ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಕ್ರಮ ಮರಳು: ಅಧಿಕಾರಿಗಳ ಕುಮ್ಮಕ್ಕು

Vishwanath S
Updated On : 10 Jan 2014, 12:55 pm

ಟಿ. ನರಸೀಪುರ: ಅಕ್ರಮ ಮರಳು ಸಾಗಾಣಿಕೆಗೆ ಪರೋಕ್ಷವಾಗಿ ಕುಮ್ಮಕ್ಕು ನೀಡುವ ಅಧಿಕಾರಿಗಳು ಲಾರಿ ಮಾಲೀಕರು ಮತ್ತು ಚಾಲಕರ ಮೇಲೆ ಮರಳು ಕಳ್ಳತನದ ಆರೋಪ ಮಾಡುತ್ತಿದ್ದಾರೆ ಎಂದು ತಾಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಪುಟ್ಟಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಅತಿಥಿಗೃಹದ ಆವರಣದಲ್ಲಿ ಗುರುವಾರ ನಡೆದ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳ ಪ್ರಮುಖ ಇಲಾಖೆಗಳ ಅಧಿಕಾರಿಗಳೇ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯಲ್ಲಿ ಶಾಮೀಲಾಗಿ ಲಾರಿಗಳಿಗೆ ಅಕ್ರಮ ಮರಳು ಸಾಗಣೆ ಮಾಡುವ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ. ಅಕ್ರಮ ಮರಳು ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಕಳ್ಳತನ ಹಣೆಪಟ್ಟಿ ಕಟ್ಟಿ ದಂಡ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಕಳೆದ 2013ರ ಡಿ.31ರಿಂದ 2014ರ ಜ.2ರವರೆಗೆ 102 ಪರ್ಮಿಟ್ ಟ್ರಿಪ್ ಚೀಟಿಗಳನ್ನು ವಿತರಿಸಲಾಗಿದೆ. ಅದರಲ್ಲಿ 68ಕ್ಕೂ ಹೆಚ್ಚು ಲೋಡ್ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗಿದೆ. ಒಂದೇ ಪರ್ಮಿಟ್ ಟ್ರಿಪ್ ಚೀಟಿಯನ್ನು ದುರ್ಬಳಕೆ ಮಾಡಿಕೊಂಡು ಎರಡು, ಮೂರ್ನಾಲ್ಕು, ಐದಾರು ಹಾಗೂ ಏಳು ಭಾರಿ ಒಂದೇ ಲಾರಿಯಲ್ಲಿ ಮರಳು ಸಾಗಣೆ ಮಾಡಲಾಗಿದೆ. ಇದಕ್ಕೆ ಯಾವ ಇಲಾಖೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರಶ್ನಿಸಿದರು.
ಅಧಿಕಾರಿಗಳು ಶಾಮೀಲು: ತಾಲೂಕಿನಲ್ಲಿ 16 ಮರಳು ತನಿಖಾ ಠಾಣೆಗಳಿವೆ. ಪರ್ಮಿಟ್ ಚೀಟಿಯ ದುರ್ಬಳಕೆ ಮಾಡಿಕೊಂಡು ಲಾರಿಗಳಲ್ಲಿ ಹಲವು ಭಾರಿ ಮರಳು ಸಾಗಣೆ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳ ಪರೋಕ್ಷ ಸಹಕಾರದಿಂದಷ್ಟೇ ಮರಳು ತನಿಖೆ ಠಾಣೆಯಿಂದ ಮುಂದೆ ತೆರಳಬಹುದು. ನಗರದಲ್ಲಿ ಅಕ್ರಮ ಮರಳು ತುಂಬಿ ಸಿಕ್ಕಿಬೀಳುವ ಲಾರಿಗಳಿಂದ ಅಧಿಕ ಹಣ ವಸೂಲಿ ಮಾಡಲಾಗುತ್ತದೆ. ಅಧಿಕಾರಿಗಳ ಇಂತಹ ಕುತಂತ್ರದಿಂದ ಲಾರಿ ಮಾಲೀಕ ಹಾಗೂ ಚಾಲಕರು ಬಲಿಪಶುವಾಗುತ್ತಿದ್ದಾರೆ ಎಂದು ಅವರು ದೂರಿದರು.
ಮೈಸೂರಿಗೆ ನಿತ್ಯವೂ ಒಂದು ಸಾವಿರಕ್ಕೂ ಹೆಚ್ಚು ಲೋಡ್ ಮರಳಿಗೆ ಬೇಡಿಕೆ ಇರುವುದರಿಂದ ಬೆಂಗಳೂರಿಗೆ ಮರಳು ಸಾಗಣೆ ಮಾಡಲು ಅವಕಾಶ ನೀಡಿದರೆ ಲಾರಿ ಮಾಲೀಕರ ಸಂಘದಿಂದ ಹೋರಾಟ ಪ್ರಾರಂಭಿಸಬೇಕಾಗುತ್ತದೆ ಎಂದು ಪುಟ್ಟಸ್ವಾಮಿ ಎಚ್ಚರಿಸಿದರು.
ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ನಂಜಪ್ಪ, ಏಜಾಜ್, ಷಮಿ, ಕೃಷ್ಣೇಗೌಡ, ಮಲ್ಲೇಶ್, ಕಿರಣ, ಸಲೀಂ, ಮೆಹಬೂಬ್, ಫೈರೋಜ್, ಸಾಮಿರುಲ್ಲ, ಮಾದಪ್ಪ, ಸಿದ್ದರಾಜು, ನಟರಾಜು, ಆನಂದ್, ಜಾಬಿ, ಮಂಜುನಾಥ್, ಇಮ್ರಾನ್, ಅಕ್ರಂ, ಅಹಮದ್‌ಖಾನ್, ಅಯೂಬ್ ಆಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement