ಅಗತ್ಯ ಸೌಕರ್ಯ ಕಲ್ಪಿಸಲು ಬದ್ಧ: ಸಾರಾ
ಸಾಲಿಗ್ರಾಮ: ಶೀತಪೀಡಿತವಾಗಿರುವ ಗಾಯನಹಳ್ಳಿ ಗ್ರಾಮಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಸಮೀಪದ ಗಾಯನಹಳ್ಳಿ ಗ್ರಾಮವು ಶೀತಪೀಡಿತವಾಗಿರುವ ಬಗ್ಗೆ ಗ್ರಾಮದಲ್ಲಿ ಅಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಬುಧವಾರ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಗ್ರಾಮದ ಸುತ್ತಲೂ ಹಾರಂಗಿ ಯೋಜನೆಯ ನಾಲೆ ಇದ್ದು, ಈ ನಾಲೆಯಲ್ಲಿ ನೀರು ಹರಿದ ವೇಳೆ ಗ್ರಾಮದಲ್ಲಿನ ಮನೆಗಳು ಶಿಥಿಲಾವಸ್ಥೆಗೆ ಒಳಪಡುತ್ತಿದ್ದು, ಇದನ್ನು ತಡೆಗಟ್ಟಿ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸಿ ಜನತೆಗೆ ಅನುಕೂಲ ಕಲ್ಪಿಸಬೇಕೆಂದು ಶಾಸಕ ಸಾ.ರಾ. ಮಹೇಶ್ 2009ರಲ್ಲೇ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದರ ಫಲವಾಗಿ ಸರ್ಕಾರದ ಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಸಭೆಗಳು ನಡೆದು ಅಧಿಕಾರಿಗಳಿಂದ ಗ್ರಾಮದ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ನೈಜ ಸ್ಥಿತಿಯನ್ನು ಸರ್ಕಾರಕ್ಕೆ ನೀಡಲಾಗಿತ್ತು.
ಇದರ ಆಧಾರದ ಮೇಲೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಜನತೆಯೊಂದಿಗೆ ಗ್ರಾಮದ ಶೀತ ವ್ಯವಸ್ಥೆಯನ್ನು ತಡೆಗಟ್ಟಲು ಮಾಡಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿದರು. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಮಾಹಿತಿಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಬೇಕೆಂದು ಅವರು ಸೂಚಿಸಿದರು.
ಗ್ರಾಮದ ಪರವಾಗಿ ಮುಖಂಡ ಸೋಮಶೇಖರಪ್ಪ ಮಾತನಾಡಿ, ಗ್ರಾಮದಲ್ಲಿನ ಸರ್ವ ಜನಾಂಗದವರೂ ಒಟ್ಟಾಗಿ ಕುಳಿತು ಈಗಾಗಲೇ ನಿರ್ಣಯವನ್ನು ಕೈಗೊಂಡಿದ್ದೇವೆ. ಅದರ ಪ್ರಕಾರ ಗ್ರಾಮವನ್ನು ಸ್ಥಳಾಂತರಿಸಲು ಸ್ಥಳಾವಕಾಶ ಇಲ್ಲದ ಕಾರಣ, ಗ್ರಾಮದಲ್ಲಿನ ಮನೆಗಳನ್ನು ಪುನರ್ ನಿರ್ಮಾಣ ಮಾಡಿಕೊಡಬೇಕು, ಗ್ರಾಮಕ್ಕೆ ಉತ್ತಮವಾದ ಕಾಂಕ್ರಿಟ್ನಿಂದ ರಸ್ತೆ ಮತ್ತು ಚರಂಡಿ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಶಾಸಕ ಸಾ.ರಾ. ಮಹೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲೂ ಸರ್ವಜನಾಂಗದವರು ಒಟ್ಟಿಗೆ ಸೇರಿ ನಿರ್ಣಯ ಕೈಗೊಂಡಿರುವುದು ಬೇರೆ ಗ್ರಾಮಗಳಿಗೆ ಈ ಗ್ರಾಮದ ಜನತೆಯು ಮಾದರಿಯಾಗಿದ್ದಾರೆ. ಈ ಗ್ರಾಮದ ಸುತ್ತ ಗುಣಮಟ್ಟದಿಂದ ಕೂಡಿದ ಚರಂಡಿಯನ್ನು ಮಾಡುವ ಮೂಲಕ ಗ್ರಾಮಕ್ಕಾಗುವ ಶೀಥಲ ವ್ಯವಸ್ಥೆಯನ್ನು ತಡೆಗಟ್ಟಲಾಗುವುದು. ಗ್ರಾಮದೊಳಗಿರುವ ರಸ್ತೆ ಮತ್ತು ಚರಂಡಿಗಳನ್ನು ಕಾಂಕ್ರಿಟ್ನಿಂದ ಅಭಿವೃದ್ಧಿಪಡಿಸುವ ಮೂಲಕ ಗ್ರಾಮವನ್ನು ಸಂಪೂರ್ಣವಾಗಿ ಶೀತದಿಂದ ರಕ್ಷಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ತಹಸೀಲ್ದಾರ್ ವೀಣಾ, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಸಿದ್ದಲಿಂಗಮೂರ್ತಿ, ಜೆಡಿಎಸ್ ಮುಖಂಡರಾದ ಧನಂಜಯ, ಅಶೋಕ್, ತಾ. ಆರೋಗ್ಯಾಧಿಕಾರಿ ಡಾ. ಶಿವಪ್ರಸಾದ್, ಎಇಇ ಗಳಾದ ನರಸೇಗೌಡ, ಬಸವರಾಜು, ರಂಗಸ್ವಾಮಿ, ಪಶುಸಂಗೋಪನಾ ಇಲಾಖಾಧಿಕಾರಿ ಡಾ. ಷಡಕ್ಷರಿ, ಕೃಷಿ ಇಲಾಖೆ ಚಂದ್ರಶೇಖರ್, ತೋಟಗಾರಿಕಾ ಇಲಾಖೆ ದಿನೇಶ್, ಅಂತಾರ್ಜಲ ಇಲಾಖೆ ಸೌಮ್ಯ, ಉಪ ತಹಸೀಲ್ದಾರ್ ತಿಮ್ಮಯ್ಯ, ಆರ್ಐ ಪ್ರಭಾಕರ್, ಎಸ್ಐ ಮಹೇಶ್, ಎಪಿಎಂಸಿ ನಿರ್ದೇಶಕ ಸೋಮಶೇಖರ್, ಜಿಪಂ ಎಂಜಿನಿಯರ್ ಮಂಜುನಾಥ್, ಪಿಡಿಒ ರಾಮೇಗೌಡ, ಮಂಜುನಾಥ್ ಭಾಗವಹಿಸಿದ್ದರು.