ಕೃತಕ ಅಂಗಾಂಗ ಜೀವನ ನೀಡುತ್ತದೆ: ಸಲೀಂ
ಮೈಸೂರು: ಅಂಗವಿಕಲರಿಗೆ ಕೃತಕ ಅಂಗಾಂಗಳನ್ನು ನೀಡಿದರೆ ಅವರಿಗೆ ಜೀವನವನ್ನೇ ನೀಡಿದಂತೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು.
ರೋಟರಿ ಪ್ರೌಢಶಾಲೆಯಲ್ಲಿ ರೋಟರಿ ಮೈಸೂರು ಮತ್ತು ರೋಟರಿ ಮೈಸೂರು ಮಹಾವೀರ್ ಕೃತಕ ಅಂಗಾಂಗ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕೃತಕ ಅಂಗಾಂಗಗಳ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನನಗೆ ಒಮ್ಮೆ ಅಪಘಾತವಾಗಿತ್ತು. ಕೂಡಲೆ ನನಗೆ ಚಿಕಿತ್ಸೆ ದೊರಕಿದ್ದರಿಂದ ನಾನು ಅಂಗವಿಕಲನಾಗಲಿಲ್ಲ. ಆದರೆ ಸಾಕಷ್ಟು ಮಂದಿ ರಸ್ತೆ ಅಪಘಾತದಲ್ಲಿ ತಮ್ಮ ಅಂಗಾಂಗ ಕಳೆದುಕೊಳ್ಳುತ್ತಾರೆ. ಶ್ರೀಮಂತರು ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡವರು ಕಷ್ಟದಲ್ಲಿರುತ್ತಾರೆ. ಅಂತವರನ್ನು ಗುರುತಿಸಿ ರೋಟರಿ ಸಂಸ್ಥೆಯು ಕೃತಕ ಅಂಗಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ರೋಟರಿ ಸಂಸ್ಥೆಯು ಸದಾ ಜನಸ್ನೇಹಿ ಮತ್ತು ಮೂಲಸೌಲಭ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ಅಂಗವಿಕಲರಿಗೆ ಕೃತಕ ಉಪಕರಣ ವಿತರಿಸುವುದೂ ಸೇರಿದೆ ಎಂದು ಸಲೀಂ ತಿಳಿಸಿದರು.
ಅಪಘಾತದಲ್ಲಿ ಮತ್ತು ಮಧುಮೇಹದಿಂದ ಕಾಲು ಕಳೆದುಕೊಂಡ ಸುಮಾರು 70ಕ್ಕೂ ಹೆಚ್ಚು ಮಂದಿಗೆ ಕೃತಕ ಅಂಗಗಳನ್ನು ವಿತರಿಸಲಾಯಿತು.
ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಗೌವರ್ನರ್ ಸುಬ್ರಹ್ಮಣ್ಯ ಗಣೇಶ್, ಇನ್‌ಫೋಸಿಸ್ ಸಂಸ್ಥೆಯ ಜನಾರ್ಧನ್ ಚನ್ನಗಿರಿ, ಸಂಸ್ಥೆ ಅಧ್ಯಕ್ಷ ಮನೋಹರ, ಶ್ರೀ ಮಹಾವೀರ್ ಜೈನ್ ರಿಲೀಫ್ ಸೊಸೈಟಿಯ ಅಧ್ಯಕ್ಷ ಮೋಹನಲಾಲ್ ಸೇತಿಯ, ಕಾರ್ಯದರ್ಶಿ ಗೌತಮ್ ಸಲೇಚ, ಆರ್‌ಎಂಎಂಎಎಲ್‌ಸಿ ಅಧ್ಯಕ್ಷ ಎ. ಸುನಿಲ್‌ಕುಮಾರ್, ಕಾರ್ಯದರ್ಶಿ ಕಲೀಮ್ ಮಹಮ್ಮದ್ ಇದ್ದರು.