ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಸದಾಶಿವ ಆಯೋಗ ವರದಿ ಜಾರಿಗೊಳಿಸಿ'

Vishwanath S
Updated On : 9 Jan 2014, 1:19 am

ಮೈಸೂರು: ಶೋಷಿತ ಜನಾಂಗಗಳ ಉದ್ಧಾರಕ್ಕೆ ದಾರಿದೀಪವಾಗಲಿರುವ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ದಕ್ಷಿಣ ಭಾರತದ ಇತಿಹಾಸದಲ್ಲಿಯೇ 6 ವರ್ಷ 8 ತಿಂಗಳ ಕಾಲ ಪರಿಶಿಷ್ಟ ಜಾತಿಗಳ ಸ್ಥಿತಿಗತಿ ಕುರಿತು ನಿವೃತ್ತ ನ್ಯಾ. ಎ.ಜೆ. ಸದಾಶಿವ ಆಯೋಗ ಸಮೀಕ್ಷೆ ನಡೆಸಿ ಮಾದಿಗ ಜನಾಂಗಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಈಗ ಆ ವರದಿಯನ್ನು ಅನುಷ್ಠಾನಕ್ಕೆ ತಂದಲ್ಲಿ ಅತ್ಯಂತ ಕೆಳಸ್ಥಿತಿಯಲ್ಲಿ ಬದುಕುತ್ತಿರುವ ಮಾದಿಗ ಜನಾಂಗ ಅಭಿವೃದ್ಧಿ ಕಾಣಲಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಎಚ್. ಹನುಮಂತಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದಾಶಿವ ಆಯೋಗದಿಂದ ಸಮೀಕ್ಷೆ ನಡೆಸಲು ಈ ಹಿಂದಿನ ಬಿಜೆಪಿ ಸರ್ಕಾರ 14 ಕೋಟಿ ವ್ಯಯಿಸಿತು. ಆದರೆ, ಕೆಲವು ಸ್ಪೃಶ್ಯ ರಾಜಕಾರಣಿಗಳ ಪ್ರಭಾವಕ್ಕೆ ಮಣಿದು ವರದಿ ಜಾರಿಗೊಳಿಸಲು ಮೀನಮೇಷ ಎಣಿಸಿತು. ಈಗ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರದ ಮೇಲೆ ನಾವು ಬಹಳಷ್ಟು ನಿರೀಕ್ಷೆ ಇರಿಸಿದ್ದೆವು. ಈಗ ನಮಗೆ ನಿರಾಶವಾದ ಕಾಡುತ್ತಿದೆ. ಜತೆಗೆ ಲಂಬಾಣಿ, ಭೋವಿ ಸಮಾಜವನ್ನು ಎಸ್ಸಿಗೆ ಸೇರಿಸಲು ಮುಂದಾಗಿರುವ ಸರ್ಕಾರ ಮಡಿವಾಳ ಜಾತಿಗೆ ಇದೇ ರೀತಿಯ ಭರವಸೆ ನೀಡಿದೆ. ಈ ಮೂಲಕ ನಮ್ಮ ವರ್ಗಕ್ಕೆ ಪೆಟ್ಟು ನೀಡುತ್ತಿದೆ ಎಂದರು.
ಮುಂಬರುವ ಬಜೆಟ್ ಅಧಿವೇಶನದಲ್ಲಿ ಸದರಿ ವರದಿಯನ್ನು ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಜ.10ರ ಬೆಳಗ್ಗೆ 10ಕ್ಕೆ ಮಂಡ್ಯದ ಸೇವಾದಳದ ಹರ್ಡಿಕರ್ ಭವನದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ- ಮಾದಿಗರ ಹೋರಾಟದ ಮುಂದಿನ ಸವಾಲುಗಳ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.
ಹಿರಿಯ ಸಾಹಿತಿ ಪ್ರೊ.ಟಿ. ಯಲ್ಲಪ್ಪಭೂತಯ್ಯ ಉದ್ಘಾಟಿಸಲಿದ್ದು, ದಲಿತ ಚಿಂತಕರಾದ ಪ್ರೊ.ಎಚ್. ಗೋವಿಂದಯ್ಯ, ಪ್ರೊ.ಕೆ.ಬಿ. ಸಿದ್ದಯ್ಯ, ಡಾ. ಮೇಲಳ್ಳಿ ರೇವಣ್ಣ, ದೊರೆರಾಜ್ ವಿಚಾರ ಮಂಡಿಸುವರು ಎಂದರು. ಮುಖಂಡರಾದ ಎನ್.ಆರ್. ಚಂದ್ರಶೇಖರ್, ಕೆ. ಪ್ರಸನ್ನ ಚಕ್ರವರ್ತಿ, ಸಿದ್ದರಾಜು, ಬಸಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement