ಪಾರಂಪರಿಕ ಪಟ್ಟಿಗೆ 14 ಪ್ರದೇಶಗಳ ಸೇರ್ಪಡೆ
ಮೈಸೂರು: ರಾಜ್ಯದ ಪಾರಂಪರಿಕ ಪ್ರದೇಶಗಳ ಪಟ್ಟಿಗೆ ಈಗ ಹದಿನಾಲ್ಕು ಐತಿಹಾಸಿಕ ಸ್ಥಳಗಳು ಸೇರ್ಪಡೆಯಾಗಿವೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಮೈಸೂರು, ಶ್ರೀರಂಗಪಟ್ಟಣ, ಬೀದರ್, ಗುಲ್ಬರ್ಗ, ಬಿಜಾಪುರ ಹಾಗೂ ಕಿತ್ತೂರು ಸೇರಿದಂತೆ ಒಟ್ಟು ಆರು ಪಾರಂಪರಿಕ ಪ್ರದೇಶಗಳು, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯವನ್ನು ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ನಿರ್ವಹಿಸುತ್ತಿತ್ತು.
ಆದರೆ ಕಳೆದ ವರ್ಷದಿಂದೀಚೆಗೆ ಈ ಪಟ್ಟಿಗೆ ಹದಿನಾಲ್ಕು ಪ್ರಮುಖ ಪ್ರವಾಸಿ ಮತ್ತು ಐತಿಹಾಸಿಕ ಸ್ಥಳಗಳು ಸೇರ್ಪಡೆಯಾಗಿವೆ. ರಾಜ್ಯ ಸರ್ಕಾರ ತನ್ನ ಬಜೆಟ್ನಲ್ಲಿ ಚಂದ್ರಳ ಪರಮೇಶ್ವರಿ ದೇವಸ್ಥಾನಕ್ಕೆ ಹೆಸರಾದ ಗುಲ್ಬರ್ಗ ಜಿಲ್ಲೆಯ ಸನ್ನತಿ, ನಾಗಾವಿ, ಕುಮ್ಮಟಗಿ, ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ, ಐಹೊಳೆ, ಕೆಂಪೇಗೌಡರ ಆಡಳಿತ ಕೇಂದ್ರವಾಗಿದ್ದ ಬೆಂಗಳೂರು, ಚಾಲುಕ್ಯರು ಮತ್ತು ಅತ್ತಿಮಬ್ಬೆಗೆ ಹೆಸರಾದ ಜೈನ ಬಸದಿಯ ಕೇಂದ್ರ ಲಕ್ಕುಂಡಿ, ಕದಂಬರ ರಾಜಧಾನಿಯಾಗಿದ್ದ ಬನವಾಸಿ, ಗಂಗರ ರಾಜಧಾನಿಯಾಗಿದ್ದ ತಲಕಾಡು, ಜಕಣಾಚಾರಿಯ ಶಿಲ್ಪಕಲೆಗೆ ಹೆಸರಾದ ಶಿವಮೊಗ್ಗ ಜಿಲ್ಲೆಯ ಬೆಳ್ಳಿಗಾವಿ, ಬೇಲೂರು, ಹಳೇಬೀಡು, ಮುಲೇಖೇಡು, ಹೊಯ್ಸಳರು ಕಟ್ಟಿಸಿದ ಚಲುವನಾರಾಯಣ ಸ್ವಾಮಿ ದೇವಸ್ಥಾನ ಇರುವ ಪಾಂಡುವಾಪುರ ತಾಲೂಕಿನ ಮೇಲುಕೋಟೆ ಪ್ರದೇಶವನ್ನೂ ಪಾರಂಪರಿಕ ಪ್ರದೇಶಗಳೆಂದು ಘೋಷಿಸಿದೆ. ಇದರಿಂದಾಗಿ ಪಾರಂಪರಿಕ ಪಟ್ಟಿ ಬೆಳೆದಂತೆ ಇಲಾಖೆಯ ಜವಾಬ್ದಾರಿಯು ಹೆಚ್ಚಿದೆ.
ಕೇಂದ್ರದ ಹಣಕಾಸು ಯೋಜನೆ ಮತ್ತು ರಾಜ್ಯ ಸರ್ಕಾರದ ಅನುದಾನದ ನೆರವಿನಿಂದ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಈಗಾಗಲೆ ಈ ಪ್ರದೇಶಗಳ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದೆ. ಈ ತಿಂಗಳ ಅಂತ್ಯದ ಬಳಿಕ ಹಂತ ಹಂತವಾಗಿ ಈ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಇಲಾಖೆ ಆಯುಕ್ತ ಡಾ.ಸಿ.ಜೆ. ಬೆಟಸೂರ್ ಮಠ ತಿಳಿಸಿದ್ದಾರೆ.
ಪಾರಂಪರಿಕ ಕಟ್ಟಡ ಬಲವರ್ಧನೆ: ಇದರ ಜೊತೆಗೆ 2013-14ನೇ ಸಾಲಿನ ಆಯವ್ಯಯದ ಘೋಷಣೆಯಂತೆ 1 ಕೋಟಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪರಂಪರೆ ಕಟ್ಟಡ ಬಲಪಡಿಸುವುದು, 25 ಕೋಟಿ ವೆಚ್ಚದಲ್ಲಿ ತಾತಗುಣಿಯಲ್ಲಿನ ರೋರಿಕ್ ಎಸ್ಟೇಟ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಸ್ತು ಸಂಗ್ರಹಾಲಯವನ್ನು ಎರಡು ಹಂತಗಳಲ್ಲಿ ಸ್ಥಾಪಿಸಲು ಹಾಗೂ 5 ಕೋಟಿ ವೆಚ್ಚದಲ್ಲಿ ತುಳು ಮತ್ತು ಬಿಲ್ಲವ ಸಮಾಜದ ಆರಾಧ್ಯ ದೈವವಾದ ಕೋಟಿ ಚನ್ನಯ್ಯ ಅವರ ಜನ್ಮಸ್ಥಳವಾದ ಪುತ್ತೂರು ತಾಲೂಕಿನ ಪಡುಮಲೈಯಲ್ಲಿ ಅವರು ಹುಟ್ಟಿ ಬೆಳೆದ ಕುರುಹುಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಈ ಸಂಬಂಧ ಈಗಾಗಲೇ ಕೋಟಿ ಚನ್ನಯ್ಯ ಅವರು ಹುಟ್ಟಿ ಬೆಳೆದ ಕುರುಹುಗಳ ಅಭಿವೃದ್ಧಿ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ವಹಿಸಿದ್ದು, ಈಗ ಪಡುಮಲೈಯಲ್ಲಿ ಅಭಿವೃದ್ಧಿ ಕಾರ್ಯಾರಂಭವಾಗಿದೆ. ಅಂತೆಯೇ ವಿದ್ಯಾವರ್ಧಕ ಸಂಘದ ಪರಂಪರೆ ಕಟ್ಟಡದ ಬಲಪಡಿಸುವ ಕೆಲಸವೂ ನಡೆಯುತ್ತಿದೆ.
-ಡಿ.ಎನ್. ಮಹೇಂದ್ರ