ಚುಂಚನಕಟ್ಟೆಯಲ್ಲಿ ರಥೋತ್ಸವ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಜ. 7
ತಾಲೂಕಿನ ಚುಂಚನಕಟ್ಟೆಯಲ್ಲಿ ಜ.16 ರಂದು ಇತಿಹಾಸ ಪ್ರಸಿದ್ಧ ಶ್ರೀರಾಮ ದೇವರ ಬ್ರಹ್ಮ ರಥೋತ್ಸವ ನಡೆಯಲಿರುವ ಹಿನ್ನೆಲೆ ಉತ್ಸವ ಮೂರ್ತಿಗಳು ಮತ್ತು ದೇವರ ಆಭರಣಗಳನ್ನು ಚುಂಚನಕಟ್ಟೆ ಶ್ರೀರಾಮ ದೇವಾಲಯಕ್ಕೆ ಪಟ್ಟಣದ ಖಜಾನೆಯಿಂದ ಕೊಂಡೊಯ್ಯಲಾಯಿತು.
ಪಟ್ಟಣದ ಲಕ್ಷ್ಮಿನಾರಾಯಣ ದೇವಾಲಯದಲ್ಲಿ ತಹಸೀಲ್ದಾರ್ ಬಿ.ಎನ್. ವೀಣಾ ಅವರು ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ನಂತರ ಪೊಲೀಸ್ ಭದ್ರತೆಯಲ್ಲಿ ಚುಂಚನಕಟ್ಟೆಗೆ ಕಾಲ್ನಡಿಗೆಯಲ್ಲಿ ದೇವಾಲಯಕ್ಕೆ ಕಳುಹಿಸಲಾಯಿತು.
ಉತ್ಸವ ಮೂರ್ತಿಗಳನ್ನು ಕಾಲ್ನಡಿಗೆಯ ಮೂಲಕ ಹೊತ್ತು ತರುವ ವೇಳೆ ಚಂದಗಾಲು ಗೇಟ್, ಚೀರ್ನಹಳ್ಳಿ, ಹೆಬ್ಬಾಳು, ಸಿದ್ದನಕೊಪ್ಪಲು ಗೇಟ್, ಡಿ.ಕೆ. ಕೊಪ್ಪಲು ಗೇಟ್, ಕೆಸ್ತೂರುಗೇಟ್, ಶ್ರೀರಾಂಪುರ ಗ್ರಾಮಗಳಲ್ಲಿ ಇರುವ ಮಂಟಪಗಳಲ್ಲಿ ಭಕ್ತಾದಿಗಳು ಶ್ರೀರಾಮ-ಸೀತಾ ಲಕ್ಷ್ಮಣ ದೇವರನ್ನು ಕೂರಿಸಿ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಿ ಭಕ್ತಿ ಭಾವಗಳಿಂದ ಜೈಕಾರ ಹಾಕಿದರು.
ನಂತರ ಚುಂಚನಕಟ್ಟೆ ಗ್ರಾಮಕ್ಕೆ ಆಗಮಿಸಿದ ಉತ್ಸವ ಮೂರ್ತಿಗಳನ್ನು ಚುಂಚನಕಟ್ಟೆ ನಾಡಕಚೇರಿ ಉಪ ತಹಸೀಲ್ದಾರ್ ತಿಮ್ಮಯ್ಯ, ರಾಜಸ್ವ ನಿರೀಕ್ಷಕ ಶ್ರೀನಿವಾಸ್, ಗ್ರಾಮ ಲೆಕ್ಕಾಧಿಕಾರಿ ಮಹೇಂದ್ರ, ಶ್ರೀರಾಮ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್, ಪ್ರಧಾನ ಅರ್ಚಕರಾದ ನಾರಾಯಣ ಅಯ್ಯಂಗಾರ್, ಶ್ರೀನಿವಾಸ್ ಬರಮಾಡಿಕೊಂಡರು.
ಬಿಗಿ ಭದ್ರತೆ: ದೇವಾಲಯಕ್ಕೆ ಉತ್ಸವ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೊಡ್ಡಕೊಪ್ಪಲು ಗ್ರಾಮದ ನಿವೃತ್ತ ಶಿಕ್ಷಕ ರಾಮಲಿಂಗೇಗೌಡರ ಕುಟುಂಬದವರು ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಶ್ರೀರಾಮ ಮತ್ತು ಸೀತಾ ಕಲ್ಯಾಣೋತ್ಸವ ಜ.13ರ ರಾತ್ರಿ 8ಕ್ಕೆ ನಡೆಯಲಿದೆ.