ಪುರಸಭಾ ವ್ಯಾಪ್ತಿಗೆ ಕಲ್ಲಹಳ್ಳಿ: ಸಂಸದ ಧ್ರುವ
ನಂಜನಗೂಡು: ಕಲ್ಲಹಳ್ಳಿ ಗ್ರಾಮವನ್ನು ಪಟ್ಟಣ ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ಚಿಂತನೆ ಇದೆ. ಹಾಗಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ದೊರೆತು, ಗ್ರಾಮವು ಪ್ರಗತಿ ಕಾಣುವುದು ಎಂದು ಸಂಸದ ಆರ್. ಧ್ರುವನಾರಾಯಣ್ ಆಶಯ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರಸವೆಯಂತೆ ಹಲವಾರು ಯೋಜನೆಗಳನ್ನು ತಾಲೂಕಿನಲ್ಲಿ ಅನುಷ್ಠಾನಗೊಳಿಸಿದೆ. ಜನಪರ ಸರ್ಕಾರ ಎಂಬ ಕೀರ್ತಿಗೆ ಪಾತ್ರವಾಗಿದೆ. ಸರ್ಕಾರದ ಸವಲತ್ತುಗಳು ಪ್ರತಿಯೊಬ್ಬರಿಗೂ ತಲುಪಬೇಕೆಂಬ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.
ಕಲ್ಲಹಳ್ಳಿ ಗ್ರಾಮಕ್ಕೆ ಸ್ಥಳೀಯ ಶಾಸಕರೂ ಆದ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಪ್ರದೇಶಾಭಿವೃದ್ಧಿ ಅನುದಾನದಡಿ 10 ಲಕ್ಷ, ಸ್ಥಳೀಯ ಗ್ರಾಪಂನಿಂದ 2.5 ಲಕ್ಷ ಹಾಗೂ ಜುಬಿಲಿಯಂಟ್ ಕಾರ್ಖಾನೆ ವತಿಯಿಂದ 4 ಲಕ್ಷ ಸೇರಿದಂತೆ ಒಟ್ಟು 16.5 ಲಕ್ಷಗಳಲ್ಲಿ ಗ್ರಾಮದ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರ ನೀಡಿದ ಅವರು, ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಜಿಪಂ ಸದಸ್ಯ ಡಾ.ಶಿವರಾಂ, ತಾಪಂ ಸದಸ್ಯ ಶ್ರೀಕಂಠು, ಜುಬಿಲೆಂಟ್ ಕಾರ್ಖಾನೆಯ ಯೋಗಾನಂದ ಇದ್ದರು.