ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಿರಿಯ ಕಲಾವಿದರು ತಿರುಗಾಟಕ್ಕೆ ಸೀಮಿತ

Vishwanath S
Updated On : 8 Jan 2014, 12:54 pm

ಮೈಸೂರು: ದಕ್ಷಿಣ ಭಾರತದ ಏಕೈಕ ರೆಪರ್ಟರಿಯಾದ ರಂಗಾಯಣದಲ್ಲಿ ನಾಲ್ಕು ವರ್ಷಗಳ ಹಿಂದೆ ಪ್ರಾರಂಭಿಸಲಾದ ರಂಗಶಿಕ್ಷಣ ಡಿಪ್ಲೊಮಾ ಕೋರ್ಸ್‌ಗೆ ಸೇರಿಕೊಂಡಿರುವ ವಿದ್ಯಾರ್ಥಿಗಳದ್ದು ಬರಿಯ ತಿರುಗಾಟವಾಗಿದ್ದು, ರಂಗಾಯಣ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಕೂಗು ಕೇಳಿ ಬಂದಿದೆ.
ರಂಗಾಯಣದಲ್ಲಿ ನಡೆಸುತ್ತಿರುವ ಈ ಕೋರ್ಸ್‌ಗೆ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಪ್ರಮಾಣ ಪತ್ರ ನೀಡಲಾಗುತ್ತದೆ. ಈ ಕೋರ್ಸ್ ಒಂದು ವರ್ಷದ ಅವಧಿಯದ್ದಾಗಿದ್ದು, ಕೋರ್ಸ್ ಮುಗಿಸಿದ ಬಳಿಕ ರಂಗಾಯಣದಲ್ಲೇ ಎರಡು ವರ್ಷಗಳ ಕಾಲ ರಂಗ ತರಬೇತಿ ನೀಡಲಾಗುತ್ತದೆ. ಹೀಗೆ ಸೇರಿಕೊಂಡಿರುವ ವಿದ್ಯಾರ್ಥಿಗಳನ್ನು ಕಿರಿಯ ಕಲಾವಿದರು ಎಂದೂ ಪರಿಗಣಿಸಲಾಗಿದೆ.
ಈಗ ನಾಟಕ ತರಬೇತಿ ಆರಂಭವಾಗಿ 5 ತಿಂಗಳು ಕಳೆದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಈಗ ಬಹುರೂಪಿ ಬಂದಿರುವುದರಿಂದ ಮತ್ತಷ್ಟು ದಿನ ಮುಂದಕ್ಕೆ ಹೋಗಲಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ರಂಗಾಯಣ ತಿರುಗಾಟಕ್ಕೆ ಕರೆದುಕೊಂಡು ಹೋದಾಗಲು ದುಡಿಸಿಕೊಳ್ಳಲಾಯಿತೇ ಹೊರತು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂಬ ಕೊರಗು ಕಿರಿಯ ಕಲಾವಿದರಲ್ಲಿದೆ.
2010-11ರ ಸಾಲಿನಲ್ಲಿ 15 ಮಂದಿ (4 ಮಂದಿ ಕಲಾವಿದೆಯರು), 2011-12ರ ಸಾಲಿನಲ್ಲಿ 15 (ಒಬ್ಬ ಕಲಾವಿದೆ) ಮಂದಿ, 2012-13ರ ಸಾಲಿನಲ್ಲಿ 12 ಮಂದಿ (ಒಬ್ಬ ಕಲಾವಿದೆ) ಹಾಗೂ ಪ್ರಸಕ್ತ ಸಾಲಿನಲ್ಲಿ 15 (ನಾಲ್ವರು ಕಲಾವಿದೆಯರು) ಮಂದಿ ಕೋರ್ಸ್‌ಗೆ ಸೇರಿಕೊಂಡಿದ್ದಾರೆ. ಪ್ರಥಮ ವರ್ಷ ಮುಗಿಸಿದ ಮೇಲೆ ಕೆಲವರು ಬಿಟ್ಟು ಹೋಗಿದ್ದಾರೆ. ಮತ್ತೆ ಕೆಲವರು ಇಲ್ಲಿಯೇ ಇದ್ದಾರೆ. ಇವರಿಗಾಗಿ ಸರ್ಕಾರ ಪ್ರತಿ ತಿಂಗಳು ಪ್ರಥಮ ವರ್ಷದವರಿಗೆ 2 ಸಾವಿರ, ದ್ವಿತೀಯ ವರ್ಷದವರಿಗೆ ಐದೂವರೆ ಸಾವಿರ ರು. ಹಾಗೂ ಅಂತಿಮ ವರ್ಷದವರಿಗೆ ಏಳೂವರೆ ಸಾವಿರ ರು. ಶಿಷ್ಯವೇತನ ನೀಡುತ್ತಿದೆ. ಇಷ್ಟೊಂದು ಹಣ ಖರ್ಚು ಮಾಡುತ್ತಿರುವಾಗ ಕಿರಿಯ ಕಲಾವಿದರನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದಲ್ಲವೆ ಎಂಬುದು ಕಿರಿಯ ಕಲಾವಿದರ ಅನಿಸಿಕೆಯಾಗಿದೆ.
ಶಿವಮೊಗ್ಗ, ಧಾರವಾಡ ಖಾಲಿ
ಈ ಹಿಂದಿನ ನಿರ್ದೇಶಕರಾಗಿದ್ದ ದಿ.ಲಿಂಗದೇವರು ಹಳೆಮನೆ ಅವರು ಆರಂಭಿಸಿದ ಶಿವಮೊಗ್ಗ, ಧಾರವಾಡ ರಂಗಾಯಣಗಳು ಕಲಾವಿದರಿಲ್ಲದೆ ಖಾಲಿ ಹೊಡೆಯುತ್ತಿವೆ. ಇದೀಗ ನಿರ್ದೇಶಕರನ್ನು ನೇಮಿಸಲು ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆ ಆರಂಭಿಸಿದ್ದು, ಈ ಸಂಬಂಧ ಮೈಸೂರು ರಂಗಾಯಣ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಒಂದು ವೇಳೆ ನಿರ್ದೇಶಕರು ನೇಮಕವಾದಲ್ಲಿ ರಂಗ ಚಟುವಟಿಕೆಗಳು ಕ್ರಿಯಾಶೀಲಗೊಳ್ಳುತ್ತವೆ. ಆಗ ಕಲಾವಿದರ ಅವಶ್ಯಕತೆ ಕಾಡುತ್ತದೆ. ಅದರ ಕೊರತೆಯನ್ನು ಈ ಕಿರಿಯ ಕಲಾವಿದರಿಂದ ತುಂಬಿಸಿಕೊಳ್ಳುವ ಕೆಲಸ ಆಗಬೇಕಿದೆ.
ನಾವು ರಂಗ ಶಿಕ್ಷಣ ಕೋರ್ಸ್ ಮುಗಿಸಿದ್ದೇವೆ. ಬಹುರೂಪಿ, ಚಿಣ್ಣರ ಮೇಳ, ನವರಾತ್ರಿ ರಂಗೋತ್ಸವ, ಕಾಲೇಜು ಯುವ ರಂಗೋತ್ಸವದಲ್ಲಿ ಪಾಲ್ಗೊಂಡ ಅನುಭವವಿದೆ. ಒಂದು ವೇಳೆ ಶಿವಮೊಗ್ಗ, ಧಾರವಾಡ ರಂಗಾಯಣಕ್ಕೆ ಕಲಾವಿದರಾಗಿ ತೆಗೆದುಕೊಂಡರೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೇವೆ.
 ಕಿರಿಯ ಕಲಾವಿದರು


- ಜೆ. ಮಹದೇವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement