ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆಯಿಂದ ರಾಜ್ಯಾದ್ಯಂತ ಲಾರಿ ಮುಷ್ಕರ

Vishwanath S
Updated On : 10 Jan 2014, 12:53 pm

ಕ.ಪ್ರ.ವಾರ್ತೆ ,  ಮೈಸೂರು ,  ಜ. 9
ಹೊಸ ಮರಳು ನೀತಿಯಲ್ಲಿ ಕೆಲವು ಬದಲಾವಣೆಗೆ ಹಾಗೂ ತಮ್ಮ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಜ.11ರ ಮಧ್ಯರಾತ್ರಿಯಿಂದ ರಾಜ್ಯಾದ್ಯಂತ ಮರಳು ಲಾರಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ತಿಳಿಸಿದರು.
ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘವು ಗುರುವಾರ ನಂಜನಗೂಡು ರಸ್ತೆಯಲ್ಲಿರುವ ಲಾರಿ ನಿಲ್ದಾಣದಲ್ಲಿ ಆಯೋಜಿಸಿದ್ದ ಸ್ಥಳೀಯ ಲಾರಿ ಮಾಲೀಕರ ಕುಂದು ಕೊರತೆ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಲಾರಿ ಮಾಲೀಕರ ಮುಷ್ಕರಕ್ಕೆ ಸರಕು ಸಾಗಣೆ ಲಾರಿಗಳು, ಕ್ಯಾಬ್‌ಗಳ ಮಾಲೀಕರು ಸಹ ಬೆಂಬಲ ನೀಡಿದ್ದಾರೆ. ಆ ದಿನ ರಾಜ್ಯದಿಂದ ಹೊರರಾಜ್ಯಕ್ಕೆ ಯಾವುದೇ ಲಾರಿಗಳು ಹೋಗುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಲಾರಿ ಮಾಲೀಕರ ಸಭೆ ಕರೆದು, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಷ್ಕರ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು.
ಕಿವಿಗೊಡದ ಸರ್ಕಾರ: ಹೊಸ ಮರಳು ನೀತಿಗೆ ನಮ್ಮ ವಿರೋಧ ಇಲ್ಲ. ಆದರೆ, ಲಾರಿ ಮಾಲೀಕರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ತಿಳಿಸಲಾಗಿದೆ. ಇದರಿಂದ ಮರಳನ್ನೇ ನಂಬಿ ಬದುಕುತ್ತಿರುವ ಲಾರಿ ಮಾಲೀಕರು ಜೈಲಿಗೆ ಹೋದರೆ, ಅವರ ಕುಟುಂಬದ ಸ್ಥಿತಿ ಚಿಂತಾಜನಕವಾಗುತ್ತದೆ. ಹೀಗಾಗಿ ಹೊಸ ಮರಳು ನೀತಿಯಲ್ಲಿ ಕೆಲವು ಮಾರ್ಪಾಡು ಮಾಡುವಂತೆ ಒತ್ತಾಯಿಸಿದ್ದರೂ ರಾಜ್ಯ ಸರ್ಕಾರ ಇದಕ್ಕೆ ಕಿವಿಗೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರಕ್ಕೆ ಪ್ರತಿನಿತ್ಯ 1 ಕೋಟಿ ಆದಾಯ ಮರಳು ವ್ಯಾಪಾರದಿಂದ ಬರುತ್ತಿದೆ. ಪ್ರತಿದಿನ ರಾಜ್ಯಕ್ಕೆ 18 ಸಾವಿರ ಲೋಡ್ ಮರಳು ಅಗತ್ಯವಿದೆ. ನಿಕ್ಷೇಪದಿಂದ ಮರಳನ್ನು ತೆಗೆದು ಗ್ರಾಹಕರಿಗೆ ತಲುಪಿಸುವವರೆಗೂ ಲಾರಿ ಮಾಲೀಕರು ಮತ್ತು ಚಾಲಕರನ್ನು ವಿವಿಧ ಇಲಾಖೆಯವರು ಸುಲಿಗೆ ಮಾಡುತ್ತಿದ್ದಾರೆ. ಅಪರಾಧಿಗಳೆಂಬಂತೆ ನಮ್ಮ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ನಾವೇನು ಅಪರಾಧಿಗಳಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು. ಮೈಸೂರು ಸ್ಥಳೀಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ, ಉಪಾಧ್ಯಕ್ಷ ಅಬ್ದುಲ್ ಜಾವೀದ್, ಪ್ರಧಾನ ಕಾರ್ಯದರ್ಶಿ ಎಂ. ಸ್ಲಾಮಿ, ಖಜಾಂಚಿ ಎಚ್.ಎಸ್. ಕೃಷ್ಣಮೂರ್ತಿ, ಮುಖಂಡರಾದ ಶಂಕರ್, ಚೌಧರಿ ಇದ್ದರು.

ಬೇಡಿಕೆಗಳೇನು
- ಪ್ರತಿದಿನ ಒಂದು ಲಾರಿ ಒಂದು ಪರ್ಮಿಟ್ ವಿತರಿಸಬೇಕು.
- ಲಾರಿ ಮಾಲೀಕರಿಗೆ ನೇರವಾಗಿ ಮರಳು ಸಾಗಾಣಿಕೆಯ ಪರ್ಮಿಟ್ ನೀಡಬೇಕು.
- ಮರಳು ಲಾರಿ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸುವುದನ್ನು ಕೈಬಿಟ್ಟು, ದಂಡ ವಿಧಿಸಿ ಲಾರಿ ಬಿಡುಗಡೆಗೊಳಿಸಬೇಕು.
- ಕಳೆದ 10 ತಿಂಗಳಿಂದ ಟಿಪ್ಪರ್ ಮರಳು ಸಾಗಾಣಿಕೆ ಮಾಡದಂತೆ ನಿರ್ಬಂಧಿಸಿರುವ ಆದೇಶ ಹಿಂಪಡೆದು, ಟಿಪ್ಪರ್‌ನಲ್ಲಿ ಮರಳು ಸಾಗಿಸಲು ಅವಕಾಶ ಕಲ್ಪಿಸಬೇಕು.
- ಮರಳು ವಾಹನಗಳ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದನ್ನು ಹಿಂಪಡೆದು ನೋಂದಣಿ ಮುಂದುವರಿಸಬೇಕು.
- ಮೈಸೂರು ನಗರದಲ್ಲಿ ಪಿಎಸ್‌ಆರ್, ಗರುಡ ವಾಹನದ ಪೊಲೀಸರಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement