ್ಣ ನಿರೂಪಿಸಿದರು. ಸಂಸ್ಥೆ ಪೋಷಕ ಸತ್ಯನ್ ಇದ್ದರು.
ಅನಧಿಕೃತ ಶೆಡ್ಗಳ ತೆರವು
ತಾಲೂಕಿನ ಹಿನಕಲ್ ಸಮೀಪದ ಎಂಡಿಎಗೆ ಸೇರಿದ ಆಸ್ತಿಯಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಐದು ಶೆಡ್ಗಳನ್ನು ಎಂಡಿಎ ಅಧಿಕಾರಿಗಳು ತೆರವುಗೊಳಿಸಿದರು. ನಕಲ್ ಗ್ರಾಮ ಮೋಜಣಿ ಸಂಖ್ಯೆ 281ರಲ್ಲಿ ಪ್ರಾಧಿಕಾರಕ್ಕೆ ಸೇರಿದ ಆಸ್ತಿಯಲ್ಲಿ ಅನಧಿಕೃತವಾಗಿ ಕಟ್ಟಿದ್ದ 5 ಶೆಡ್ಗಳನ್ನು ಎಂಡಿಎ ಆಯುಕ್ತ ಎಸ್.ಪಾಲಯ್ಯ ಅವರ ನಿರ್ದೇಶನದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಯಿತು. ಅಂತೆಯೇ ನಗರದ ಇತರೆಡೆ ಇರುವ ಎಂಡಿಎ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿದ್ದಲ್ಲಿ, ಇಲ್ಲವೆ ಅನಧಿಕೃತವಾಗಿ ಸ್ವಾಧೀನಕ್ಕೆ ತೆಗೆದುಕೊಂಡು ಕಟ್ಟಡ ನಿರ್ಮಿಸಿದ್ದಲ್ಲಿ ಅವುಗಳನ್ನು ತೆರವುಗೊಳಿಸಿ, ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಾಲಯ್ಯ ತಿಳಿಸಿದ್ದಾರೆ.