ಕ್ರಿಕೆಟ್ ಪಂದ್ಯಾವಳಿಗೆ ಜಿಪಂ ಸದಸ್ಯೆ ಚಾಲನೆ
ಹುಣಸೂರು: ಕ್ರೀಡೆಯಿಂದ ದೇಶ ಹಾಗೂ ರಾಜ್ಯಗಳ ನಡುವೆ ಬಾಂಧವ್ಯ ಬೆಳೆಯುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂದು ಜಿಪಂ ಸದಸ್ಯೆ ಡಾ.ಪುಷ್ಪಾವತಿ ಅಮರ್ನಾಥ್ ಹೇಳಿದರು.
ಪಟ್ಟಣದ ಪುರಸಭಾ ಮೈದಾನದಲ್ಲಿ ಕುಟ್ಟಿ ಜಿಮ್ನ 3ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ರಾಜ್ಯ ಮಟ್ಟದ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸ್ನೇಹ ಜೀವಿ ಕಪ್ಗಾಗಿ ನಡೆಯುವ ಪಂದ್ಯಾವಳಿಗೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಯಾವುದೆ ಕ್ರೀಡೆ ಮೋಜಿಗಾಗಿಯಲ್ಲ. ಕ್ರೀಡೆಯನ್ನು ಪ್ರತಿಯೊಬ್ಬರು ಅಭ್ಯಾಸ ಮಾಡುವುದರಿಂದ ಆರೋಗ್ಯ ಮತ್ತು ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ 32 ತಂಡಗಳು ಭಾಗವಹಿಸುತ್ತಿವೆ. ಆರಂಭಿಕ ಪಂದ್ಯದಲ್ಲಿ ಮೈಸೂರು ತಂಡವನ್ನು ಹುಣಸೂರಿನ ನ್ಯೂ ಫ್ರೆಂಡ್ಸ್ ತಂಡ ಸೋಲಿಸಿತು. ವಿಜೇತರಿಗೆ ಬಹುಮಾನ ಹಾಗೂ ಸ್ನೇಹಜೀವಿ ಕಪ್ ನೀಡಲಾಗುವುದೆಂದು ಕುಟ್ಟಿ ಜಿಮ್ನ ಕುಟ್ಟಿ ಹೇಳಿದರು. ಸ್ನೇಹಜೀವಿ ಸಂಸ್ಥೆಯ ಪ್ರಕಾಶ್, ಪ್ರಮೋದ್ ಇದ್ದರು.
ಸವಿತಾ ಸಂಘಕ್ಯಾಲೆಂಡರ್ ಬಿಡುಗಡೆ
ನಂಜನಗೂಡು: ಸವಿತಾ ಕೇಶಾಲಂಕಾರಿಗಳ ಕ್ಷೇಮಾಭಿವೃದ್ಧಿ ಸಂಘವು ಹೊರತಂದಿರುವ 2004ರ ಕ್ಯಾಲೆಂಡರ್ ಅನ್ನು ಸಮಾಜ ಸೇವಕ ಯು.ಎನ್. ಪದ್ಮನಾಭರಾವ್ ಬಿಡುಗಡೆ ಮಾಡಿದರು. ನಂತರ ಅವರು ಮಾತನಾಡಿ, ಸಹಕಾರಿ ಬ್ಯಾಂಕ್ ಅನ್ನು ಆರಂಭಿಸಿ ಸಾಲಕ್ಕೆ ಕೈಯೊಡ್ಡದೆ ಉಳಿತಾಯ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಸಂಘದ ಕಾನೂನು ಸಲಹೆಗಾರ ಕೆ.ಎಸ್. ಮೃತ್ಯುಂಜಯ ಮಾತನಾಡಿ, ಸಮುದಾಯದ ಕಾರ್ಯಕ್ರಮಗಳು ಹಾಗೂ ಶುಭ ಸಮಾರಂಭಗಳನ್ನು ನಡೆಸಲು ಸ್ವಂತ ಸಮುದಾಯ ಭವನ ನಿರ್ಮಿಸಿಕೊಳ್ಳಲು ಸಚಿವ ವಿ. ಶ್ರೀನಿವಾಸಪ್ರಸಾದ್ ಅವರಿಂದ ನೆರವು ಕೊಡಿಸುವಂತೆ ಮನವಿ ಮಾಡಿದರು.ಸಂಘದ ಅಧ್ಯಕ್ಷ ನಾಗೇಂದ್ರ, ಗೌರವಾಧ್ಯಕ್ಷ ಮಲ್ಲಿಕಾರ್ಜುನ್, ಜಗದೀಶ್, ಪುಟ್ಟುರಾಜು, ಶಿವಣ್ಣ, ಎಸ್. ಕೆಂಪರಾಜು ಇದ್ದರು.
ಇಂದಿನಿಂದ ಕಾರ್ಯಾಗಾರ
ಪಿರಿಯಾಪಟ್ಟಣ: ಪಟ್ಟಣದ ಯಜಮಾನ್ ಫೌಂಡೇಶನ್ ವತಿಯಿಂದ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರವನ್ನು ಜ.10ರ ಸಂಜೆ 4ಕ್ಕೆ ಏರ್ಪಡಿಸಿದೆ ಎಂದು ಫೌಂಡೇಶನ್ ವ್ಯವಸ್ಥಾಪಕ ಪಿ.ಎನ್. ನಾಗಪ್ರಶಾಂತ್ ಹೇಳಿದ್ದಾರೆ. ಅಂಚೆ ಇಲಾಖೆಯಲ್ಲಿ ಪೋಸ್ಟ್ ಮೆನ್ ಮತ್ತು ಮೇಲ್ ಗಾರ್ಡ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮಾರ್ಗದರ್ಶನ ನೀಡುವ ಸಲುವಾಗಿ ಉಚಿತ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 9916090800 ಸಂಪರ್ಕಿಸಬಹುದು.
ನಾಳೆ ಆರೋಗ್ಯ ತಪಾಸಣೆ ಶಿಬಿರ
ಕೆ.ಆರ್. ನಗರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜ.11ರ ಬೆಳಗ್ಗೆ 10ಕ್ಕೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಅಡಿಯಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ ತೊಂದರೆ, ಸುಟ್ಟಗಾಯ, ನವಜಾತ ಶಿಶುವಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಜ್ಞ ವೈದ್ಯರಿಂದ ಪರೀಕ್ಷಿಸಿ ಅಗತ್ಯ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಬಿಪಿಎಲ್ ಕಾರ್ಡ್ನೊಂದಿಗೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವ್ಯವಸ್ಥಾಪಕಿ ಇಂದಿರಾ ತಿಳಿಸಿದ್ದಾರೆ.
ಪಡಿತರ ಲೋಪ: ಅಧಿಕಾರಿಗಳಿಗೆ ತರಾಟೆ
ಮೈಸೂರು: ಮೈಸೂರು ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಂಗನವಾಡಿಗಳಿಗೆ ಹುಳು ಮಿಶ್ರಿತ ಗೋಧಿ ಪೂರೈಕೆ, ಸಭೆಗೆ ಅಧಿಕಾರಿಗಳ ಗೈರು, ಪಡಿತರ ವಿತರಣೆಯಲ್ಲಿ ಬಯೋವುಟ್ರಿಕ್ ಯಂತ್ರಗಳನ್ನು ಬಳಸದಿರುವುದು ತಾಪಂ ಅಧ್ಯಕ್ಷೆ ನಿರ್ಮಲಾ ಹೊನ್ನಪ್ಪ ಹಾಗೂ ಉಪಾಧ್ಯಕ್ಷ ಸಿದ್ದಯ್ಯ ಅವರ ಕೋಪಕ್ಕೆ ಕಾರಣವಾಯಿತು.
ಬಯೋವುಟ್ರಿಕ್ ಯಂತ್ರ ಬಳಸದಿರುವ ಬಗ್ಗೆ ಉಪಾಧ್ಯಕ್ಷ ಸಿದ್ದಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಆಗುತ್ತಿರುವ ಗೋಧಿಯಲ್ಲಿ ಹುಳುವಿದೆ. ಕೂಡಲೇ ಈ ಬಗ್ಗೆ ಗಮನ ಹರಿಸಿ ಗುಣಮಟ್ಟದ ಆಹಾರ ಧಾನ್ಯ ಪೂರೈಸಬೇಕು ಎಂದು ಅಧ್ಯಕ್ಷೆ ನಿರ್ಮಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ತಾಕೀತು ಮಾಡಿದರು.
ಸಹಾಯಕರ ಹುದ್ದೆ ಭರ್ತಿಗೆ ಮನವಿ
ಮೈಸೂರು: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಪುರುಷ ಆರೋಗ್ಯ ಸಹಾಯಕ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ರಾಜ್ಯದ ಎಲ್ಲ ಜಿಲ್ಲೆಗಳ ಆರೋಗ್ಯ ಸಹಾಯಕರು, ತರಬೇತಿ ಪಡೆದ ನಿರುದ್ಯೋಗಿಗಳು ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದರು. ಈಗಾಗಲೆ ಆರ್ಥಿಕ ಇಲಾಖೆಯಿಂದ ಕಿರಿಯ ಪುರುಷ ಆರೋಗ್ಯ ಸಹಾಯಕರ ನೇಮಕಾತಿಗೆ ಅನುಮೋದನೆ ಸಿಕ್ಕಿರುವುದಿಲ್ಲ. ಆದ್ದರಿಂದ ಕೂಡಲೇ 2,642 ಹುದ್ದೆಗಳಿಗೆ ಭರ್ತಿ ಮಾಡಿಕೊಂಡು ಜೀವನ ನಡೆಸಲು ಸಹಾಯ ಮಾಡುವಂತೆ ಆರೋಗ್ಯ ಸಚಿವರು ಹಾಗೂ ಕೆಪಿಪಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಕೋರಿದ್ದಾರೆ. ಇಲ್ಲವಾದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆರೋಗ್ಯ ಸಹಾಯಕರ ತರಬೇತಿ ಪಡೆದ ಯುವಕರು ಒಗ್ಗೂಡಿ ಮುಷ್ಕರ ನಡೆಸುವುದಾಗಿ ತಿಳಿಸಿದ್ದಾರೆ. ಮೈಸೂರಿನ ಲೋಕೇಶ್, ಗದಗದ ಮಹಾಂತೇಶ್, ಸಜ್ಜರ್, ದಾವಣಗೆರೆಯ ರಮೇಶ್, ಚಿತ್ರದುರ್ಗದ ಸಿ. ಗೋವಿಂದಪ್ಪ, ಅಶೋಕ್ ಇದ್ದರು. ಆರೋಗ್ಯ ಸಹಾಯಕರು, ತರಬೇತಿ ಪಡೆದವರು ಹೆಚ್ಚಿನ ಮಾಹಿತಿಗಾಗಿ, ಮೊ. 99804 43110, 81478 10206 ಸಂಪರ್ಕಿಸಬಹುದು.
ಮಸಿ ಎರಚಿದ ಪ್ರಕರಣ: ನಾಲ್ವರ ಬಂಧನ
ಮೈಸೂರು: ಸಿಎಫ್ಟಿಆರ್ಐ ನಿರ್ದೇಶಕ ಡಾ.ರಾಮ್ ರಾಜಶೇಖರನ್ ಅವರ ಮೇಲೆ ಮಸಿ ಎರಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ನಗರಾಧ್ಯಕ್ಷ ಕಿರಣ್ಕುಮಾರ್ಗೌಡ, ಮುಖಂಡರಾದ ಆನಂದ್, ನಂದೀಶ್ ಮತ್ತು ಸುನಿಲ್ಕುಮಾರ್ ಬಂಧಿತರು. ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯುತ್ತಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಹೋಗಿದ್ದ ಡಾ.ರಾಮ್ ರಾಜಶೇಖರನ್ ಅವರ ಕಾರು ಅಡ್ಡಗಟ್ಟಿದ ಕರವೇ ಕಾರ್ಯಕರ್ತರು, ಅವರತ್ತ ಕಪ್ಪು ಮಸಿ ಎರಚಿ ಘೋಷಣೆ ಕೂಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಯಲಕ್ಷ್ಮಿಪುರಂ ಠಾಣೆ ಇನ್ಸ್ಪೆಕ್ಟರ್ ಆರ್. ಸುಶೀಲ ಮತ್ತು ಸಿಬ್ಬಂದಿ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ ಎಂದು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎ.ಎನ್. ರಾಜಣ್ಣ ಕನ್ನಡಪ್ರಭ ಕ್ಕೆ ತಿಳಿಸಿದರು.