ಮೈಸೂರು ವಿವಿ ಗ್ರಂಥಾಲಯ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಕೈ ಜೋಡಿಸಿ: ಪ್ರೊ. ರಂಗಪ್ಪ
ಮೈಸೂರು: ಮೈಸೂರು ವಿವಿ ಗ್ರಂಥಾಲಯವು ಲಂಡನ್‌ನ ಕೇಂಬ್ರಿಡ್ಜ್, ಮಾಸ್ಕೋದ ಗ್ರಂಥಾಲಯಗಳಂತೆ ಇಲ್ಲದಿರಬಹುದು. ಆದರೆ, ಆ ಮಟ್ಟಕ್ಕೆ ಕೊಂಡೊಯ್ಯಲು ಸಾಕಷ್ಟು ಅವಕಾಶವಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಮಾನಸಗಂಗೋತ್ರಿಯ ಮೈಸೂರು ವಿವಿ ಗ್ರಂಥಾಲಯದ ಮೂರನೇ ಮಹಡಿಯಲ್ಲಿ ಏರ್ಪಡಿಸಿರುವ ನಾಲ್ಕು ದಿನಗಳ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಸದರಿ ಗ್ರಂಥಾಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಿವಿ ಹಾಗೂ ಗ್ರಂಥಪಾಲಕರು ಶ್ರಮಿಸಿದಲ್ಲಿ ಅಂದುಕೊಂಡ ಕನಸು ಸಾಕಾರಗೊಳ್ಳಲಿದೆ ಎಂದರು.
ನಮ್ಮ ವಿವಿಯಲ್ಲಿ ಓದಲು ಸಾಕಷ್ಟು ಅವಕಾಶವಿದೆ. ಅಂದ ಮಾತ್ರಕ್ಕೆ ವಿದ್ಯಾರ್ಥಿಗಳು ಬಯಸಿದ ವಿಷಯದ ಬಗ್ಗೆ ತಕ್ಕ ಮಾಹಿತಿ ಸಿಗಬೇಕು ಎಂಬುದು ನಮ್ಮ ಬಯಕೆ. ಅದಕ್ಕಾಗಿಯೇ ಈ ಪ್ರದರ್ಶನ ಏರ್ಪಡಿಸಲಾಗಿದೆ. ಇಲ್ಲಿ ಯಾವುದೇ ವಿಷಯದ ಪುಸ್ತಕಗಳು ದೊರೆಯುತ್ತವೆ. ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಂತೆ ಅವರು ಕೋರಿದರು. ಕುಲಸಚಿವ ಪ್ರೊ.ಸಿ. ಬಸವರಾಜು ಮಾತನಾಡಿ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಗ್ರಂಥಾಲಯ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಈ ಗ್ರಂಥಾಲಯದ ಅಭಿವೃದ್ಧಿಗೆ ನಾವೆಲ್ಲ ಕೈಜೋಡಿಸೋಣ ಎಂದರು.
ಜ.8ರಿಂದ 11ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಸ್ನಾತಕೋತ್ತರ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಪುಸ್ತಕಗಳು ದೊರೆಯುತ್ತವೆ. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಮಳಿಗೆಗಳು ತೆರೆದಿರುತ್ತವೆ. ಶೇ.20ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಲಾಗುತ್ತದೆ. ಯುಜಿಸಿ- ಯುಪಿಇ ಸಂಯೋಜಕ ಪ್ರೊ.ಕೆ. ಭೈರಪ್ಪ, ಇನ್‌ಸ್ಟಿಟ್ಯೂಷನ್ ಆಫ್ ಎಕ್ಸ್‌ಲೆನ್ಸ್ ಸಂಯೋಜಕ ಪ್ರೊ.ಜಿ. ಹೇಮಂತ್‌ಕುಮಾರ್, ಗ್ರಂಥಪಾಲಕ ಡಾ.ಸಿ.ಪಿ. ರಾಮಶೇಷನ್, ಗ್ರಂಥಾಲಯ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷೆ ಪ್ರೊ. ಕೈಸರ್ ನಿಕಂ ಇದ್ದರು.