ರಾಸಾಯನಿಕ, ಜೀವಶಾಸ್ತ್ರ ಔಷಧ ಸಂಶೋಧನೆ ಬಗ್ಗೆ ವಿಚಾರ ಸಂಕಿರಣ
ಕ.ಪ್ರ.ವಾರ್ತೆ , ಮೈಸೂರು , ಜ. 7
ಮೈಸೂರು ವಿವಿಯು ರಾಸಾಯನಿಕ ಜೀವಶಾಸ್ತ್ರ ಔಷಧ ಸಂಶೋಧನೆ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಜ.9 ಮತ್ತು 10 ರಂದು ರಾಣಿಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದೆ.
ಮೈಸೂರಿನಲ್ಲಿ ರಾಸಾಯನಿಕ ಔಷಧ ಸಂಶೋಧನ ಕೇಂದ್ರ ತೆರೆಯುವ ಉದ್ದೇಶ ಇದೆ. ಈ ಹಿನ್ನೆಲೆಯಲ್ಲಿ ಇನ್ಸ್ಟಿಟ್ಯೂಷನ್ ಆಫ್ ಎಕ್ಸಲೆನ್ಸ್, ಯುಪಿಇ ಮತ್ತು ಪಿಯುಆರ್ಎಸ್ಇನ ಸಹಯೋಗದಲ್ಲಿ ಈ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಜವಾಹರಲಾಲ್ ನೆಹರು ಮುಂದುವರಿದ ವೈಜ್ಞಾನಿಕ ಸಂಶೋಧನಾ ಕೇಂದ್ರ ಮುಂತಾದ ಸಂಸ್ಥೆಗಳಿಂದ ವಿಜ್ಞಾನಿಗಳು ಮತ್ತು ಶೈಕ್ಷಣಿಕ ತಜ್ಞರು ಭಾಗವಹಿಸುವರು ಎಂದು ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.9ರ ಬೆಳಗ್ಗೆ 10ಕ್ಕೆ ರಾಣಿಬಹದ್ದೂರ್ ಸಭಾಂಗಣದಲ್ಲಿ ಸಿಎಫ್ಟಿಆರ್ಐ ನಿರ್ದೇಶಕ ಪ್ರೊ.ರಾಮ್ ರಾಜಶೇಖರನ್ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಜಪಾನ್ನ ಪ್ರೊ.ಶೈನ್ ಇಚಿರೊ ನಿಶಿಮುರ ಮುಖ್ಯ ಭಾಷಣ ಮಾಡುವರು. ಕೊಲಂಬಸ್ನ ಸೆಂಟರ್ ಫಾರ್ ಚೈಲ್ಡ್ಹುಡ್ ಕ್ಯಾನ್ಸರ್ನ ನಿರ್ದೇಶಕ ಪ್ರೊ.ಪೀಟರ್ ಜೆ. ಹೌಟನ್ ಅತಿಥಿಯಾಗಿ ಆಗಮಿಸುವರು. ಈ ವಿಚಾರ ಸಂಕಿರಣದಲ್ಲಿ ಸಾಂಕ್ರಾಮಿಕ ರೋಗಗಳು, ತಾಯಿ ಹಾಗೂ ಮಕ್ಕಳ ಆರೋಗ್ಯ ಮತ್ತು ಅಪೌಷ್ಠಿಕತೆಯ ಸಮಸ್ಯೆ ನಿಯಂತ್ರಣ ಕುರಿತು ಚರ್ಚಿಸಲಾಗುವುದು ಎಂದರು.
ಅನುದಾನಕ್ಕೆ ಕೋರಿಕೆ: ಮೈಸೂರಿನಲ್ಲಿ ರಾಸಾಯನಿಕ ಔಷಧ ಸಂಶೋಧನಾ ಕೇಂದ್ರ ತೆರೆಯುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷ ಅಭಿಯಾನ್ ಯೋಜನೆಯಡಿ 50 ಕೋಟಿ ಅನುದಾನ ಕೋರಲಾಗಿದೆ. ಅನುದಾನ ಬಿಡುಗಡೆಯಾದರೆ ಖಂಡಿತ ಉದ್ದೇಶ ಈಡೇರಲಿದೆ ಎಂದು ಹೇಳಿದರು.
ಕುಲಸಚಿವ ಡಾ.ಸಿ. ಬಸವರಾಜು ಮಾತನಾಡಿ, ಮೈಸೂರು ವಿವಿಯಲ್ಲಿ ಸಂಶೋಧನೆಗೆ ಯಾವುದೆ ಕೊರತೆ ಉಂಟಾಗಿಲ್ಲ. ಆದರೆ ಸಂಶೋಧಕರಿಗೆ ಪೇಟೆಂಟ್ ಸಿಗುತ್ತಿಲ್ಲ. ಇತ್ತೀಚೆಗೆ ಪೇಟೆಂಟ್ ಪಡೆಯಲು 5 ಲಕ್ಷ ವೆಚ್ಚವಾಗುತ್ತಿದೆ. ಅಷ್ಟೊಂದು ಮೊತ್ತದ ಹಣವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೌದ್ಧಿಕ ಆಸ್ತಿ ಹಕ್ಕು ಕೇಂದ್ರ ಸ್ಥಾಪಿಸುವ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆ ಮೂಲಕ ಸಂಶೋಧಕರಿಗೆ ಉತ್ತೇಜನ ನೀಡುವುದು ಮತ್ತು ಅವರ ಸಂಶೋಧನೆಗೆ ಪೇಟೆಂಟ್ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ನಮ್ಮ ವಿವಿಯಲ್ಲಿ ನಡೆದ ಅನೇಕ ಸಂಶೋಧನೆಗಳು ಯೋಜನೆಗಳಾಗಿ ರೂಪುಗೊಂಡ ಉದಾಹರಣೆ ಇದೆ. ರಾಜ್ಯ ಸರ್ಕಾರ ಈಗ ಜಾರಿಗೆ ತಂದ ಮನಸ್ವಿನಿ ಯೋಜನೆಯನ್ನು ನಮ್ಮ ವಿವಿಯ ಸಂಶೋಧನೆಯ ಆಧಾರದ ಮೇಲೆ ಜಾರಿಗೆ ತರಲಾಗಿದೆ. ಅಲ್ಲದೆ ಅನೇಕ ವಿವಿಗಳೂ ನಮ್ಮ ಸಂಶೋಧನೆ ಆಧಾರದ ಮೇಲೆ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.ಪ್ರೊ.ಬಿ.ಎಸ್. ವಿಶ್ವನಾಥ್ ಇದ್ದರು.
ಪಿಎಚ್.ಡಿ ಪ್ರಬಂಧ ಮಂಡನೆ ಕನ್ನಡದಲ್ಲಿಯೇ ಇರಲಿ: ಆಗ್ರಹ
ಪಿಎಚ್.ಡಿ ಪ್ರಬಂಧಗಳನ್ನು ಇಂಗ್ಲಿಷ್ನಲ್ಲಿಯೇ ಮಂಡಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರ ತೀರ್ಮಾನ ಸರಿಯಲ್ಲ ಎಂದು ಸಿ. ಅರುಣ್ಕುಮಾರ್ ಚಿಲುಕುಂದ ಹೇಳಿದ್ದಾರೆ. ಕನ್ನಡ ವಿಷಯದ ಪಿಎಚ್.ಡಿ ಪ್ರಬಂಧವೂ ಇಂಗ್ಲಿಷ್ನಲ್ಲಿಯೇ ಮಂಡನೆ ಆಗಬೇಕೆ. ಇಂಗ್ಲಿಷ್ನಲ್ಲಿಯೇ ಮಂಡಿಸಬೇಕಾದರೆ ಕನ್ನಡ ಭಾಷೆಗೆಲ್ಲಿ ಮಾನ್ಯತೆ ನೀಡಿದಂತಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕುಲಪತಿ ಪ್ರಕಾರ್ ಇಂಗ್ಲಿಷ್ನಲ್ಲಿಯೇ ಮಂಡಿಸಬೇಕೆಂದರೆ ಕನ್ನಡ ಮಾಧ್ಯಮದಲ್ಲಿ ಮಂಡಿಸುವವರು ಪಿಎಚ್.ಡಿ ಪದವಿ ಪಡೆಯಲು ಅನರ್ಹರೆ ಇಂಗ್ಲಿಷ್ನಲ್ಲಿ ಮಂಡಿಸುವವರು ಮಾತ್ರ ಅರ್ಹರೆ? ಇಂಗ್ಲಿಷ್ನಲ್ಲಿಯೇ ಪ್ರಬಂಧ ಮಂಡಿಸಬೇಕು ಎಂದಾದರೆ ಪ್ರತ್ಯೇಕ ಭಾಷಾಂತರ ವಿಭಾಗವನ್ನು ಹೊಸದಾಗಿ ಸ್ಥಾಪಿಸುವುದು ಸೂಕ್ತ ಎಂದು ಅವರು ಸಲಹೆ ನೀಡಿದ್ದಾರೆ.
ಯುಜಿಸಿ ನಿಮಯವಿದೆ
ಕನ್ನಡ ಭಾಷೆ ಹೊರತುಪಡಿಸಿ ಸ್ನಾತಕೋತ್ತರ ತರಗತಿಯಲ್ಲಿ ಮತ್ತು ಪಿಎಚ್.ಡಿ ಪ್ರವೇಶ ಪರೀಕ್ಷೆಗಳನ್ನು ಇಂಗ್ಲಿಷ್ನಲ್ಲಿಯೇ ನಡೆಸಬೇಕು ಎಂದು ಯುಜಿಸಿ ನಿಯಮ ಇದೆ. ಯಾರೋ ಒಂದಿಬ್ಬರು ಕನ್ನಡದಲ್ಲಿ ಪ್ರಶ್ನೆಪತ್ರಿಕೆ ನೀಡಬೇಕು ಎಂದರೆ ಅವರಿಗೋಸ್ಕರ ನಾವು ಎಲ್ಲವನ್ನೂ ಕನ್ನಡದಲ್ಲಿಯೇ ಸಿದ್ಧಪಡಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ನಾವು ಯಾರ ಮಾತನ್ನು ಕೇಳಬೇಕು ಯುಜಿಸಿ ನಮಗೆ ಸಂಬಳ ನೀಡುತ್ತದೆ. ನಾವು ಅವರ ಮಾತು ಕೇಳಬೇಕಲ್ಲವೆ ರಾಜ್ಯ ಸರ್ಕಾರ ಸಂಬಳ ನೀಡುವುದಾದರೆ ಸರ್ಕಾರ ಯಾವ ಭಾಷೆಯಲ್ಲಿ ಕೇಳುತ್ತದೆಯೋ ಅದೆ ಭಾಷೆಯಲ್ಲಿ ಪಿಎಚ್.ಡಿ ಪರೀಕ್ಷೆ ನಡೆಸುತ್ತೇವೆ ಎಂದು ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಪ್ರತಿಕ್ರಿಯಿಸಿದ್ದಾರೆ.