ಅಂಗವಿಕಲರ ಪಾಸ್ ನವೀಕರಣಕ್ಕೆ ಸೂಚನೆ
ಮೈಸೂರು: ಅಂಗವಿಕಲರ ರಿಯಾಯಿತಿ ಪಾಸುಗಳ ನವೀಕರಣಕ್ಕೆ ಸಾರಿಗೆ ಸಂಸ್ಥೆಯು ಶಿಬಿರ ಆಯೋಜಿಸಿದೆ.
ಅಂಗವಿಕಲರಿಗೆ ನೀಡಲಾದ ರಿಯಾಯಿತಿ ದರದ ಬಸ್ ಅವಧಿ ಕಳೆದ ಡಿ.31ಕ್ಕೆ ಅಂತ್ಯಗೊಂಡಿದೆ. ಈ ಪಾಸ್‌ನಲ್ಲಿ ಫೆ.28 ರವರೆಗೆ ಪ್ರಯಾಣಿಸಲು ಅವಕಾಶ ನೀಡಲಾಗಿದ್ದು, ಅಷ್ಟರೊಳಗೆ ಪಾಸ್ ನವೀಕರಿಸಿಕೊಳ್ಳಬಹುದು. ಇತ್ತೀಚಿನ 2 ಭಾವಚಿತ್ರ, 2013ನೇ ಸಾಲಿನ ಪಾಸು, 660 ನಗದು ನೀಡಿ 2014ನೇ ಸಾಲಿನ ಪಾಸ್ ಪಡೆಯಬಹುದು.
ಜ.16 ಮತ್ತು 17 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಹುಣಸೂರು ಬಸ್ ನಿಲ್ದಾಣ, ಜ.18 ಮತ್ತು 20 ರಂದು ಪಿರಿಯಾಪಟ್ಟಣ ಬಸ್ ನಿಲ್ದಾಣ, ಜ.21 ಮತ್ತು 22 ರಂದು ಎಚ್.ಡಿ. ಕೋಟೆ ಬಸ್ ನಿಲ್ದಾಣ, ಟಿ. ನರಸೀಪುರದವರು ಜ.23 ರಂದು ಮೈಸೂರು ಕೇಂದ್ರೀಯಬಸ್ ನಿಲ್ದಾಣದಲ್ಲಿ ಮತ್ತು ಜ.24 ಮತ್ತು 25 ರಂದು ಕೆ.ಆರ್. ನಗರ ಬಸ್ ನಿಲ್ದಾಣದಲ್ಲಿ ಪಾಸ್ ನವೀಕರಿಸಲಾಗುತ್ತದೆ ಎಂದು ಗ್ರಾಮಾಂತರ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಅಪರಿಚಿತ ಯುವತಿ ಶವ ಪತ್ತೆ
ನಂಜನಗೂಡು: ಅಪರಿಚಿತ ಯುವತಿಯ ಶವ ಇಲ್ಲಿನ ಪ್ರವಾಸಿ ಬಂಗ್ಲೆ ಸಮೀಪ ಪತ್ತೆಯಾಗಿದೆ. ಇದೊಂದು ಕೊಲೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತಳಿಗೆ ಸುಮಾರು 25 ವರ್ಷ. ಗುರುತು ಪತ್ತೆಯಾಗಿಲ್ಲ. ದುಷ್ಕರ್ಮಿಗಳು ಆಕೆಯ ಮುಖವನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾರೆ. ಮೃತಳು ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದು, ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಎರಡು ದಿನ ಇಡಲಾಗಿದೆ. ವಾರಸುದಾರರಿದ್ದಲ್ಲಿ ನಂಜನಗೂಡು ಪಟ್ಟಣ ಪೊಲೀಸ್ ಠಾಣೆ 08221-228383 ಸಂಪರ್ಕಿಸಬೇಕಾಗಿ ಪಿಎಸ್‌ಐ ರವಿಶಂಕರ್ ತಿಳಿಸಿದ್ದಾರೆ.
ಅಪರಿಚಿತ ಮಹಿಳೆ ಶವ ಪತ್ತೆ
ನಂಜನಗೂಡು: ಇಲ್ಲಿನ ರೇಲ್ವೆ ನಿಲ್ದಾಣದಲ್ಲಿ ಸುಮಾರು 58 ವರ್ಷದ ಅಪರಿಚಿತ ಮಹಿಳೆ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವವು ಸಂಪೂರ್ಣವಾಗಿ ನೆಲದ ಮೇಲೆ ಕುಳಿತ ಭಂಗಿಯಲ್ಲಿ ಕಂಡುಬಂದಿರುವುದು ಶಂಕೆಗೆ ಕಾರಣವಾಗಿದೆ. ಕಂದುಬಣ್ಣದ ಸೀರೆ ಮತ್ತು ಮೂಗಿನಲ್ಲಿ ಮೂಗುತಿ ಶವದ ಮೈಮೇಲೆ ಪತ್ತೆಯಾಗಿದೆ.
ಹನಗೋಡು ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ
ಹುಣಸೂರು: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತ್ಯಾಗ, ಭಕ್ತಿ, ಭಯ, ಪ್ರೀತಿಯ ಮನೋಭಾವ ರೂಢಿಸಿಕೊಂಡು ವಿದ್ಯೆ ಮುಂದುವರಿಸಿದಲ್ಲಿ ಸಮಾಜದ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.
ತಾಲೂಕಿನ ಹನಗೋಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗಕ್ಕೆ ಸರ್ಕಾರದ ವತಿಯಿಂದ ನಿರ್ಮಿಸಿರುವ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅವರೇ ಶಿಲ್ಪಿಗಳು. ವಿದ್ಯೆ ಕಲಿಯುವುದರ ಜೊತೆಗೆ ತ್ಯಾಗ ಮನೋಭಾವನೆಯಿಂದ ಮಾತ್ರ ಸಮಾಜದ ಅಂಕು ಡೊಂಕು ತಿದ್ದುವುದರ ಜೊತೆಗೆ ತಾವು ಉನ್ನತ ಸ್ಥಾನಕ್ಕೇರಬಹುದು ಎಂದು ತಿಳಿಸಿದರು.
ಗ್ರಾಪಂ ಅಧ್ಯಕೆ ಮಂಜುಳಾ ಮಹೇಶ್, ಉಪಾಧ್ಯಕ್ಷೆ ಪ್ರಭಾವತಿ, ಪ್ರಾಂಶುಪಾಲೆ ಜಯಮ್ಮ, ಉಪ ಪ್ರಾಂಶುಪಾಲ ಸಿದ್ದರಾಜು, ಪಿಡಿಒ ಮಣಿ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ, ತಾ. ಕಾಂಗ್ರೆಸ್ ಅಧ್ಯಕ್ಷ ಬಸವರಾಜು, ಮುಖಂಡರಾದ ಪ್ರಣೇಶ್‌ಶೆಟ್ಟಿ, ಶಿವಕುಮಾರ್, ಸಂಜೀವ್, ಗಿರಿಧರ್, ವೆಂಕಟೇಶ್, ಜಿನ್ನರಾಜ್ ಇದ್ದರು.
ದಲಿತ ನೌಕರರಿಗೆ ಕಿರುಕುಳ: ಆರೋಪ
ಮೈಸೂರು: ನಗರಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಲಿತ ನೌಕರರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಮೈಸೂರು ಮಹಾನಗರ ಪಾಲಿಕೆ ಎಸ್ಸಿ, ಎಸ್ಟಿ ನೌಕರರ ಸಂಘ ಆರೋಪಿಸಿದೆ.
ಕಂದಾಯ ಶಾಖೆಯ ನೌಕರರಿಗೆ ಇತರೆ ಶಾಖೆಗಳಲ್ಲಿ ನಿಯಮಬಾಹಿರವಾಗಿ ನೀಡಿರುವಂತೆ, ಕಾಯಂ ನೌಕರರಿಗೆ ಕಂದಾಯ ಶಾಖೆಯಲ್ಲಿ ಕಾರ್ಯನಿರ್ವಹಿಸಲು ಮುಖ್ಯಮಂತ್ರಿ ಪತ್ರದ ಆದೇಶವನ್ನು ನಿರ್ಲಕ್ಷಿಸಿ ಪಾಲಿಕೆಯಲ್ಲಿ ಮಾಲಿಗಳು, ಗ್ಯಾಂಗ್‌ಮೆನ್‌ಗಳು ನಿರ್ವಹಿಸಬೇಕಾದ ಕೆಲಸಗಳನ್ನು ಕಾಯಂ ನೌಕರರಿಗೆ ಹೇರಿ ಇತರೆ ನೌಕರರು ವಸತಿಗೃಹ, ದಾಖಲಾತಿ ನಿರ್ವಹಣೆ, ಹಣಕಾಸು ನಿರ್ವಹಣೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷ ಬಿ. ಸಿದ್ದರಾಜು, ಕಾರ್ಯಾಧ್ಯಕ್ಷ ನಾರಾಯಣ್ ದೂರಿದ್ದಾರೆ. ಕಂದಾಯ ಶಾಖೆಯ ಕರ ವಸೂಲಿಗಾರರ ಎರಡು ತಿಂಗಳ ವೇತನ ನೀಡದ್ದರಿಂದ ಈ ನೌಕರರ ಕುಟುಂಬಗಳ ಜೀವನ ನಿರ್ವಹಣೆ ತುಂಬಾ ಶೋಚನೀಯವಾಗಿದೆ. ಪ್ರಮುಖವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ನೌಕರರ ಮಕ್ಕಳ ವಿದ್ಯಾಭ್ಯಾಸದ ಮೇಲೆ ತೀವ್ರ ಪರಿಣಾಮ ಬೀರಿದ್ದು ಖಾಸಗಿ ಕಂಪನಿಯ ನೌಕರ ಕುಟುಂಬಗಿಂತಲೂ ಅತಂತ್ರ ಪರಿಸ್ಥಿತಿ ಉಂಟಾಗಿದೆ ತಿಳಿಸಿದ್ದಾರೆ.
ವಿದ್ಯಾರಣ್ಯಪುರಂ ನಿವಾಸಿ ನಾಪತ್ತೆ
ಮೈಸೂರು: ನಗರದ ವಿದ್ಯಾರಣ್ಯಪುರಂ 4ನೇ ಮುಖ್ಯರಸ್ತೆ 19ನೇ ತಿರುವಿನ ನಿವಾಸಿ ಹಾಗೂ ಮಾನಸಿಕ ಅಸ್ವಸ್ಥರಾದ ಟಿ.ವಿ. ಗೋವಿಂದರಾಜ (63) ಎಂಬವರು ಡಿ.5 ರಿಂದ ನಾಪತ್ತೆಯಾಗಿದ್ದಾರೆ. ಚಹರೆ- 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2418122, 322 ಸಂಪರ್ಕಿಸಲು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಕೋರಿದ್ದಾರೆ.
ಹಂಪಿ ಉತ್ಸವದಲ್ಲಿ ವಿಚಾರ ಸಂಕಿರಣ
ಮೈಸೂರು: ಹಂಪಿ ಉತ್ಸವದಲ್ಲಿ ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ವಿಜಯನಗರ ಸಾಮ್ರಾಜ್ಯ ಅಧ್ಯಯನ ಕುರಿತು ಜ.11 ಮತ್ತು 12 ರಂದು ವಿಚಾರ ಸಂಕಿರಣ ಆಯೋಜಿಸಿದೆ. ಜ.11ರ ಬೆಳಗ್ಗೆ 10ಕ್ಕೆ ನಡೆಯುವ ವಿಚಾರ ಸಂಕಿರಣದಲ್ಲಿ ಇತಿಹಾಸ ತಜ್ಞ ಡಾ.ಎಂ.ಎಸ್. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸುವರು. ಸಂಸದೆ ಜೆ. ಶಾಂತಾ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಇತಿಹಾಸಕಾರರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸುವರು. ಇಲಾಖೆ ಆಯುಕ್ತ ಡಾ.ಸಿ.ಜೆ. ಬೆಟಸೂರ್‌ಮಠ್, ನಿರ್ದೇಶಕ ಡಾ.ಆರ್. ಗೋಪಾಲ್ ಭಾಗವಹಿಸುವರು.
ಅಂಧ ವಿದ್ಯಾರ್ಥಿಗಳಿಗಾಗಿ ಧ್ವನಿ ಪುಸ್ತಕ
ಮೈಸೂರು: ಶುಭೋದಯ ಚಾರಿಟಬಲ್ ಟ್ರಸ್ಟ್ ವತಿಯಿಂದ 10ನೇ ತರಗತಿಯ ಅಂಧ ವಿದ್ಯಾರ್ಥಿಗಳಿಗಾಗಿ ಧ್ವನಿ ಪುಸ್ತಕ ತಯಾರಿಸಿದೆ. ರಾಜ್ಯಾದ್ಯಂತ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ನೇರ ಪರೀಕ್ಷಾ ಅಭ್ಯರ್ಥಿಗಳು ಇದರ ಉಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಕೋರಿದೆ. ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯ ಕೆಲವು ಧ್ವನಿಪುಸ್ತಕಗಳು ಲಭ್ಯವಿರುತ್ತದೆ. ಇವುಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 8050226670 ಸಂಪರ್ಕಿಸಬಹುದು.
ಮಾಹಿತಿ ನೀಡುವಲ್ಲಿ ವಿಫಲ; ಮೈಸೂರು ಪಾಲಿಕೆಗೆ ದಂಡ
ಮಂಡ್ಯ: ಮಾಹಿತಿ ಹಕ್ಕು ಕಾಯ್ದೆ ಅಡಿ ಸಾರ್ವಜನಿಕರೊಬ್ಬರು ಅಗತ್ಯ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ನಿಗದಿತ ಸಮಯಕ್ಕೆ ಸಮರ್ಪಕ ಉತ್ತರ, ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಕರ್ನಾಟಕ ಮಾಹಿತಿ ಆಯೋಗದ ನ್ಯಾಯಾಲಯ ಮೈಸೂರು ಮಹಾನಗರ ಪಾಲಿಕೆಗೆ ರು.10 ಸಾವಿರ ದಂಡ ವಿಧಿಸಿ ಆದೇಶ ಮಾಡಿದೆ. ಮಂಡ್ಯದ ಪೇಟೆಬೀದಿ ನಿವಾಸಿ ಎಸ್.ಜಯಬಾಲು ಎಂಬುವವರು ಮೈಸೂರಿನ ಲಕ್ಷ್ಮಿ ವಿಲಾಸ್ ರಸ್ತೆಯಲ್ಲಿರುವ ಆಸ್ತಿಗೆ ಸಂಬಂಧಿಸಿದಂತೆ ಜಂಟಿ ಖಾತೆ ದಾಖಲೆಗಳನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿ ಕೋರಿ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ 15 ದಿನದೊಳಗೆ ಸಹಾಯಕ ಆಯುಕ್ತ ತಿಮ್ಮಪ್ಪಅವರಿಗೆ ಸೂಕ್ತ ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಇದಕ್ಕೂ ಕೂಡಾ ತಿಮ್ಮಪ್ಪ ಲಿಖಿತವಾಗಿ ಸಮಜಾಯಿಷಿ ನೀಡದೇ, ದಾಖಲೆ ನೀಡದ ಹಿನ್ನೆಲೆಯಲ್ಲಿ ಕರ್ನಾಟಕ ಮಾಹಿತಿ ಆಯೋಗ ನ್ಯಾಯಾಲಯ ರು.10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. ಈ ಹಣವನ್ನು ತಿಮ್ಮಪ್ಪ ಅವರಅಕ್ಟೋಬರ್, ನವೆಂಬರ್ ತಿಂಗಳ ಸಂಬಳದಲ್ಲಿ ವಸೂಲಿ ಮಾಡಿ ಸರ್ಕಾರಕ್ಕೆ ಜಮೆ ಮಾಡುವಂತೆ ಮಹಾನಗರ ಪಾಲಿಕೆಗೆ ನ್ಯಾಯಾಲಯ ಆದೇಶಿಸಿದೆ.
ನಾಳೆ ಚದುರಂಗ ಪಂದ್ಯಾವಳಿ
ಮೈಸೂರು: ಮೈಸೂರು ಚೆಸ್ ಕ್ಲಬ್ ವತಿಯಿಂದ 15 ವರ್ಷದೊಳಗಿನ ಶಾಲಾ ಬಾಲಕ-ಬಾಲಕಿಯರಿಗಾಗಿ ಜ.9ರ ಸಂಜೆ 6ಕ್ಕೆ ಸರಸ್ವತಿಪುರಂನ ಜ್ಞಾನೋದಯ ಪಿಯು ಕಾಲೇಜಿನಲ್ಲಿ ಮುಕ್ತ ಚದುರಂಗ ಪಂದ್ಯಾವಳಿ ನಡೆಯಲಿದೆ. ಸ್ಪರ್ಧಿಗಳು ತಮ್ಮ ಹೆಸರನ್ನು ಜ.9ರ ಸಂಜೆ 6ಕ್ಕೆ ಸ್ಥಳದಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆ.ಜಿ. ಜಯಪ್ರಕಾಶ್, ಮೊ. 9880547121 ಸಂಪರ್ಕಿಸಬಹುದು.
ಕ್ಯಾನ್ಸರ್ ತಪಾಸಣೆ
ಲಕ್ಷ್ಮೀಪುರಂನ ವಾಣಿ ವಿಲಾಸ ರಸ್ತೆಯಲ್ಲಿರುವ ಪ್ರೀತಿ ಕ್ಯಾನ್ಸರ್ ಸೆಂಟರ್ ವತಿಯಿಂದ ಜ.9 ರಂದು ಕ್ಯಾನ್ಸರ್ ಉಚಿತ ತಪಾಸಣೆ ಶಿಬಿರ ಆಯೋಜಿಸಿದೆ ಹೆಚ್ಚಿನ ವಿವಗಳಿಗಾಗಿ ದೂ. 4259259 ಸಂಪರ್ಕಿಸಿರಿ.
ವಾರ್ಷಿಕ ಕ್ರೀಡಾಕೂಟ
ಸಿಐಡಿ ಹಾಗೂ ವಿಶೇಷ ಘಟಕಗಳ ವಾರ್ಷಿಕ ಕ್ರೀಡಾಕೂಟವು ಜ.9ರ ಬೆಳಗ್ಗೆ 9ಕ್ಕೆ ಕರ್ನಾಟಕ ಪೊಲೀಸ್ ಅಕಾಡೆಮಿಯ ಕವಾಯತು ಮೈದಾನದಲ್ಲಿ ನಡೆಯಲಿದೆ. ನಿವೃತ್ತ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾ ನಿರೀಕ್ಷಕ ಎ.ಆರ್. ಇನ್‌ಫೆಂಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜ.10ರ ಸಂಜೆ 4ಕ್ಕೆ ಕವಾಯತು ಮೈದಾನದಲ್ಲಿ ಮುಕ್ತಾಯ ಸಮಾರಂಭ ನಡೆಯಲಿದೆ. ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ವಿ.ವಿ. ಭಾಸ್ಕರ್, ಪೊಲೀಸ್ ಮಹಾ ನಿರ್ದೇಶಕ (ತರಬೇತಿ) ಸುಶಾಂತ್ ಮಹಾಪಾತ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಮಾರಂಭ
ಮರಿಮಲ್ಲಪ್ಪನವರ ಪದವಿಪೂರ್ವ ಕಾಲೇಜಿನ 2013-14ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಯ ಸಮಾರೋಪ ಸಮಾರಂಭವು ಜ.9ರ ಬೆಳಗ್ಗೆ 9.30ಕ್ಕೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನಡೆಯಲಿದೆ. ಎಸ್. ಪರಮಶಿವಯ್ಯ ಅಧ್ಯಕ್ಷತೆ ವಹಿಸುವರು. ವೈ.ವಿ. ಗುಂಡೂರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರೊ.ಕೆ.ಎನ್. ಪಂಚಾಕ್ಷರಸ್ವಾಮಿ ಬಹುಮಾನ ವಿತರಿಸುವರು.
ಭಾಗವತ ಪ್ರವಚನ
ಬೆಂಗಳೂರಿನ ಶ್ರೀ ಹರಿದಾಸ ಸಂಘದ ವತಿಯಿಂದ ಜ.9ರ ಸಂಜೆ 5.30ಕ್ಕೆ ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಹ.ರಾ. ನಾಗರಾಜಾಚಾರ್ಯ ಅವರು ಗಜಂದ್ರ ಮೋಕ್ಷ ವಿಷಯ ಕುರಿತು ಭಾಗವತ ಪ್ರವಚನ ನೀಡುವರು.