ತಂಬಾಕಿಗೆ ಪರ್ಯಾಯವಾಗಿ ಮುಸುಕಿನ ಜೋಳ ಬೆಳೆಯಿರಿ
ಕ.ಪ್ರ.ವಾರ್ತೆ , ಸಾಲಿಗ್ರಾಮ್ಣ ಜ. 7
ತಂಬಾಕು ಬೆಳೆಗೆ ಪರ್ಯಾಯ ಬೆಳೆಯನ್ನಾಗಿ ಮುಸುಕಿನ ಜೋಳವನ್ನು ಬೆಳೆಯುವಂತೆ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಚ್.ಎಂ. ಹೊಂಬಯ್ಯ ರೈತರಿಗೆ ಕರೆ ನೀಡಿದರು.
ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಸಮೀಪದ ದೇವಿತಂದ್ರೆಯಲ್ಲಿ ಮಂಗಳವಾರ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಕಾಡಾ ಮೈಸೂರು ಮತ್ತು ತಂದ್ರೆ ಅಂಕನಹಳ್ಳಿ ನೀರು ಬಳಕೆದಾರರ ಸಹಕಾರಿ ಸಂಘ ಏರ್ಪಡಿಸಿದ್ದ ಹೈಬ್ರೀಡ್ ಮುಸುಕಿನ ಜೋಳ ಪೈನೀರ್ ಬೆಳೆಯ ಕ್ಷೇತ್ರೋತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದ್ದು, ರೈತರು ರಾಸಾಯನಿಕ ಗೊಬ್ಬರದ ಬದಲಾಗಿ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಭೂಮಿಯನ್ನು ಹದವಾಗಿಟ್ಟುಕೊಳ್ಳಬೇಕು. ರೈತರು ಆಧುನಿಕ ಬೇಸಾಯ ಪದ್ಧತಿಯನ್ನು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ತಾವು ಬೆಳೆಯುವ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಬಹುದು. ಜೊತೆಗೆ ಹೆಚ್ಚಿನ ಲಾಭವನ್ನು ಗಳಿಸಬಹುದು ಎಂದು ಹೇಳಿದರು.
ಮುಸುಕಿನ ಜೋಳವು ಅತಿ ಕಡಿಮೆ ಅವಧಿಯಲ್ಲಿ ಕನಿಷ್ಠ ವರ್ಷಕ್ಕೆ ಮೂರು ಬೆಳೆಗಳನ್ನು ಅತಿ ಕಡಿಮೆ ಆರ್ಥಿಕ ಸಂಪನ್ಮೂಲವನ್ನು ಬಳಸಿ ಹೆಚ್ಚಿನ ಆದಾಯವನ್ನು ಕಾಣಬಹುದಾಗಿದ್ದು, ಈ ಬೆಳೆಯು ರೈತನಿಗೆ ನಿಜವಾಗಿಯೂ ರಾಜ ಬೆಳೆಯಾಗುವುದರೊಂದಿಗೆ ಸಣ್ಣ ರೈತರಿಗೆ ಆಶಾದಾಯಕವಾಗಿದೆ ಎಂದು ಅವರು ತಿಳಿಸಿದರು.
ಬಿತ್ತನೆ ಬೀಜವನ್ನು ಅಂಗಡಿಗಳಲ್ಲಿ ಖರೀದಿಸಿದ ರೈತರು ಆ ಬೀಜಗಳಲ್ಲಿ ಸ್ವಲ್ಪ ಭಾಗ ಹಾಗೂ ತಂದ ರಶೀದಿ ಮತ್ತು ಬೀಜದ ಬ್ಯಾಗ್ಗಳನ್ನು ಜೋಪಾನವಾಗಿ ಬೆಳೆ ಕೈಗೆ ಬರುವ ತನಕ ಇಟ್ಟಿರಬೇಕು. ಆಕಸ್ಮಿಕವಾಗಿ ಅಂಗಡಿಯವರು ಕಳಪೆ ಗುಣಮಟ್ಟದ ಬಿತ್ತನೆ ಬೀಜ ಕೊಟ್ಟಿದ್ದರೆ ತಮ್ಮ ಹತ್ತಿರ ಇಟ್ಟುಕೊಂಡಿರುವ ದಾಖಲಾತಿಗಳೊಂದಿಗೆ ಕೃಷಿ ಇಲಾಖಾಧಿಕಾರಿಗಳಿಗೆ ದೂರು ನೀಡಬೇಕು. ಆ ಮೂಲಕ ರೈತರು ತಮಗಾಗುವ ಅನ್ಯಾಯವನ್ನು ತಡೆಗಟ್ಟುವ ಪ್ರಯತ್ನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ದೇವಿತಂದ್ರೆ ಗ್ರಾಮದ ಪ್ರಗತಿಪರ ರೈತ ಮಹದೇವಪ್ಪ ಅವರ ಜಮೀನಿನಲ್ಲಿ ಬೆಳೆದಿರುವ ಮುಸುಕಿನ ಜೋಳದ ಬೆಳೆಯನ್ನು ವೀಕ್ಷಿಸಲಾಯಿತು. ಇದೇ ವೇಳೆ ಅವರನ್ನು ಸನ್ಮಾನಿಸಲಾಯಿತು. ತಂದ್ರೆ ಅಂಕನಹಳ್ಳಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಮಾರ್ಕಂಡೇಗೌಡ ಅಧ್ಯಕ್ಷತೆ ವಹಿಸಿದ್ದರು. ದೇವಿತಂದ್ರೆ ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ಪಾಪಯ್ಯ ಉದ್ಘಾಟಿಸಿದರು. ಸದಸ್ಯರಾದ ಚಂದ್ರಶೇಖರ್, ವೀರಭದ್ರಸ್ವಾಮಿ, ಅಂಬಿಕಾರವಿ, ಸಾವಿತ್ರಮ್ಮ, ಸಂಘದ ಕಾರ್ಯದರ್ಶಿ ಶಿವಣ್ಣ, ಕಾಡಾ ಅಧಿಕಾರಿ ಸಿದ್ದಪ್ಪ, ಕುಪ್ಪಳ್ಳಿ ಸಂಘದ ಅಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಮುದುಗುಪ್ಪೆ ಕುಮಾರ್, ನಿರ್ದೇಶಕರಾದ ಮಂಜುನಾಥ್, ಲೋಕೇಶ್, ಕರ್ಪೂರವಳ್ಳಿ ಸಂಘದ ಅಧ್ಯಕ್ಷ ರಾಜೇಗೌಡ, ಮುಖಂಡ ವೆಂಕಟೇಶ್ ಇದ್ದರು.