ಸಂಸ್ಕಾರ, ಸಂಸ್ಕೃತಿಯಿಂದ ದೇಶ ಉಳಿಯಲು ಸಾಧ್ಯ
ಕೆ.ಆರ್. ನಗರ: ಸಂಸ್ಕಾರ, ಸಂಸ್ಕೃತಿ ಉಳಿಯಬೇಕೆಂದರೆ ನಮ್ಮ ಕುಟುಂಬಗಳು ಉಳಿಯಬೇಕು. ಆಗ ಮಾತ್ರ ಈ ದೇಶ ಉಳಿಯಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಕೃಷ್ಣಮಂದಿರದಲ್ಲಿ ಭಾರತ್ ವಿಕಾಸ ಪರಿಷತ್ ಕಶ್ಯಪ ಶಾಖೆ ಆಯೋಜಿಸಿದ್ದ ಕುಟುಂಬ ಮಿಲನ ಕಾರ್ಯಕ್ರಮ ಉದ್ಘಾಟಿಸಿ, ಸಭಿಕರೊಂದಿಗೆ ನಡೆದ ಸಂವಾದಲ್ಲಿ ಅವರು ಮಾತನಾಡಿದರು.
ಕುಟುಂಬದಿಂದ ವ್ಯಕ್ತಿಯನ್ನು ತೆಗೆದರೆ ನೀರಿನಿಂದ ಮೀನನ್ನು ತೆಗೆದಂತೆ ನಿರ್ನಾಮವಾಗುತ್ತಾನೆ. ಹಿಂದೆ ಇದ್ದ ಬೃಹತ್ ಕುಟುಂಬಗಳು ಪರಸ್ಪರ ನಂಬಿಕೆ, ಸಹಕಾರ ತತ್ವದಡಿ ಸಂತಸ ಜೀವನ ನಡೆಸುತ್ತಿದ್ದರು. ಆದರೆ ಕಾಲ ಕ್ರಮೇಣ ಕುಟುಂಬಗಳು ಸಂಕೀರ್ಣವಾಗುತ್ತಿದ್ದು, ಸ್ವಾರ್ಥದ ಬದುಕು ಕಾಣುತ್ತಿದ್ದೇವೆ ಎಂದು ತಿಳಿಸಿದರು.
ಭಾರತೀಯ ವಿದ್ಯಾಸಂಸ್ಥೆ ಆಡಳಿತ ಮಂಡಳಿ ವತಿಯಿಂದ ಗೋ. ಮಧುಸೂದನ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಆರೋಗ್ಯ ಅಧಿಕಾರಿಯಾಗಿ ನಿವೃತ್ತರಾದ ಡಾ.ಮಾಲೇಗೌಡ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಪರಿಷತ್ ಅಧ್ಯಕ್ಷ ಮದನ್ಲಾಲ್, ಮಾಜಿ ಅಧ್ಯಕ್ಷ ಡಾ.ಮೋಹನದಾಸ ಭಟ್, ಕಾರ್ಯದರ್ಶಿ ನಾಗರಾಜ್, ಕೈಗಾರಿಕೋದ್ಯಮಿ ರಾಮಾನುಜಂ, ಡಾ. ಜಗನ್ನಾಥ್, ರಾಮಸ್ವಾಮಿ, ಸೋಮಯಾಜಿ ಸಹೋದರರು ಇದ್ದರು.