28ಕ್ಕೆ ಸುತ್ತೂರಿನಲ್ಲಿ ಸಾಮೂಹಿಕ ವಿವಾಹ
ಮೈಸೂರು: ನಂಜನಗೂಡು ತಾಲೂಕು ಸುತ್ತೂರು ಕ್ಷೇತ್ರದಲ್ಲಿ ಜ.27 ರಿಂದ ಫೆ.1 ರವರೆಗೆ ನಡೆಯುವ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಜ.28 ರಂದು ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿದೆ. ಈ ವಿವಾಹದಲ್ಲಿ ವಧುವಿಗೆ ಸೀರೆ, ಕುಪ್ಪಸ, ಕಾಲುಂಗುರ ಹಾಗೂ ಮಾಂಗಲ್ಯ, ವರನಿಗೆ ಪಂಚೆ, ವಲ್ಲಿ ಹಾಗೂ ಶರ್ಟ್ಗಳನ್ನು ನೀಡಲಾಗುತ್ತದೆ. ಜ. 20 ರೊಳಗಾಗಿ ಹೆಸರು ನೇಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗಾಗಿ ಆರ್. ಕುಮಾರಸ್ವಾಮಿ, ಮೊ. 94486 74702, ಸಿ. ಮಹದೇವಪ್ರಸಾದ್, ಮೊ. 94490 30588 ಮತ್ತು ಜಾತ್ರಾ ಮಹೋತ್ಸವ ಕಾರ್ಯಾಲಯ, ದೂ. 2548201 ಸಂಪರ್ಕಿಸಿ.
ನಾಳೆಯಿಂದ ಪ್ಯಾಕೇಜಿಂಗ್ ಯಂತ್ರಗಳ ಪ್ರದರ್ಶನ
ಮೈಸೂರು: ಸೆವೆನ್ನಾ ಟ್ರೇಡರ್ಸ್ ಆ್ಯಂಡ್ ಸರ್ವಿಸ್ ಕಂಪನಿಯು ಜ.11 ರಿಂದ 13 ರವರೆಗೆ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ಪ್ಯಾಕೇಜಿಂಗ್ ಯಂತ್ರಗಳ ವಸ್ತುಪ್ರದರ್ಶನ ಏರ್ಪಡಿಸಿದೆ. ಈ ವಸ್ತುಪ್ರದರ್ಶನವನ್ನು ಡಿಎಫ್ಆರ್ಎಲ್ ನಿರ್ದೇಶಕ ಡಾ.ಎಚ್.ವಿ. ಬಾತ್ರಾ ಉದ್ಘಾಟಿಸುವರು ಎಂದು ಸೆವೆನ್ನಾ ಕಂಪನಿಯ ಮಾರಾಟ ವ್ಯವಸ್ಥಾಪಕ ರಾಜೀವ್ ನಾಯರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕಂಟ್ಯೂನೂಯಸ್ ಸೀಲರ್, ಹ್ಯಾಂಡ್ ಮಷಿನ್, ಡ್ರೈ ಇಂಕ್ ಕೋಡರ್, ಶ್ರಿಂಕ್ ಟುನ್ನೆಲ್ಸ್, ಕಾರ್ಟನ್ ಸೀಲರ್, ಬಾಕ್ಸ್ ಸ್ಟ್ರಾಪ್ಪಿಂಗ್ ಮೆಷಿನ್, ರೈಸ್ ಪ್ಯಾಂಕಿಂಗ್ ಮೇಷಿನ್ ಸೇರಿದಂತೆ ಕಂಪನಿಯು ತಯಾರಿಸಿರುವ ವಿವಿಧ ಪ್ಯಾಕೇಜಿಂಗ್ ಯಂತ್ರಗಳನ್ನು ಪ್ರದರ್ಶಿಸಲಾಗುವುದು ಎಂದರು.ಈ ಪ್ರದರ್ಶನವು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ನಡೆಯಲಿದ್ದು, ಸ್ಥಳದಲ್ಲೇ ಬುಕಿಂಗ್ ಮಾಡುವವರಿಗೆ ಶೇ.5 ವಿಶೇಷ ರಿಯಾಯಿತಿ ನೀಡಲಾಗುವುದು. ಪ್ರದರ್ಶನಕ್ಕೆ ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಇಂದಿನಿಂದ ಮೈಸೂರು ಆಟೋ ಎಕ್ಸ್ಪೋ
ಮೈಸೂರು: ಜೆಸ್ ಇಂಡಿಯಾ ಇಂಕ್ ಸಂಸ್ಥೆಯು ಜ.10 ರಿಂದ 12 ರವರೆಗೆ ಕುವೆಂಪುನಗರದಲ್ಲಿರುವ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಸತತ 19ನೇ ಬಾರಿಗೆ ಮೈಸೂರು ಆಟೋ ಎಕ್ಸ್ಪೋ ಎಂಬ ಆಟೋಮೊಬೈಲ್ಸ್ ಮತ್ತು ಪರಿಕರಗಳ ಪ್ರದರ್ಶನವನ್ನು ಆಯೋಜಿಸಿದೆ. ಈ ಪ್ರದರ್ಶನವನ್ನು ಜ.10ರ ಬೆಳಗ್ಗೆ 10ಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಉದ್ಘಾಟಿಸುವರು ಎಂದು ಜೆಸ್ ಇಂಡಿಯಾ ಇಂಕ್ನ ಪಾಲುದಾರ ಶ್ರೀಕಾಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವೋಲ್ವೋ, ಮೋಟೋ ಗಿಸಿ, ಬಿಎಂಡಬ್ಲ್ಯೂ, ಹಾಯ್ಯಂಗ್, ಕೆಟಿಎಂ, ಮಾರುತಿ, ಟಾಟಾ, ಟೊಯೋಟಾ, ರೆನಾಲ್ಟ್, ನಿಸಾನ್, ಟಿವಿಎಸ್, ಹೀರೋ ಮೋಟಾರ್ಸ್, ಸುಜುಕಿ ಹೋಂಡಾ, ಬಜಾಜ್ ಮೊದಲಾದ ಕಂಪನಿಗಳ ದ್ವಿಚಕ್ರ, ನಾಲ್ಕು ಚಕ್ರವಾಹನಗಳ ಪ್ರದರ್ಶನವಿರುತ್ತದೆ ಎಂದರು. ಟ್ಯುನೋ ಮೋಟಾರ್ಸ್, ಬಿಎಂಡಬ್ಲ್ಯೂ, ಕೆಟಿಎಂ ಮತ್ತು ಹ್ಯೋಸಂಗ್ ಕಂಪನಿಗಳ ಬೈಕ್ಗಳು ನೋಡುಗರನ್ನು ಆಕರ್ಷಿಸಲಿವೆ.
ಶಾಸಕರ ಪಾದಯಾತ್ರೆ ಮುಂದಕ್ಕೆ
ಮೈಸೂರು: ಜಿಪಂನಲ್ಲಿ ಆಯೋಜಿಸಿದ್ದ ಮಾಹಿತಿ ಹಕ್ಕು ತರಬೇತಿ ಕಾರ್ಯಕ್ರಮದಲ್ಲಿ ಶಾಸಕ ವಾಸು ಅವರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಜ. 9 ರಂದು ನಾಗರಿಕ ಸಮಸ್ಯೆಗಳನ್ನು ಆಲಿಸಲು ಏರ್ಪಡಿಸಿದ್ದ 26 ನೇ ವಾರ್ಡ್ನ ಪಾದಯಾತ್ರೆಯನ್ನು ಮುಂದೂಡಲಾಯಿತು.
ಕಥಾಕೀರ್ತನ ಕಾರ್ಯಕ್ರಮ
ಪ್ರಸಾರ ಭಾರತಿ, ಆಕಾಶವಾಣಿ, ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಸಹಕಾರದಲ್ಲಿ ಜ.11ರ ಬೆಳಗ್ಗೆ 10ಕ್ಕೆ ಬಿ.ಎನ್. ಬಹದ್ದೂರ್ ಸಂಸ್ಥೆಯ ಸಭಾಂಗಣದಲ್ಲಿ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಕಥಾಕೀರ್ತನ ವಿಶೇಷ ಕಾರ್ಯಕ್ರಮ ನಡೆಯಲಿದೆ. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಉದ್ಘಾಟಿಸುವರು.
ಕಾಲೇಜು ವಾರ್ಷಿಕೋತ್ಸವ
ವಿದ್ಯಾವರ್ಧಕ ಸಂಘದ ಗೋಕುಲಂ 3ನೇ ಹಂತದಲ್ಲಿರುವ ಕೆ. ಪುಟ್ಟಸ್ವಾಮಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ಜ.11ರ, ಬೆಳಗ್ಗೆ 10ಕ್ಕೆ ಕಾಲೇಜು ಆವರಣದ ಶ್ರೀ ಸಾಹುಕಾರ್ ಚನ್ನಯ್ಯ ಸಭಾಂಗಣದಲ್ಲಿ ನಡೆಯಲಿದೆ. ಸಂಘದ ಗೌರವಾಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸುವರು. ರಮೇಶ್ ಬಾಬು ಬಂಡಿಸಿದ್ದೇಗೌಡ, ಮರಿತಿಬ್ಬೇಗೌಡ, ಪಿ. ವಿಶ್ವನಾಥ್ ಮುಖ್ಯಅತಿಥಿಗಳಾಗಿ ಭಾಗವಹಿಸುವರು.
ಉಮಾಮಹೇಶ್ವರ ಪೂಜಾ ನಾಳೆ
ಕೆ.ಆರ್. ಮೊಹಲ್ಲಾದ ಸಮಸೇವೇ ಟ್ರಸ್ಟ್ ವತಿಯಿಂದ ಜ.11ರ ಸಂಜೆ 6ಕ್ಕೆ ಖಿಲ್ಲೆ ಮೊಹಲ್ಲಾದ ಶ್ರೀ ಶಂಕರಮಠದಲ್ಲಿ ಶ್ರೀ ಉಮಾಮಹೇಶ್ವರ ಪೂಜಾ ಹಾಗೂ ಜ.12ರಂದು ಬೆಳಗ್ಗೆ 7ಕ್ಕೆ ಶ್ರೀ ಮೃತ್ಯುಂಜಯರ್ ಹವನ ನೆರವೇರಲಿದೆ.
ಕಥೆ ಕೇಳೋಣ ಬನ್ನಿ ನಾಳೆ
ಕುವೆಂಪುನಗರದ ಚಿತ್ರಭಾನು ರಸ್ತೆಯ ಕಲಾಸುರುಚಿಯಲ್ಲಿ ಜ.11 ರಂದು ಸಂಜೆ 4.30ಕ್ಕೆ ಡಾ.ಎಚ್.ಕೆ. ರಾಮನಾಥ್ ಅವರು ಮಕ್ಕಳಿಗೆ ಕಥೆ ಹೇಳುವರು.