ಆಯುರ್ವೇದ ಆಸ್ಪತ್ರೆಗೆ 'ನೂರಾರು' ರೋಗ!
ಮೈಸೂರು: ಶತಮಾನ ಪೂರೈಸಿರುವ ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಮೂಲಭೂತ ಸೌಕರ್ಯವಿಲ್ಲದೆ ಸೊರಗುತ್ತಿದೆ.
106ನೇ ವರ್ಷ ಪೂರೈಸುತ್ತಿರುವ ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು, ಮಳೆ ನೀರು ಸೋರಿಕೆಯಾಗಿ ಪಾಚಿ ಕಟ್ಟಿದೆ. ಬಿರುಕು ಬಿಟ್ಟ ಗೋಡೆಗಳ ನಡುವೆ ಗಿಡ ಗಂಟೆಗಳು ಬೆಳೆದು ನಿಂತಿವೆ. ಇನ್ನು ಕಾಲೇಜಿನ ಆವರಣದಲ್ಲಿ ವಿಶಾಲವಾದ ಜಾಗವಿದ್ದರೂ ಉದ್ಯಾನ ನಿರ್ವಹಣೆ ಇಲ್ಲದಂತಾಗಿದೆ. ಆಯುರ್ವೇದ ಚಿಕಿತ್ಸೆಗೆ ಮುಖ್ಯವಾದ ಔಷಧಿ ಸಸ್ಯಗಳನ್ನು ಬೆಳೆಸುವ ಬದಲು ಪಾರ್ಥೇನಿಯಂ ಗಿಡ, ಸೊಪ್ಪು ಸೊದೆ ಬೆಳೆದು ನಿಂತಿವೆ.
ಭಾರತೀಯ ವೈದ್ಯ ಪದ್ಧತಿಯಲ್ಲಿ ಆಯುರ್ವೇದಕ್ಕೆ ತನ್ನದೆ ಆದ ಸ್ಥಾನಮಾನವಿದೆ. ಋಷಿಮುನಿಗಳು ಆಯುರ್ವೇದಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇದೆಲ್ಲವನ್ನು ಸಾರ್ವಜನಿಕರಿಗೆ ನೀಡುವ ಸಲುವಾಗಿ ರಾಜ ಮಹಾರಾಜರು ಈ ಕಟ್ಟಡ ಕಟ್ಟಿಸಿ ಕೊಡುಗೆಯಾಗಿ ನೀಡಿದ್ದರು. ವಿಶಿಷ್ಟ ವೈದ್ಯ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿರುವ ಸದರಿ ಕಾಲೇಜಿಗೆ ಬಹುಮುಖ್ಯವಾಗಿ ಅನುದಾನ ಕೊರತೆ, ಮಾನವ ಸಂಪನ್ಮೂಲದ ಕೊರತೆ ತೀವ್ರವಾಗಿ ಕಾಡುತ್ತಿದೆ. ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಪಿ. ಸತ್ಯನಾರಾಯಣ ಭಟ್ ಅಧಿಕಾರ ವಹಿಸಿಕೊಂಡ ನಂತರ ಕಾಯಕಲ್ಪ ಕಲ್ಪಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಸರಿಯಾಗಿ ಸ್ಪಂದಿಸುತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳಾದ ಶಾಸಕ ಸಿ.ಎಚ್. ವಿಜಯಶಂಕರ್ ತಮ್ಮ ಶಾಸಕರ ನಿಧಿಯಿಂದ 15 ಲಕ್ಷ ಹಾಗೂ ಗೋ. ಮಧುಸೂದನ್ ಅವರು 6 ಲಕ್ಷ ನೀಡಿದ್ದಾರೆ. ಈ ಹಣವನ್ನು ಯೋಗ ಮಾಡಲು ಬೇಕಾದ ಬೃಹತ್ ಸಭಾಂಗಣ ನಿರ್ಮಿಸಲು ಬಳಸಿಕೊಳ್ಳಲಾಗುತ್ತಿದೆ. ಇನ್ನೂ ಕಾಮಗಾರಿಯೂ ಆರಂಭವಾಗಬೇಕಿದೆ.
ಸದ್ಯ ಆಯುರ್ವೇದ ಆಸ್ಪತ್ರೆಯಲ್ಲಿ 200 ಬೆಡ್ಗಳ ವ್ಯವಸ್ಥೆ ಇದ್ದು ಪ್ರತಿದಿನ 110 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಪಿಡಿ ಘಟಕದಲ್ಲಿ ದಿನನಿತ್ಯ 200ರಿಂದ 300 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಬಂದವರಿಗೆಲ್ಲ ಸರಿಯಾದ ಔಷಧಿ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಅಲ್ಲಿನ ವೈದ್ಯಾಧಿಕಾರಿಗಳ ಅಳಲಾಗಿದೆ. ಸರ್ಕಾರ ನಿಗದಿತ ಸಮಯದೊಳಗೆ ಔಷಧಿಯನ್ನು ಪೂರೈಸದಿರುವುದು ಪ್ರಮುಖ ಕಾರಣವಾಗಿದೆ. ಹಾಗೆ ಹಿರಿಯ ವೈದ್ಯಾಧಿಕಾರಿಗಳು ಈಗ ನಿವೃತ್ತರಾಗುತ್ತಿರುವುದರಿಂದ ವೈದ್ಯಾಧಿಕಾರಿಗಳ ಕೊರತೆ ಬಾಧಿಸತೊಡಗಿದೆ. ಜತೆಗೆ ನರ್ಸ್ಗಳು, ಡಿ ಗ್ರೂಪ್ ನೌಕರರನ್ನು ಆದಷ್ಟು ಬೇಗ ಭರ್ತಿ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕಿದೆ.
ನಾನು ಪ್ರಾಂಶುಪಾಲನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಈ ಕಾಲೇಜಿಗೆ ಕಾಯಕಲ್ಪ ಕಲ್ಪಿಸಲು ಪ್ರಯತ್ನಿಸುತ್ತಿದ್ದೇನೆ. ಆಡಳಿತ ವರ್ಗದಿಂದ ಮತ್ತಷ್ಟು ಉತ್ತೇಜನ ಸಿಗಬೇಕಿದೆ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಚೆನ್ನಾಗಿದೆ.
- ಡಾ.ಪಿ. ಸತ್ಯನಾರಾಯಣ ಭಟ್, ಪ್ರಾಂಶುಪಾಲರು
ಚಂದ್ರವನಕ್ಕೂ ಬೇಕು ಮುಕ್ತಿ
ಆಯುರ್ವೇದ ಚಿಕಿತ್ಸೆಗೆ ಅವಶ್ಯವಾದ ಔಷಧಿ ಸಸ್ಯಗಳನ್ನು ಬೆಳೆಸಲು ಇರುವ ಜಾಗವೆಂದರೆ ಚಂದ್ರವನ. ಕುಕ್ಕರಹಳ್ಳಿ ಕೆರೆ ಬಳಿ ಇರುವ ಉದ್ಯಾನವನದಲ್ಲಿ ಸಾಕಷ್ಟು ಸಸ್ಯಗಳನ್ನು ಬೆಳೆಸಲು ಅವಕಾಶವಿದೆ. ಆದರೆ, ಬೆಳೆಸಲು, ಅದನ್ನು ನಿರ್ವಹಿಸಲು ಮಾನವ ಸಂಪನ್ಮೂಲದ ಅವಶ್ಯಕತೆ ಇದೆ. ಈಗ ಮೂರು ಮಂದಿ ದಿನಗೂಲಿ ನೌಕರರು ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಔಷಧಿ ವಿಚಾರದಲ್ಲಿ ಅಷ್ಟೊಂದು ಜ್ಞಾನವಿಲ್ಲ. ಮೈಸೂರು ಆಯುರ್ವೇದ ವಿದ್ಯಾಲಯವು ಭಾರತದಲ್ಲಿಯೇ ಅತ್ಯಂತ ಪ್ರಾಚೀನವಾಗಿದ್ದು, ಶತಮಾನ ಪೂರೈಸಿರುವ ಏಕೈಕ ಸಂಸ್ಥೆಯಾಗಿದೆ. ದೇಶದ ದೊಡ್ಡ ವಿದ್ವಾಂಸರು ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು ಹೊಸ ಆವಿಷ್ಕಾರಗಳಿಗೆ ಇದು ಮುನ್ನುಡಿ ಬರೆದಿದೆ. ಇದರ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಲು ಎಲ್ಲರ ಸಹಕಾರ ಬೇಕಾಗಿದೆ. ಕಾಯಚಿಕಿತ್ಸೆ, ಮೂಲ ಸಿದ್ಧಾಂತ ವಿಭಾಗಗಳ ಉನ್ನತೀಕರಣದೊಂದಿಗೆ ಇಂಟರ್ನೆಟ್ ಮತ್ತು ಡಿಜಿಟಿಸೈಷನ್ ಸೌಲಭ್ಯ ಒದಗಿಸಲು ಸರ್ಕಾರ ಚಿಂತಿಸಬೇಕಾಗಿದೆ.
-ಜೆ. ಮಹದೇವ