ಶವವಿಟ್ಟು ದಸಂಸ ಪ್ರತಿಭಟನೆ
ಕ.ಪ್ರ.ವಾರ್ತೆ , ಟಿ.ನರಸೀಪುರ , ಜ. 7
ತಾಲೂಕಿನ ಕೊತ್ತೇಗಾಲ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಶಿವಕುಮಾರ್ ಶವವನ್ನು ದಸಂಸ ಕಾರ್ಯಕರ್ತರು ಸೋಮವಾರ ರಾತ್ರಿ ತಾಲೂಕು ಕಚೇರಿ ಮುಂದಿಟ್ಟು ಪ್ರತಿಭಟಿಸಿದರು.
ಶಿವಕುಮಾರ ಶವದೊಂದಿಗೆ ಆಗಮಿಸಿದ ದಸಂಸ ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ಸಂಬಂಧಿಕರು ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ವಿರುದ್ಧ ಧಿಕ್ಕಾರ ಕೂಗಿ, ಪ್ರತಿಭಟನೆ ಆರಂಭಿಸಿದರು. ದಲಿತ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಭಾವನೆ ಹೊಂದಿರುವ ತಾಲೂಕು ಆಡಳಿತ, ಮೇಲ್ವರ್ಗದ ಜನರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಕೊತ್ತೇಗಾಲದಲ್ಲಿ ದುಡಿಯುವ ಕಾರ್ಮಿಕನಾಗಿದ್ದ ಶಿವಕುಮಾರ್, ನಾಗರಿಕ ಸಮಾಜ ತಲೆತಗ್ಗಿಸುವಂತಹ ಜೀತಪದ್ಧತಿಗೆ ಬಲಿಪಶುವಾಗಿದ್ದಾನೆ. ಜೀತಕ್ಕಿರಿಸಿಕೊಂಡಿದ್ದ ಸುಬ್ಬಣ್ಣ ಎಂಬಾತ 10 ಸಾವಿರ ನೀಡಿ, ಖಾಲಿ ಪತ್ರವೊಂದಕ್ಕೆ ಸಹಿ ಮಾಡಿಸಿಕೊಂಡು ಕಾನೂನಿನಡಿ ಕಿರುಕುಳ ನೀಡಿ ಶೋಷಣೆ ಮಾಡಿದ್ದಾರೆ. ಹಣ ನೀಡದಿದ್ದರೆ ಜೀತಕ್ಕೆ ಬರಬೇಕೆಂದು ಸಾರ್ವಜನಿಕವಾಗಿ ನಿಂದಿಸಿದ್ದರಿಂದ ಅಮಾಯಕನೊಬ್ಬ ಬಲಿಯಾಗಿದ್ದಾನೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ತಹಸೀಲ್ದಾರ್ ನಿರ್ಲಕ್ಷ್ಯ: ಪ್ರತಿಭಟನೆ ನೇತೃತ್ವ ವಹಿಸಿದ್ದ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಶಿವಕುಮಾರ ಮಾತನಾಡಿ, ತಹಸೀಲ್ದಾರರಿಗೆ ದುಡಿಯುವ ಸಮುದಾಯ ದಲಿತರೆಂದರೆ ಪ್ರತಿ ಬಾರಿಯು ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ಜೀತಪದ್ಧತಿಗೆ ಅಮಾಯಕನೊಬ್ಬ ಬಲಿಯಾದರೂ ನೋಡಲು ಸೌಜನ್ಯಕ್ಕಾದರೂ ಆಸ್ಪತ್ರೆಗೆ ಭೇಟಿ ನೀಡಲಿಲ್ಲ. ಆತ್ಮಹತ್ಯೆಗೆ ಕಾರಣರಾದ ಆರೋಪಿ ಸುಬ್ಬಣ್ಣ ಅವರನ್ನು ಕೂಡಲೇ ಬಂಧಿಸಬೇಕು. ಮೃತನ ಕುಟುಂಬಕ್ಕೆ ತುರ್ತು ಪರಿಹಾರ ನೀಡಬೇಕು. ಅಲ್ಲಿಯವರೆಗೂ ಶವಸಂಸ್ಕಾರ ಮಾಡದೇ ತಾಲೂಕು ಕಚೇರಿ ಎದುರು ಧರಣಿ ಮುಂದುವರಿಸುವುದಾಗಿ ಎಚ್ಚರಿಸಿದರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಅವರನ್ನು ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮೂಗೂರು ಜಿಪಂ ಸದಸ್ಯೆ ಎಂ. ಸುಧಾ ಮಹದೇವಯ್ಯ ಪ್ರತಿಭಟನಾನಿರತರ ಅಹವಾಲು ಆಲಿಸಿದರು. ದಸಂಸ ತಾಲೂಕು ಸಂಚಾಲಕ ಕೆ. ರಾಜು, ಸಂಘಟನಾ ಸಂಚಾಲಕ ಮಹದೇವಯ್ಯ, ಮೈಸೂರು ತಾಲೂಕು ಸಂಚಾಲಕ ಭೀಮರಾಜ್, ಮೃತ ಪತ್ನಿ ರೇಖಾ, ಸಂಬಂಧಿಗಳಾದ ಪುಟ್ಟಮ್ಮ, ಗೌರಮ್ಮ, ಕಾಂಗ್ರೆಸ್ ಮುಖಂಡ ಶಿವಮಲ್ಲಯ್ಯ, ನೂರಾರು ಮಂದಿ ಗ್ರಾಮಸ್ಥರು ಇದ್ದರು.