ದಲಿತರ ಮೇಲೆ ದೌರ್ಜನ್ಯ: ನಾಳೆ ಪಾದಯಾತ್ರೆ
ಮೈಸೂರು: ಚಾಮರಾಜನಗರ ಜಿಲ್ಲಾ ಆಲ್ದೂರಿನಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಜ.9 ರಂದು ಸಿಪಿಐಎಂ ಹಾಗೂ ದಲಿತ ಹಕ್ಕುಗಳ ಸಮಿತಿ ಪಾದಯಾತ್ರೆ ಹಮ್ಮಿಕೊಂಡಿದೆ.
ಅಂದು ಬೆಳಗ್ಗೆ 11ಕ್ಕೆ ಸಂತೆಮರಳ್ಳಿಯಿಂದ ಹೊರಟು ಚಾಮರಾಜನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಮಿತಿ ಮುಖಂಡ ಗೋಪಾಲಕೃಷ್ಣ ಹರಳಹಳ್ಳಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಲ್ದೂರಿನಲ್ಲಿ ಜ.2 ರಂದು ಶಂಭುಲಿಂಗೇಶ್ವರ ಉತ್ಸವ ನಡೆಯುವ ವೇಳೆ ದಲಿತ ಯುವಕರ ಮೇಲೆ ದೌರ್ಜನ್ಯ ನಡೆದಿದ್ದು, ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದರೂ ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವದಿಂದ ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದರು.
ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ನೊಂದ ದಲಿತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದ ಅವರು, ದಲಿತರ ಮೇಲಿನ ದೌರ್ಜನ್ಯ ದಿನೇ ದಿನೇ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ಕ್ರಮ ವಹಿಸುವಂತೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು, ಮುಖಂಡರಾದ ಸೋಮಶೇಖರ್, ಪುಟ್ಟಮಲ್ಲಯ್ಯ, ಮಹೇಶ್, ಪುಟ್ಟಮಾದ ಇದ್ದರು.