ನಗರದ ವಿವಿಧೆಡೆ ನಾಳೆ ವೈಕುಂಠ ಏಕಾದಶಿ
ಮೈಸೂರು: ನಗರದ ವಿವಿಧ ದೇವಸ್ಥಾನಗಳಲ್ಲಿ ಜ.11 ರಂದು ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ ನಡೆಯಲಿದೆ.
ಮೇಟಗಳ್ಳಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ನಲ್ಲಿ ಬೆಳಗ್ಗೆ 6.30ಕ್ಕೆ ಸ್ವಾಮಿ ಮತ್ತು ಅಮ್ಮನವರಿಗೆ ವಿಶೇಷ ಅಲಂಕಾರ ಹಾಗೂ ಭಜನೆ ಏರ್ಪಡಿಸಿದೆ. ಶ್ರೀ ಸ್ವಾಮಿಯ ವೈಕುಂಠ ದ್ವಾರವನ್ನು ಸ್ಥಾಪಿಸಿ, ಮಹಾಮಂಗಳಾರತಿ ನಡೆಯುತ್ತದೆ. ಬೆಳಗ್ಗೆ 6.30 ರಿಂದ 9 ರವರೆಗೆ ವಿವಿಧ ಪೂಜೆ ನಡೆದ ಬಳಿಕ ಪ್ರಸಾದ ವಿನಿಯೋಗ ನಡೆಯುವುದು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ವಿಶೇಷ ಆಹ್ವಾನಿತರಾಗಿ ಆಗಮಿಸುವರು.
ನರಸಿಂಹರಾಜ ಮೊಹಲ್ಲಾ ರಜಪೂತ್ ಬ್ಲಾಕ್ನ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ ಮತ್ತು ವೈಕುಂಠದ್ವಾರ ಪೂಜೆಯು ಬೆಳಗ್ಗೆ 6ಕ್ಕೆ ನಡೆಯುವುದು. ಬಳಿಕ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಶ್ರೀರಾಂಪುರದ ವಿವೇಕಾನಂದನಗರ ಬ್ರಾಹ್ಮಣ ಮಹಾಸಭಾದ ಶ್ರೀ ಲಕ್ಷ್ಮೀನೃಸಿಂಹಸ್ವಾಮಿ ದೇವಸ್ಥಾನದ ಶಂಕರ ಪ್ರಾರ್ಥನಾ ಮಂದಿರದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ ಮತ್ತು ಅಲಂಕಾರದೊಂದಿಗೆ ಶ್ರೀ ಲಕ್ಷ್ಮೀನೃಸಿಂಹಸ್ವಾಮಿಯನ್ನು ಸ್ವರ್ಗದ್ವಾರದಲ್ಲಿ ಪ್ರತಿಷ್ಠಾಪಿಸಿ, ಭಕ್ತರಿಗೆ ದರ್ಶನ ಮತ್ತು ಸೇವೆಗೆ ಅವಕಾಶ ಕಲ್ಪಿಸಲಾಗುವುದು. ಅಂದು ಬೆಳಗ್ಗೆ 6.30 ರಿಂದ ರಾತ್ರಿ 8 ರವರೆಗೆ ದರ್ಶನ ಇರುತ್ತದೆ. ಅಂದು ದಿನವಿಡಿ ಭಜನೆ, ನಾಮಸಂಕೀರ್ತನೆ, ಸಂಜೆ ಶ್ರೀನಿವಾಸ ಕಲ್ಯಾಣ ಗೀತರೂಪಕ ಹಾಗೂ ನೃತ್ಯ ಕಾರ್ಯಕ್ರಮ ಇರುತ್ತದೆ.
ನ್ಯೂ ಸಯ್ಯಾಜಿರಾವ್ ರಸ್ತೆಯ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಮತ್ತು ಕೂಡಾರೈವೆಲ್ಲುಂ ಪ್ರಯುಕ್ತ ಬೆಳಗ್ಗೆ 4.30ಕ್ಕೆ ಸುಪ್ರಭಾತ ಸೇವೆ, ಪುಷ್ಪಾಲಂಕಾರ ಮಹಾರಾಧನೆ, ತಿರುಪ್ಪಾವೈ ಸೇವೆ ಮತ್ತು 5.30ಕ್ಕೆ ರಾಜಬೀದಿಯಲ್ಲಿನ ಶ್ರೀ ಸ್ವಾಮಿ ಉತ್ಸವ, ವೈಕುಂಠದ್ವಾರದಲ್ಲಿ ಮಂತ್ರ ಪುಷ್ಪ, ಮಹಾನಿವೇದನೆ ಮತ್ತು 7.30ಕ್ಕೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಭೂನೀಳಾ ಸಮೇತ ಶ್ರೀ ಸತ್ಯನಾರಾಯಣ ಸ್ವಾಮಿಗೆ ವಜ್ರಕವಚ ಅಲಂಕಾರ ಏರ್ಪಡಿಸಲಾಗಿದೆ. ಜ.12ಕ್ಕೆ ಮುಕ್ಕೋಟಿ ದ್ವಾದಶ ಪ್ರಯುಕ್ತ ಬೆಳಗ್ಗೆ 5.30ಕ್ಕೆ ಸಮಾರೋಪ ಉತ್ಸವ ಏರ್ಪಡಿಸಲಾಗಿದೆ. ಆದ್ದರಿಂದ ಭಕ್ತರು ಸಕಾಲಕ್ಕೆ ಆಗಮಿಸಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿ ಕೋರಿದೆ.
ಕೃಷ್ಣಮೂರ್ತಿಪುರಂ ಶ್ರೀ ರಾಮಮಂದಿರ ಮತ್ತು ಹೆಬ್ಬಾರ್ ಶ್ರೀವೈಷ್ಣವ ಸಭಾವು ಜ.11ರ ಬೆಳಗ್ಗೆ 7 ರಿಂದ ರಾತ್ರಿ 10 ರವರೆಗೆ ವೈಕುಂಠ ಏಕಾದಶಿಯ ಸ್ವರ್ಗದ ಬಾಗಿಲಿನ ಸೇವೆ ನಡೆಯಲಿದೆ.
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದಲ್ಲಿ ಜ.11ಕ್ಕೆ ಉತ್ತರ ದ್ವಾರ ದರ್ಶನ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 5.30 ರಿಂದ ಮಧ್ಯಾಹ್ನ 2 ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 10 ರವರೆಗೆ ದೇವರ ದರ್ಶನ ಪಡೆಯಬಹುದು.