ರೈಲು ಮಾರ್ಗಕ್ಕೆ ಮಂಜೂರಾತಿ
ಟಿ.ನರಸೀಪುರ: ಬೆಂಗಳೂರಿನಿಂದ ಮಳವಳ್ಳಿ, ಕೊಳ್ಳೇಗಾಲ ಮಾರ್ಗವಾಗಿ ಚಾಮರಾಜನಗರಕ್ಕೆ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ 1,330 ಕೋಟಿ ಮಂಜೂರಾತಿ ದೊರಕಿದೆ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರದ ಕೀಳನಪುರ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ಕೇಂದ್ರ ರೇಲ್ವೆ ಸಚಿವ ಮತ್ತು ಸಿಎಂ ಸಿದ್ದರಾಮಯ್ಯ ಅವರಿಂದ ಕಾಮಗಾರಿಗೆ ಚಾಲನೆ ಕೊಡಿಸಲಾಗುವುದು ಎಂದರು. ಕೇಂದ್ರದಿಂದ ಕುಡಿಯುವ ನೀರಿನ ಯೋಜನೆಗೆ 130 ಕೋಟಿ ಜಿಪಂಗೆ ಬಿಡುಗಡೆ ಮಾಡಲಾಗಿದೆ. ಎಂದರು. ಕಾಂಗ್ರೆಸ್ ಮುಖಂಡ ರಾಕೇಶ್ ಸಿದ್ದರಾಮಯ್ಯ ಮಾತನಾಡಿ, ಸುವರ್ಣ ಗ್ರಾಮ ಯೋಜನೆಯಡಿ ಕೀಳನಪುರ ಗ್ರಾಪಂಗೆ 1.36 ಕೋಟಿ ಮಂಜೂರು ಮಾಡಲಾಗಿದೆ ಎಂದರು. ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವ ಮಾತನಾಡಿದರು. ತಾಪಂ ಅಧ್ಯಕ್ಷೆ ನಿರ್ಮಲ ಹೊನ್ನಪ್ಪ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಎಂ. ರಾಮಯ್ಯ, ಜಿಪಂ ಸದಸ್ಯರಾದ ಎಂ.ಬಿ. ಸಿದ್ದೇಗೌಡ, ಕೆ. ಮಹದೇವ, ತಾಪಂ ಸದಸ್ಯರಾದ ಸಿದ್ದಯ್ಯ, ಬಿ. ಮಹದೇವಪ್ಪ, ಮಹೇಂದ್ರ, ಬೆಳಗನಾಯಕ, ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಸ್. ಮಹದೇವಪ್ಪ ಇದ್ದರು.
ಪದವಿ ಪ್ರದಾನ ಸಮಾರಂಭ
ಮೈಸೂರು: ಸ್ವಾಯತ್ತತೆ ಪಡೆದ ಯುವರಾಜ ಕಾಲೇಜಿನ ಪ್ರಥಮ ಪದವಿ ಪ್ರದಾನ ಸಮಾರಂಭ ಜ.11ರ ಬೆಳಗ್ಗೆ 11ಕ್ಕೆ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
2012-13ನೇ ಸಾಲಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಹೊರಬಂದ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ, ಬಿಬಿಎ, ಬಿಸಿಎ, ಎಂ.ಎಸ್ಸಿ ಮತ್ತು ಅಣುಜೀವ ವಿಜ್ಞಾನದ ಐದು ವರ್ಷಗಳ ಸಮಗ್ರ ಎಂಎಸ್ಸಿ ಪದವಿ ಪ್ರದಾನ ಮಾಡಲಾಗುವುದು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅಣುಜೀವ ವಿಜ್ಞಾನಿ ಪ್ರೊ.ಸರ್ ಟಾಮ್ ಬ್ಲೆಂಡರ್ ಪದವಿ ಪ್ರದಾನ ಮಾಡಿ, ಮುಖ್ಯ ಭಾಷಣ ಮಾಡುವರು. ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಲಿದ್ದು, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಎಸ್.ಎನ್. ಹೆಗ್‌ಡೆ, ಕಾಲೇಜಿನ ಪ್ರಾಂಶುಪಾಲ ಡಾ.ಎಚ್. ನಂಜೇಗೌಡ ಭಾಗವಹಿಸುವುದಾಗಿ ಹೇಳಿದರು.
ಬಸ್ ಚಾಲಕನಿಂದ ಹಲ್ಲೆ: ಆರೋಪ
ಸುತ್ತೂರು: ಕೆಎಸ್‌ಆರ್‌ಟಿಸಿ ಮೈಸೂರು ನಗರ ಸಾರಿಗೆ ವಿಭಾಗದ ಬಸ್ ಚಾಲಕನೊಬ್ಬ ರೈತನ ಮೇಲೆ ಹಲ್ಲೆ ನಡೆಸಲು ಯತ್ನಿಸುತ್ತಿದ್ದನ್ನು ಫೋಟೋ ತೆಗೆದ ಪತ್ರಿಕಾ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಬಿಳಗಲಿ- ಸುತ್ತೂರು- ಮೈಸೂರು ನಗರ ಬಸ್ ನಿಲ್ದಾಣ ಮಾರ್ಗವಾಗಿ ಸಂಚರಿಸುವ ಬಸ್ (ಕೆಎ-09, ಎಫ್ 4923) ಚಾಲಕನೇ ಹಲ್ಲೆ ನಡೆಸಿದ ಆರೋಪಿ. ಸುತ್ತೂರಿನಿಂದ ಮೈಸೂರಿಗೆ ಬರುತ್ತಿದ್ದಾಗ ಹೊಸಕೋಟೆ ಬಳಿ ಅಡ್ಡಾದಿಡ್ಡಿ ಬಸ್ ಚಾಲನೆ ಮಾಡಿದ ಚಾಲಕನು, ರಸ್ತೆಯಲ್ಲಿ ಹುರುಳಿ ಚೆಲ್ಲುತ್ತಿದ್ದ ರೈತನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ.
ಇದನ್ನು ಸೆರೆ ಹಿಡಿಯಲು ಪ್ರಯತ್ನಿಸಿದ ನನ್ನ ಮೇಲೂ ಹಲ್ಲೆ ನಡೆಸಿ, ನಿಂದಿಸಿ, ಯಾರಿಗೋ ಕರೆ ಮಾಡಿ ಯರಗನಹಳ್ಳಿ ಬಸ್ ತಂಗುದಾಣಕ್ಕೆ ಬರುವಂತೆ ಹೇಳುತ್ತಿದ್ದ. ಇದರಿಂದ ಆತಂಕಗೊಂಡ ನಾನು ಚಿಕ್ಕಹಳ್ಳಿಯಲ್ಲಿ ಇಳಿದುಕೊಂಡಿದ್ದಾಗಿ ಹಲ್ಲೆಗೊಳಗಾದ ಸುತ್ತೂರು ನಂಜುಂಡನಾಯಕ ತಿಳಿಸಿದ್ದಾರೆ. ಚಾಲಕ ವಿನಾಕಾರಣ ಹಲ್ಲೆ ಮಾಡಿದ್ದಾನೆ. ಏಕಾಏಕಿ ದಾಳಿ ಮಾಡಿದ್ದರಿಂದ ಮಾನಸಿಕವಾಗಿ ಜರ್ಜರಿತನಾಗಿದ್ದೇನೆ. ಈ ವಿಚಾರದಲ್ಲಿ ತನಗೆ ನ್ಯಾಯ ಅನ್ಯಾಯವಾಗಿದೆ. ನನಗೆ ನ್ಯಾಯ ದೊರಕಿಸಿಕೊಡುವಂತೆ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಸುತ್ತೂರು ನಂಜುಂಡನಾಯಕ ಮನವಿ ಸಲ್ಲಿಸಿದ್ದಾರೆ.
ಸಿಲ್ಕ್ ಇಂಡಿಯಾ ರೇಷ್ಮೆ ಸೀರೆ ಪ್ರದರ್ಶನ
ಮೈಸೂರು: ಸಂಕ್ರಾಂತಿರ ಹಬ್ಬದ ಪ್ರಯುಕ್ತ ಹಸ್ತಶಿಲ್ಪ ಸಂಸ್ಥೆಯು ಹೊಟೇಲ್ ರಿಗಾಲೀಸ್‌ನಲ್ಲಿ ಆಯೋಜಿಸಿರುವ ಸಿಲ್ಕ್ ಇಂಡಿಯಾ- 2014 ಹೆಸರಿನ ಭಾರತದ ಎಲ್ಲ ರಾಜ್ಯಗಳ ಪರಿಶುದ್ಧ ರೇಷ್ಮೆ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟವನ್ನು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಬುಧವಾರ ಉದ್ಘಾಟಿಸಿದರು. ಮೇಳವು ಜ.12ರವರೆಗೆ ಬೆಳಗ್ಗೆ 10.30ರಿಂದ ರಾತ್ರಿ 8.30ರವರೆಗೆ ಪ್ರದರ್ಶನ ಮಾರಾಟ ಇರುತ್ತದೆ. ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು ಸೇರಿದಂತೆ ಒಟ್ಟು 40 ಮಳಿಗೆಗಳು ಪ್ರದರ್ಶನದಲ್ಲಿ ತೆರೆಯಲಾಗಿದೆ. ಪ್ರಮುಖವಾಗಿ ಜಾರ್‌ಜೆಟ್ ಸೀರೆಗಳು, ಕ್ರೇಪ್ ಸಿಲ್ಕ್, ತಸ್ಸರ್ ರೇಷ್ಮೆ, ಕಂಚಿ ಸಿಲ್ಕ್, ಮದುವೆ ಸೀರೆಗಳು, ಡಿಸೈನರ್ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್‌ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಕಸೂತಿ ಮತ್ತು ಇಲ್‌ಕಲಲ್ಸೀರೆ, ಪ್ರಿಂಟೆಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರ್ ಡ್ರೆಸ್ ಮೆಟಿರಿಯಲ್, ಬಾಗಲ್‌ಪುರ್ ರೇಷ್ಮೆ, ಉಪ್ಪಡಾ ಮತ್ತು ಗೊಡ್ವಾಲ್ ಸೀರೆ, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡರ್ ಸೀರೆಗಳು, ಬುಟ್ಟಿ ಸೀರೆ, ಚಂದೇರಿ ಸಿಲ್ಕ್, ಮೈಸೂರು ರೇಷ್ಮೆ ಸೇರಿದಂತೆ ದೇಶದ ವಿವಿಧ ಭಾಗದ ರೇಷ್ಮೆ ಸೀರೆಗಳು ಮತ್ತು ರೇಷ್ಮೆಯಿಂದ ತಯಾರಿಸಿದ ಬಟ್ಟೆಗಳು ಲಭ್ಯವಿದೆ. ಹಸ್ತಶಿಲ್ಪಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ. ಅಭಿನಂದ್, ಸಂಯೋಜಕ ಬಿ.ಜೆ. ಶಿವಶಂಕರ್ ಇದ್ದರು.
ದೇವಸ್ಥಾನ ಅಭಿವೃದ್ಧಿಗೆ ಕ್ರಮ
ಕೆ.ಆರ್. ನಗರ: ತಾಲೂಕಿನ ಅರಕೆರೆಕೊಪ್ಪಲು ಗ್ರಾಮದ ಕಾಮೇಶ್ವರಸ್ವಾಮಿ ದೇವಸ್ಥಾನ ಅಭಿವೃದ್ಧಿ ಸಮಿತಿ ವತಿಯಿಂದ ಬಡ ಕುಟುಂಬದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಆರ್ಥಿಕ ಸಹಕಾರ ನೀಡುವುದರ ಜತೆಗೆ, ಶೀಘ್ರದಲ್ಲಿಯೇ ದೇವಸ್ಥಾನವನ್ನು ಆಧುನಿಕವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಮಿತಿ ಗೌರವಾಧ್ಯಕ್ಷ ಎಂ. ತಮ್ಮಣ್ಣ ಹೇಳಿದರು.
10ಕ್ಕೆ ಮರಳಿ ಬಾ ಮಣ್ಣಿಗೆ ಬಾನುಲಿ ಕಾರ್ಯಕ್ರಮ
ಮೈಸೂರು: ನಬಾರ್ಡ್, ಪ್ರಸಾರ ಭಾರತಿ, ಆಕಾಶವಾಣಿ, ಮೈಸೂರು ಮತ್ತು ಮೈಸೂರು ವಿವಿ ಸಂಯುಕ್ತಾಶ್ರಯದಲ್ಲಿ ಜ. 10ರ ಬೆಳಗ್ಗೆ 10.30ಕ್ಕೆ ಹುಣಸೂರು ರಸ್ತೆಯಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ಆರ್ಥಿಕ ಹಾಗೂ ಕೃಷಿ ಸಾಕ್ಷರತೆ ಕುರಿತು ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭ ನಡೆಯಲಿದೆ. ನಬಾರ್ಡ್‌ನ ಮಹಾಪ್ರಬಂಧಕ ಬಿಂದು ಮಾಧವ ವಡವಿ ಅವರು ಆರ್ಥಿಕ ಹಾಗೂ ಕೃಷಿ ಸಾಕ್ಷರತೆ ಕುರಿತು ಮತ್ತು ಸ್ಕೋಪ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಎಸ್. ಭಟ್ ಸಮಗ್ರ ಕೃಷಿ ಮತ್ತು ಯುವಜನತೆ ಕುರಿತು ವಿಷಯ ಮಂಡಿಸಲಿದ್ದಾರೆ. ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಜಿ. ರಾಜಲಕ್ಷ್ಮಿ ಶ್ರೀಧರ್ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸುವರು. ವಾರ್ತಾ ಇಲಾಖೆಯ ಉಪನಿರ್ದೇಶಕ ಎ.ಆರ್. ಪ್ರಕಾಶ್ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ವ್ಯವಸ್ಥಾಪಕ ಎ. ಶ್ರೀಹರಿ ಭಾಗವಹಿಸುವರು. ಜ.10ರ ಮಧ್ಯಾಹ್ನ 3ಕ್ಕೆ ಮರಳಿ ಬಾ ಮಣ್ಣಿಗೆ ಬಾನುಲಿ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೃಷಿ ಸಚಿವ ಕೃಷ್ಣೇ ಬೈರೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸುವರು. ನಬಾರ್ಡ್ ಮುಖ್ಯ ಮಹಾಪ್ರಬಂಧಕ ಜಿ.ಆರ್. ಚಿಂತಾಲಾ ಅಧ್ಯಕ್ಷತೆ ವಹಿಸುವರು.
ಅಂಗನವಾಡಿ
ನೌಕರರ ಪ್ರತಿಭಟನೆ
ಅಂಗನವಾಡಿಯನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಜಿಲ್ಲಾ ಸಮಿತಿಯಿಂದ ಜ.10ರ ಬೆಳಗ್ಗೆ 11ಕ್ಕೆ ಗನ್‌ಹೌಸ್ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ನೌಕರರ ಸಂಘದ ಅಧ್ಯಕ್ಷೆ ಕಾವೇರಮ್ಮ ತಿಳಿಸಿದ್ದಾರೆ.
ನಾಳೆ ಪ್ರತಿಭಟನೆ
ಕೇಂದ್ರ ಸರ್ಕಾರದ ಎಲ್‌ಪಿಜಿ ಗ್ಯಾಸ್ ದರ ಏರಿಕೆ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಜ.10ರ ಮಧ್ಯಾಹ್ನ 12.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ತೇಜಸ್‌ಗೌಡ ತಿಳಿಸಿದ್ದಾರೆ.