ಕೇರಳಕ್ಕೆ ರೈಲು ಮಾರ್ಗ ಕಾರ್ಯಸಾಧುವಲ್ಲ
ಮೈಸೂರು: ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಾರಿಗೆ ಸಂಚಾರ ನಿಷೇಧವಿದೆ ಎಂಬ ಒಂದೇ ಕಾರಣಕ್ಕಾಗಿ ರೈಲು ಸಂಪರ್ಕ ಬೇಕೆಂಬ ಬೇಡಿಕೆಯು ಯಾವುದೇ ರೀತಿಯಲ್ಲಿ ಸಮಂಜಸವಲ್ಲ ಎಂದು ಪರಿಸರ ಆಸಕ್ತರು ಪ್ರತಿಪಾದಿಸಿದ್ದಾರೆ.
ಕರ್ನಾಟಕದ ನಂಜನಗೂಡು ಹಾಗೂ ಕೇರಳದ ನಿಲಂಬೂರನ್ನು ಸಂಪರ್ಕಿಸುವ ಉದ್ದೇಶಿತ ರೈಲು ಯೋಜನೆಯು ಈಗಾಗಲೇ ಕೇರಳದ ಹೈಕೋರ್ಟ್‌ನ ವಯನಾಡು ಮೂಲದ ನೀಲಗಿರೀಸ್ ವಯನಾಡು ನ್ಯಾಷನಲ್ ಹೈವೇ ಮತ್ತು ರೇಲ್ವೆ ಆ್ಯಕ್ಷನ್ ಕಮಿಟಿಯು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ತಿರಸ್ಕರಿಸಲ್ಪಟ್ಟಿದೆ. ಹೀಗಿದ್ದರೂ ಬಂಡೀಪುರದ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವ ರೇಲ್ವೆ ಮಾರ್ಗಕ್ಕೆ ಕೇರಳ ರಾಜ್ಯವು ಅತಿಯಾಗಿ ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಈ ಎರಡೂ ಸ್ಥಳಗಳ ಮಧ್ಯೆ ಪ್ರಸ್ತುತ ರಸ್ತೆ ಸಂಪರ್ಕವಿದ್ದು, ಈ ವಿಷಯದಲ್ಲಿ ಪರ್ಯಾಯ ಸಾರಿಗೆ ಅನುಕೂಲಗಳು ಇಲ್ಲವೆಂಬ ಪರಿಸ್ಥಿತಿ ಉದ್ಭವಿಸುವುದಿಲ್ಲ. ರೇಲ್ವೆ ಇಲಾಖೆಯು ನಂಜನಗೂಡು ಮತ್ತು ನಿಲಂಬೂರನ್ನು ಸೇರಿಸುವ ಮಾರ್ಗವು ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ ಮತ್ತು ಈ ಪ್ರಸ್ತಾಪವನ್ನು ಕೈಗೊಳ್ಳಲು ಇಲಾಖೆಯಲ್ಲಿ ಅಗತ್ಯವಾದ ಮೂಲಭೂತ ಸೌಲಭ್ಯಗಳಿಲ್ಲ ಎಂದು ಕೇರಳದ ಹೈಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿದೆ.
ಸಾಕಷ್ಟು ಅರಣ್ಯ ನಾಶ: ಇದಲ್ಲದೇ, ರೇಲ್ವೆ ಪ್ರಾಧಿಕಾರದಿಂದ ಸರ್ವೆ ನಡೆಸಿ ರೇಲ್ವೆ ಮಂಡಳಿಗೆ 2013ರ ಮೇ 24ರಂದು ಸಲ್ಲಿಸಲ್ಪಟ್ಟ ವರದಿ ಪ್ರಕಾರ ಪ್ರಸ್ತಾಪಿಸಲ್ಪಟ್ಟ ರೇಲ್ವೆ ಮಾರ್ಗಕ್ಕೆ ಶೇ.0.895ರಷ್ಟು ನಕಾರಾತ್ಮಕ ಆಂತರಿಕ ಪ್ರತಿಫಲ ದರದೊಂದಿಗೆ 4266.88 ಕೋಟಿ ಬಂಡವಾಳ ಬೇಕಾಗುತ್ತದೆ ಮತ್ತು ಇದು ಈ ಯೋಜನೆಯನ್ನು ಸಂಪೂರ್ಣವಾಗಿ ಅನರ್ಹಗೊಳಿಸುತ್ತದೆ. ಅಲ್ಲದೆ, ಈ ಯೋಜನೆಯಿಂದಾಗಿ ನಾಶವಾಗುವ ಅರಣ್ಯ ,ದುಷ್ಪರಿಣಾಮವನ್ನು ಊಹಿಸುವುದೂ ಅಸಾಧ್ಯ.
ಬಂಡೀಪುರದ ಪರಿಸರ ಸೂಕ್ಷ್ಮ ವಲಯವು, ರೇಲ್ವೆ ಯೋಜನೆ ಮುಂತಾದ, ಅರಣ್ಯ ಮತ್ತು ವನ್ಯಜೀವಿಗಳಿಗೆ ಮಾರಕವಾಗುವಂತಹ ಯೋಜನೆಗಳನ್ನು ನಿಷೇಧಿಸುತ್ತದೆ. ಈ ರೈಲು ಯೋಜನೆಯು ಪರಿಸರ ಸಂರಕ್ಷಣಾ ಕಾಯಿದೆ ಮತ್ತು ನೀತಿ 1986ರ ಸೆಕ್ಷನ್ (3) ಮತ್ತು (5)ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದಾರೆ.